Summer Cooling Tips:ಬೇಸಿಗೆಯ ಬಿಸಿಲು ತೀವ್ರವಾಗಿದ್ದು, ಈ ಸಮಯದಲ್ಲಿ ಮನೆಯನ್ನು ಎಸಿ ಇಲ್ಲದೇ ನೈಸರ್ಗಿಕ ತಂಪಾಗಿಟ್ಟುಕೊಳ್ಳಲು ಈ ಟಿಪ್ಸ್ಗಳನ್ನು ಅನುಸರಿಸಬಹುದು. ಕೇವಲ ತೆಂಗಿನಕಾಯಿ, ಐಸ್ ಕ್ಯೂಬ್, ಉಪ್ಪು ಬಳಸಿಯೇ ನಿಮ್ಮ ಮನೆಯನ್ನು ತಂಪಾಗಿಸಬಹುದು.

ದೇಶದಲ್ಲೆಡೆ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಈಗಾಗಲೇ ಬೇಸಿಗೆಯ ಬಿಸಿ ಜನರಿಗೆ ತಟ್ಟಿದ್ದು, ಬಿಸಿಲ ಬೇಗೆಯನ್ನು ಸಹಿಸಲಾಗದೇ ಕಷ್ಟಪಡುವಂತಾಗಿದೆ. ಮಧ್ಯಾಹ್ನದ ಸಮಯದಲ್ಲಂತೂ ಧಗೆ ವಿಪರೀತ ಏರಿಕೆ ಆಗುತ್ತಿದೆ. ಈ ಹೊತ್ತಲ್ಲಿ ಮನೆಯಿಂದ ಹೊರಗೆ ಬಂದರೆ ಸಾಕು ನೆತ್ತಿ ಸುಡುವ ಬಿಸಿಲು, ಹಾಗಂತ ಮನೆಯೊಳಗೆ ಇದ್ದರೆ ಮೈಯೆಲ್ಲ ಉರಿಯುವ ಸೆಕೆ. ಹೀಗೆ ಬೇಸಿಗೆ ಎಂದರೆ ಒಂಥರಾ ಹಿಂಸೆ ಎನಿಸಿ ಬಿಡುತ್ತದೆ. ಮುಂಬರುವ ದಿನಗಳಲ್ಲಿ ಸುಡು ಬಿಸಿಲಿನ ಬೇಗೆ ತೀವ್ರವಾಗಿ ಕಾಡುವ ಆತಂಕ ವ್ಯಕ್ತವಾಗುತ್ತಿದೆ.
ಈ ರೀತಿ ಹೊರಗಷ್ಟೇ ಅಲ್ಲದೇ ಮನೆಯ ಒಳಗೂ ಕಾವು ಸಹಿಸಲಾಗದೇ ಜನ ಪರದಾಡುತ್ತಿದ್ದಾರೆ. ಕೆಲ ಮಂದಿ ಕೂಲ್ ಆಗಿರಲು ಎಸಿ ಬಳಸುತ್ತಾರೆ. ಆದರೆ ಎಲ್ಲರೂ ಎಸಿ ಕೊಳ್ಳುವಷ್ಟು ಶಕ್ತರಾಗಿರುವುದಿಲ್ಲ. ಹೀಗಾಗಿ ಶಾಖವನ್ನು ನಿಯಂತ್ರಿಸಲು ಹಲವಾರು ಇತರ ಮಾರ್ಗಗಳಿಗಾಗಿ ಹುಡುಕಾಡುತ್ತಾ ಒದ್ದಾಡುತ್ತಿದ್ದಾರೆ.
ಆದರೆ ಕೆಲವು ಸಿಂಪಲ್ ನ್ಯಾಚುರಲ್ ಟಿಪ್ಸ್ ಮೂಲಕವೇ ನಿಮ್ಮ ಮನೆಯನ್ನು ಕೂಲ್ ಆಗಿರಿಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದ್ಯಾ? ಹೌದು, ಇದಕ್ಕಾಗಿ ನೀವು ಹಣ ಖರ್ಚು ಮಾಡುವ ಅಗತ್ಯವೂ ಇಲ್ಲ. ಹೆಚ್ಚು ಶ್ರಮ ಪಡುವ ಅವಶ್ಯಕತೆಯೂ ಇಲ್ಲ. ಈ ಕೆಳಗೆ ನೀಡಲಾಗಿರುವ ಟಿಪ್ಸ್ ಫಾಲೋ ಮಾಡಿದ್ರೆ ಸಾಕು.
