ಸಹಾಯಕ ಅಧ್ಯಾಪಕ ಅರ್ಹತೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೆ ಸೆಟ್ ಪರೀಕ್ಷೆ 23 ವಿಷಯಗಳಿಗೆ ಬೆಂಗಳೂರಿನಲ್ಲಿ ಮಾತ್ರ ಪರೀಕ್ಷಾ ಕೇಂದ್ರ ಇಟ್ಟಿರುವುದು ಉತ್ತರ ಕರ್ನಾಟಕದಿಂದ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿದೆ. ಬೀದರ್, ಬೆಳಗಾವಿಯ ಅಭ್ಯರ್ಥಿಗಳು ಕನಿಷ್ಠ 600 ಕಿಮೀ ದೂರದಿಂದ ರಾಜಧಾನಿ ತಲುಪಿ ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಆಯಾ ಜಿಲ್ಲಾ ಕೇಂದ್ರಗಳಲ್ಲೇ ಪರೀಕ್ಷೆ….
ಹೈಲೈಟ್ಸ್:
- ಕೆಸೆಟ್ ನ 23 ವಿಷಯಗಳಿಗೆ ರಾಜಧಾನಿ ಬೆಂಗಳೂರಿನಲ್ಲೇ ಪರೀಕ್ಷಾ ಕೇಂದ್ರ ಇಟ್ಟಿರುವ ಕೆಇಎ
- ಉತ್ತರ ಕರ್ನಾಟಕದ ದೂರದೂರುಗಳಿಂದ ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯುವುದು ಕಷ್ಟ
- ಹೀಗಾಗಿ ಆಯಾ ಜಿಲ್ಲಾ ಕೇಂದ್ರಗಳಲ್ಲೇ ಪರೀಕ್ಷೆಗಳನ್ನು ನಡೆಸುವಂತೆ ಪರೀಕ್ಷಾರ್ಥಿಗಳ ಮನವಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಡಿಸೆಂಬರ್ 31ರಂದು ನಡೆಸಲಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್)ಯ 23 ವಿಷಯಗಳನ್ನು ಬೆಂಗಳೂರಿನಲ್ಲಿ ಮಾತ್ರ ಬರೆಯಲು ಅವಕಾಶ ನೀಡಿದ್ದು, ಸಾವಿರಾರು ಅಭ್ಯರ್ಥಿಗಳು ಬೆಂಗಳೂರಿಗೆ ತೆರಳುವ ಶಿಕ್ಷೆ ಅನುಭವಿಸುವಂತಾಗಿದೆ.
ಒಟ್ಟು 41 ವಿಷಯಗಳಿಗೆ ಕೆಸೆಟ್ ಪರೀಕ್ಷೆ ನಡೆಯಲಿದೆ. 1 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 18 ವಿಷಯಗಳಿಗೆ ಬೆಳಗಾವಿ, ಧಾರವಾಡ, ದಾವಣಗೆರೆ, ತುಮಕೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ, ವಿಜಯಪುರ, ಬೆಂಗಳೂರು, ಕಲಬುರಗಿ ಹಾಗೂ ಮಂಗಳೂರಿನ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಆದರೆ, 23 ವಿಷಯಗಳಿಗೆ ಬೆಂಗಳೂರಲ್ಲೇ ಪರೀಕ್ಷೆ ನಡೆಯಲಿದ್ದು, ಬೀದರ್, ಬೆಳಗಾವಿ ಜಿಲ್ಲೆಗಳ ಅಭ್ಯರ್ಥಿಗಳು ಕನಿಷ್ಠ 600 ಕಿಲೋ ಮೀಟರ್ ದೂರ ಪ್ರಯಾಣಿಸಿ ಪರೀಕ್ಷೆ ಬರೆಯಬೇಕಿದೆ. ಕೆಸೆಟ್ ಪರೀಕ್ಷೆ ಬರೆಯುವ ಮೊದಲೇ ಕಠಿಣ ಸವಾಲೊಡ್ಡಿದೆ. ಈ ಮುಂಚೆ ನವೆಂಬರ್ 26ರಂದು ನಿಗದಿಯಾಗಿದ್ದ ಕೆ-ಸೆಟ್ ಪರೀಕ್ಷೆಯನ್ನು ಸಕಾರಣ ನೀಡದೇ ಡಿ.31ರಂದು ನಡೆಸಲು ಕೆಇಎ ನಿರ್ಧರಿಸಿರುವುದೂ ಚರ್ಚೆಗೆ ಗ್ರಾಸವಾಗಿದೆ.
