ಪ್ರತಿಯೊಂದು ಮಗು ಸಹ ದೇಶದ ಆಸ್ತಿ, ಅವರನ್ನ ಸಂರಕ್ಷಿಸಬೇಕು : ಡಾ. ಎಚ್. ಕೆ. ಎಸ್. ಸ್ವಾಮಿ.

ಚಿತ್ರದುರ್ಗ: ಮಕ್ಕಳೇ ಮುಂದಿನ ಪ್ರಜೆಗಳು, ಅವರ ರಕ್ಷಣೆ ಎಲ್ಲರ ಜವಾಬ್ದಾರಿ. ಪಾಶ್ಚಿಮಾತ್ಯ ದೇಶಗಳಲ್ಲಿ ಹುಟ್ಟುವ ಪ್ರತಿಯೊಂದು ಮಗುವನ್ನು ಸಹ, ಆ ದೇಶದ ಪ್ರಧಾನಿ ಅಥವಾ ರಾಷ್ಟçಪತಿ ಆಗುತ್ತದೆ ಎಂದು ಅಭಿಮಾನದಿಂದ ರಕ್ಷಿಸಿ, ಪೋಷಿಸಲಾಗುತ್ತದೆ. ನಮ್ಮ ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗುವನ್ನು ಸಹ ನಾವು ನಿರ್ಲಕ್ಷಿಸಿ, ಯಾವುದಕ್ಕೂ ಬೇಡವಾದ ಮಗು ಎಂಬ ಭಾವನೆಯನ್ನು ಹೊಂದುತ್ತಿದ್ದು, ಅವರ ಭವಿಷ್ಯಕ್ಕೆ ಅಡ್ಡಗಾಲಾಗಿ ನಿಂತು, ಅವರ ನೈಸರ್ಗಿಕ ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ನಾವು ಶಿಕ್ಷಣ ನೀಡಿ, ಮಗುವಿನಲ್ಲಿರುವ ಪ್ರತಿಭೆಯನ್ನ ನಾಶ ಮಾಡುತ್ತಿದ್ದೇವೆ. ಇದನ್ನು ನಾವು ಆದಷ್ಟು ಬದಲಾಯಿಸುವ ಬಗ್ಗೆ ಯೋಚಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿಕೊoಡಿದ್ದಾರೆ.

ಜನಸoಖ್ಯೆ ಹೆಚ್ಚಳದಿಂದ ಬಳಲುತ್ತಿರುವ ದೇಶಗಳಲ್ಲಿ, ಹುಟ್ಟುವ ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದೆ, ಕೇವಲ ಕಟಾಚಾರಕ್ಕೆ ಮಕ್ಕಳನ್ನ ಬೆಳೆಸಿ, ಪೋಷಿಸುವ ಸಮಾಜ ನಿರ್ಮಾಣವಾಗಿದೆ. ಪ್ರತಿಯೊಂದು ಮಗುನಲ್ಲೂ ಅಡಗಿರುವ ಕಲೆಯನ್ನು, ಪ್ರತಿಭೆಯನ್ನ ಹೊರತೆಗೆಯುವಂತಹ ಶಿಕ್ಷಣವನ್ನ ನಾವು ಅಳವಡಿಸಿಕೊಳ್ಳಬೇಕಾಗಿದೆ. ಪ್ರತಿ ಮಗು ಸಹ ವಿಭಿನ್ನವಾಗಿ ಬೆಳೆಯುವ, ಪ್ರಬುದ್ಧ ನಾಗರೀಕನನ್ನಾಗಿಸುವ, ಸಮಾಜ ಸೇವೆ ಸಲ್ಲಿಸುವ ವ್ಯಕ್ತಿಯನ್ನಾಗಿ ಮಾಡಬೇಕಾಗಿದೆ. ಶಿಕ್ಷಣದಲ್ಲಿ ಮಗುವಿಗೆ ಕೈಕಾಲುಗಳ ಬಳಕೆಯನ್ನು ಹೇಳಿಕೊಟ್ಟು, ಹೃದಯವಂತಿಕೆಯನ್ನ ಪೋಷಿಸಿದರೆ, ಮುಂದೆ ಆ ಮಗು ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಬರೀ ತಲೆಗಷ್ಟೇ ಶಿಕ್ಷಣ ನೀಡಿ, ಅಂಕಪಟ್ಟಿಯನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ, ಮಾನವೀಯತೆಯನ್ನು ಮರೆತು, ಮಗು ಸಮಾಜ ವಿರೋಧಿಯಾಗಿ ನಿಲ್ಲುವ ಸಂಭವಗಳಿವೆ ಎಂದರು.

ಹಾಗಾಗಿ ಇಂದು ಸಮಾಜದಲ್ಲಿ ಕೆಟ್ಟ ಘಟನೆಗಳಿಗೆ, ಭ್ರಷ್ಟಾಚಾರಕ್ಕೆ, ಕೊಲೆ ಸುಲಿಗೆ ಅನಾಚಾರಗಳಿಗೆ , ಇವೆ ಮಕ್ಕಳೇ ತಯಾರಾಗಿ ನಿಲ್ಲುತ್ತವೆ. ಪ್ರತಿಯೊಂದು ಮಗು ಹುಟ್ಟುವಾಗ, ವಿಶ್ವಮಾನವನಾಗಿ ಹುಟ್ಟುತ್ತದೆ, ಬೆಳೆಯುತ್ತಾ ಅದನ್ನು ನಾವು ಸ್ವಾರ್ಥಿಯನ್ನಾಗಿ ಮಾಡಿ, ಅಲ್ಪ ಮಾನವನನ್ನಾಗಿ ಮಾಡಿಬಿಡುತ್ತೇವೆ ಎಂದು ಕವಿಗಳು ನುಡಿದಿದ್ದಾರೆ ಎಂದರು.

ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ, ಕೌಶಲ್ಯ ತರಬೇತಿಗಳನ್ನು ನೀಡಿ, ಸ್ವಂತಕಾಲ ಮೇಲೆ ನಿಲ್ಲುವಂತಹ ಶಿಕ್ಷಣವನ್ನು ನೀಡಿ, ಅವರನ್ನ ಪರಿಪೂರ್ಣರನ್ನಾಗಿ ಮಾಡಬೇಕಾಗಿದೆ. ಈಗಲೂ ಬಹಳಷ್ಟು ಮಕ್ಕಳು ಶಾಲೆಗೆ ಬರಲಾರದೆ, ಪರಿಪೂರ್ಣವಾದ ಶಿಕ್ಷಣ ಪಡೆಯಲಾರದೆ, ಬಾಲಕಾರ್ಮಿಕರಾಗಿ, ಕೊಳಚೆ ಪ್ರದೇಶಗಳಲ್ಲಿ, ಭಿಕ್ಷಾಟನೆಯಲ್ಲಿ ತೊಡಗಿರುವುದು ಶೋಚನಿಯ. ಮಕ್ಕಳಿಗೆ ಉತ್ತಮ ಶಾಲೆಗಳನ್ನು, ಉತ್ತಮ ಪರಿಸರವನ್ನ ಒದಗಿಸಿಕೊಟ್ಟು, ಶಿಕ್ಷಣವನ್ನ ಗುಣಾತ್ಮಕವನ್ನಾಗಿ ಮಾಡಿ, ಅವರ ಭವಿಷ್ಯವನ್ನು ರೂಪಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಶಾಲೆಗಳಲ್ಲಿ ಮನೆಗಳಲ್ಲಿ ಯಾವುದೇ ತೊಂದರೆಗಳಿಲ್ಲದoತೆ, ಸರಳತೆಯಲ್ಲೂ ಸಹ ಮಕ್ಕಳನ್ನ ಸಮೃದ್ಧವಾಗಿ ಬೆಳೆಸುವಂತಹ ನಿಟ್ಟಿನಲ್ಲಿ ಪೋಷಕರು ಪ್ರಯತ್ನಿಸಬೇಕಾಗಿದೆ. ಮಕ್ಕಳಿಗೆ ಹಣಕ್ಕಿಂತ ಹೆಚ್ಚಾಗಿ ಪೋಷಕರ ಮತ್ತು ಶಿಕ್ಷಕರ ಸಮಯ ಮತ್ತು ಬಾಂಧವ್ಯ ಮುಖ್ಯವಾಗುತ್ತದೆ. ಮಕ್ಕಳಿಗೋಸ್ಕರ ಪೋಷಕರು, ಸ್ವಲ್ಪ ಸಮಯವನ್ನು ಮೀಸಲಾಗಿಟ್ಟು, ಅವರ ಉತ್ತಮ ಭವಿಷ್ಯವನ್ನು ರೂಪಿಸಿ, ಸಮಾಜಕ್ಕೆ ಕಾಣಿಕೆಯನ್ನಾಗಿ ನೀಡಬೇಕೆಂದು ವಿನಂತಿಸಿಕೊoಡಿದ್ದಾರೆ.

ಬಹಳಷ್ಟು ಶಾಲೆಗಳಲ್ಲಿ ಮಕ್ಕಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ, ಅವರನ್ನ ಸಂಕಷ್ಟಕೀಡು ಮಾಡಿರುವ ಸಂದರ್ಭಗಳು ಉಂಟು. ಅವರಿಗೆ ಬೇಕಾದಂತ ಶೌಚಾಲಯ ವ್ಯವಸ್ಥೆ, ಆಟವಾಡಲು ಸ್ಥಳ, ಕ್ರೀಡಾ ಸಾಮಗ್ರಿಗಳು, ಉತ್ತಮ ಪರಿಸರ, ಗ್ರಂಥಾಲಯ, ಸ್ವಚ್ಛ ಕುಡಿಯುವ ನೀರು, ಸ್ವಚ್ಛ ಪರಿಸರವನ್ನು ನೀಡಬೇಕಾಗುತ್ತದೆ. ಶಿಕ್ಷಣಕ್ಕಾಗಿ ವೆಚ್ಚ ಮಾಡುವ ಹಣವನ್ನು ನಾವು ವ್ಯವಹಾರಿಕ ದೃಷ್ಟಿಯಿಂದ ನೋಡದೆ, ಸೇವಾ ಮನೂಭಾವನೆಯಿಂದ ನೋಡಿ. ಮುಂದಿನ ಭವಿಷ್ಯವನ್ನು ರೂಪಿಸಲು ಪ್ರಯತ್ನಿಸಬೇಕಾಗಿದೆ ಎಂದು ವಿನಂತಿಸಿಕೊoಡಿದ್ದಾರೆ.

Leave a Reply

Your email address will not be published. Required fields are marked *