ಬೆಂಗಳೂರು: ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆಗಳನ್ನು ಪ್ರಕಟಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, ತಿಂಗಳಾಂತ್ಯಕ್ಕೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಯನ್ನೂ ಪ್ರಕಟಿಸಲಿದೆ. ರೋಹಿತ್ ಚಕ್ರತೀರ್ಥ ಗೊಂದಲ ನಿವಾರಣೆ ನೇತೃತ್ವದಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆಯನ್ನು ತಿರಸ್ಕರಿಸಿದ್ದ ಕಾಂಗ್ರೆಸ್ ಸರ್ಕಾರವು ನಿವೃತ್ತ ಪ್ರಾಧ್ಯಾಪಕ ಡಾ.ಮಂಜುನಾಥ ಜಿ.ಹೆಗಡೆ ನೇತೃತ್ವದಲ್ಲಿ 1ರಿಂದ 10ನೇ ತರಗತಿ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ, 9-10ನೇ ತರಗತಿಯ ಕನ್ನಡ ತೃತೀಯ ಭಾಷೆ, 6-10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಗಿದೆ.
ಈ ವರದಿಯನ್ನು ಒಪ್ಪಿಕೊಂಡಿರುವ ಶಿಕ್ಷಣ ಇಲಾಖೆಯು 2024-25ನೇ ಸಾಲಿನಿಂದ ಜಾರಿಗೆ ತಂದಿದೆ. ಈ ಕಾರಣದಿಂದ ಹಿಂದಿನ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೇಳಿದ್ದ ಕೆಲವು ಪಠ್ಯಗಳು ಪರಿಷ್ಕರಣೆಯಾಗಿದ್ದರಿಂದ ತೆರವುಗೊಂಡಿವೆ.
ಈ ಜಾಗದಲ್ಲಿ ಯಾವ ಪಠ್ಯಗಳ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರಿಗೆ ಸ್ಪಷ್ಟನೆ ಮತ್ತು ಮಾಹಿತಿ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಮಾಸಾಂತ್ಯಕ್ಕೆ ಮಾದರಿ ಪ್ರಶ್ನೆಪತ್ರಿಕೆಯನ್ನು ನೀಡಲಿದೆ. ಮಾದರಿ ಬದಲಾವಣೆ ಇಲ್ಲ: ಪ್ರಶ್ನೆಪತ್ರಿಕೆಗಳ ಮಾದರಿ ಹಿಂದಿನ ಸಾಲಿನಂತೆಯೇ ಇರಲಿದೆ. ಪ್ರಶ್ನೆಗಳು ಯಾವ ರೀತಿಯಲ್ಲಿರಲಿವೆ ಎಂಬ ಗೊಂದಲ ನಿವಾರಣೆ, ಪಠ್ಯ ಪರಿಷ್ಕರಣೆಯಿಂದ ಯಾವ ರೀತಿ ಪ್ರಶ್ನೆಪತ್ರಿಕೆ ಬರಬಹುದು ಎಂಬ ಕುತೂಹಲ ಮಕ್ಕಳಲ್ಲಿ ಇರಲಿದೆ. ಇದನ್ನು ತಿಳಿಸುವುದಕ್ಕಾಗಿ ಮಾದರಿ ಪ್ರಶ್ನೆಪತ್ರಿಕೆ ಪ್ರಕಟಿಸಲಾಗುತ್ತದೆ ಎಂದು ಮಂಡಳಿ ಅಧ್ಯಕ್ಷೆ ಎನ್. ಮಂಜುಶ್ರೀ ತಿಳಿಸಿದ್ದಾರೆ.