ಈ ವಿಷಯಗಳಿಗೆ ಬೆಂಗಳೂರು ಕೇಂದ್ರ
ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ, ಭೂಗೋಳಶಾಸ್ತ್ರ, ಆಡಳಿತ ಮತ್ತು ನಿರ್ವಹಣೆ, ಪ್ರವಾಸೋದ್ಯಮ, ಮನೋವಿಜ್ಞಾನ, ಅಪರಾಧ ಶಾಸ್ತ್ರ, ಕಾನೂನು, ಸಂಸ್ಕೃತ, ಜಾನಪದ ಸಾಹಿತ್ಯ, ಉರ್ದು, ಸಾರ್ವಜನಿಕ ಆಡಳಿತ, ಪರಿಸರ ವಿಜ್ಞಾನ, ಗೃಹ ವಿಜ್ಞಾನ, ಪುರಾತತ್ತ್ವ ಶಾಸ್ತ್ರ, ಮಾನವ ಶಾಸ್ತ್ರ, ಮರಾಠಿ, ಮಹಿಳಾ ಅಧ್ಯಯನ, ಭಾಷಾ ಜ್ಞಾನ, ಸಂಗೀತ, ದೃಶ್ಯ ಕಲೆ, ತತ್ತ$್ವಶಾಸ್ತ್ರ, ವಿದ್ಯುನ್ಮಾನ ವಿಜ್ಞಾನ, ಮಾನವಶಾಸ್ತ್ರ ವಿಷಯಗಳನ್ನು ತೆಗೆದುಕೊಂಡ ಅಭ್ಯರ್ಥಿಗಳು ಬೆಂಗಳೂರಿನಲ್ಲೇ ಪರೀಕ್ಷೆ ಬರಯಬೇಕಾಗಿದೆ.
ಪರೀಕ್ಷಾರ್ಥಿಸ್ನೇಹಿ ನೆಟ್ ಪರೀಕ್ಷೆ
ಯುಜಿಸಿಯಿಂದ ಪ್ರತಿ ವರ್ಷ ಎರಡು ಸಲ ನೆಟ್ ಪರೀಕ್ಷೆ ನಡೆಯುತ್ತದೆ. ವಿವಿ ವ್ಯಾಪ್ತಿಯಲ್ಲೇ ಈ ಪರೀಕ್ಷೆಗೆ ವ್ಯವಸ್ಥೆ ಇರುತ್ತದೆ. ಈ ಮೊದಲು ಯುಜಿಸಿ ಮಾರ್ಗಸೂಚಿ ಪ್ರಕಾರ ಪ್ರತಿ ಜಿಲ್ಲೆಯಲ್ಲೂ ಪರೀಕ್ಷೆ ಬರೆಯಲು ಅವಕಾಶ ಇತ್ತು. ಮೈಸೂರು ವಿಶ್ವವಿದ್ಯಾಲಯದಿಂದ ನೆಟ್ ಪರೀಕ್ಷೆ ನಡೆಸುತ್ತಿದ್ದ ವೇಳೆ ಆಯಾ ಜಿಲ್ಲೆಯಲ್ಲೇ ಪರೀಕ್ಷೆ ನಡೆಸಿದ ಉದಾಹರಣೆಯಿದೆ.
ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 23 ವಿಷಯಗಳಿಗೆ ರಾಜ್ಯ ರಾಜಧಾನಿಯಲ್ಲಿ ಪರೀಕ್ಷೆ ನಡೆಸುವ ಮೂಲಕ ಅಭ್ಯರ್ಥಿಗಳ ನೆಮ್ಮದಿಗೆ ಭಂಗ ತಂದಿದೆ. ಕೆಇಎ ನಡೆಯಿಂದ ರಾಜ್ಯದ ಗಡಿ ಭಾಗ ಸೇರಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾಕೇಂದ್ರದಲ್ಲೇ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರಕಾರ ನಿರ್ದೇಶನ ನೀಡಬೇಕು ಎಂಬುದು ಅಭ್ಯರ್ಥಿಗಳ ಒತ್ತಾಸೆಯಾಗಿದೆ.
ಈ ಬಗ್ಗೆ ವಿಜಯ ಕರ್ನಾಟಕಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯುಕ್ತೆ ರಮ್ಯಾ ಎಸ್, ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದು, ಕೆಲವು ವಿಷಯಗಳಿಗೆ ಕಡಿಮೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರಿಂದ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆ ನಡೆಸುವುದು ಕಷ್ಟ. ಹೀಗಾಗಿ ಬೆಂಗಳೂರಿನಲ್ಲೇ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳ ವಿವರ
- 2021ರಲ್ಲಿ 83,907 ಅರ್ಜಿ, 69,857 ಹಾಜರ್
- ಒಟ್ಟು 4,779 ಅಭ್ಯರ್ಥಿಗಳು ಉತ್ತೀರ್ಣ
- 2,309 ಮಹಿಳೆಯರು
- 2,470 ಪುರುಷರು
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0