ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಡಾನ್ ಬೋಸ್ಕೊ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಚಂದ್ರವಳ್ಳಿ ಕೆರೆಯ ಹಿಂಬಾಗದ ಪ್ರದೇಶದಲ್ಲಿ ಪರಿಸರ ದಿನಾಚರಣೆಯ ಸಂಬಂಧಿತವಾಗಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
![](https://samagrasuddi.co.in/wp-content/uploads/2024/07/image-110.png)
ಚಿತ್ರದುರ್ಗ : ದಿನಾಂಕ : 15 : 07 : 2024ನೇ ಸೋಮವಾರದಂದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಡಾನ್ ಬೋಸ್ಕೊ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಚಂದ್ರವಳ್ಳಿ ಕೆರೆಯ ಹಿಂಬಾಗದ ಪ್ರದೇಶದಲ್ಲಿ ಪರಿಸರ ದಿನಾಚರಣೆಯ ಸಂಬಂಧಿತವಾಗಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಅರಣ್ಯ ಇಲಾಖೆಯ ಉಪವಲಯದ ರೇಂಜರ್ ಆದ ಶ್ರೀಮತಿ ಉಷಾರಾಣಿ ಹೆಚ್ ರವರು ಮುಖ್ಯಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಹಾಗೂ ನಿರ್ವಹಣೆಯ ಮಹತ್ವದ ಬಗೆಗೆ ಮಾಹಿತಿ ತಿಳಿಸಿದರು. ಅವರು ಪರಿಸರ ಕಾಳಜಿ ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಾರಂಭವಾಗಬೇಕಾಗಿರುವುದು ಪ್ರಸ್ತುತ ಸನ್ನಿವೇಷಕ್ಕೆ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಡಾನ್ ಬೋಸ್ಕೊ ಸಂಸ್ಥೆ ಹಾಗೂ ಸಂಸ್ಥೆಯ ಮುಖ್ಯಸ್ತರು ಪ್ರತಿ ವರ್ಷ ಒಂದಲ್ಲಾ ಒಂದು ಕಾರ್ಯಕ್ರಮಗಳನ್ನು ಹಾಕಿಕೊಂಡು ಪರಿಸರವನ್ನು ಪೋಷಿಸುವ ಕಾರ್ಯದಲ್ಲಿ ನಿರತರಾಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಲ್ಲದೇ 2024 ರ ವಿಶ್ವ ಪರಿಸರ ದಿನದ ಧೈಯವಾದ “ಭೂಮಿ ಮರುಸ್ಥಾಪನೆ.ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ” ಹಾಗೂ ಘೋಷವಾಕ್ಯವಾದ ‘ನಮ್ಮ ಭೂಮಿ, ನಮ್ಮ ಭವಿಷ್ಯ”ದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಲು ತಿಳಿಹೇಳಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಡಾನ್ ಬೋಸ್ಕೋ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 150 ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಳಜಿಯ ಮಹತ್ವವನ್ನು ಮೆರೆದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ರೆ.ಫಾ.ಜಾನ್ ಪಾಲ್, ಮುಖ್ಯೋಪಾಧ್ಯಾಯರಾದ ಶ್ರೀ ಬಸವಂತ ಕುಮಾರ್ ಹಾಗೂ ಶಿಕ್ಷಕ ವೃಂದದವರು ಭಾಗಿಗಳಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.