ಒಂದು ದೊಡ್ಡ ಬಟ್ಟಲಿನಲ್ಲಿ ಎರಡು ತೆಂಗಿನಕಾಯಿ ಪೀಸ್ಗಳನ್ನು ಇರಿಸಿ ಮತ್ತು ಅವು ಮುಳುಗುವಷ್ಟು ನೀರು ಸುರಿಯಿರಿ. ನಂತರ ಇದನ್ನು ಫ್ರಿಡ್ಜ್ನಲ್ಲಿಟ್ಟು, 8 ಗಂಟೆಗಳ ಕಾಲ ಫ್ರೀಜ್ ಆಗಲು ಬಿಡಿ. ಬಳಿಕ ರಾತ್ರಿ ಮಲಗುವ ಮುನ್ನ ಇದನ್ನು ಹೊರತೆಗೆದು ನಿಮ್ಮ ಮಲಗುವ ಕೋಣೆಯಲ್ಲಿ ಇರಿಸಿಕೊಳ್ಳಿ. ಫ್ಯಾನ್‌ನಿಂದ ಗಾಳಿಯು ಗ್ರಿಲ್‌ಗೆ ತಾಗಿದಾಗ ಇದು ಕೋಣೆಯಾದ್ಯಂತ ನೈಸರ್ಗಿಕವಾಗಿಯೇ ತಂಪಾಗಿಸುತ್ತದೆ.
ಸಂಜೆ ಹೊತ್ತು ಒಂದು ದೊಡ್ಡ ಬಕೆಟ್‌ಗೆ ಹೆಚ್ಚು ನೀರನ್ನು ಸುರಿದು ಅದರಲ್ಲಿ 4-5 ಐಸ್ ಕ್ಯೂಬ್‌ಗಳನ್ನು ಹಾಕಿ. ಇದರಿಂದ ಮನೆಯ ಸಂಪೂರ್ಣ ನೆಲವನ್ನು ಒರೆಸಿ. ಇದು ಟೈಲ್ಸ್ ಅಥವಾ ನೆಲವನ್ನು ಹೆಚ್ಚು ಸಮಯದವರೆಗೆ ತಂಪಾಗಿರಿಸುತ್ತದೆ. ಅಲ್ಲದೇ ಇದರಿಂದ ಮನೆಯಲ್ಲಿನ ತಾಪಮಾನ ಕಡಿಮೆಯಾಗುತ್ತದೆ ಮತ್ತು ರಾತ್ರಿ ಸಹ ಮಲಗಲು ತಂಪಾಗಿರುತ್ತದೆ.
ಹೆಚ್ಚು ವಿದ್ಯುತ್ ಬಿಲ್ ಬರದೇ ನಿಮ್ಮ ಮನೆಯ ಫ್ರಿಡ್ಜ್ ಆನ್ ಆಗಿಯೇ ಇರಿಸಲು ಉತ್ತಮ ಮಾರ್ಗವೆಂದರೆ ಉಪ್ಪು ಬಳಸುವುದು. ಸ್ವಲ್ಪ ಪ್ರಮಾಣದಷ್ಟು ಅಂದರೆ ಟೇಬಲ್ ಸ್ಪೂನ್ಗಳಷ್ಟು ಉಪ್ಪನ್ನು ತೆಗೆದು ಕೊಂಡು ಅದನ್ನು ಫ್ರಿಡ್ಜ್ ಒಳಗಿನ ಎಲ್ಲಾ ಮೂಲೆಗಳಲ್ಲಿ ಸಿಂಪಡಿಸಿ. ಇದು ಹೆಚ್ಚು ಮಂಜುಗಡ್ಡೆ ಸಂಗ್ರಹವಾಗುವುದನ್ನು ತಡೆಯುತ್ತದೆ ಮತ್ತು ಫ್ರಿಡ್ಜ್ ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
ಬೇಸಿಗೆಯಲ್ಲಿ ಮನೆಯೊಳಗೆ ಅತಿಯಾದ ಶಾಖ ಉಂಟಾಗಲು ಬಾಗಿಲು ಮತ್ತು ಕಿಟಕಿಗಳು ಕಾರಣವಾಗಿರಬಹುದು. ಹಾಗಾಗಿ ಮಧ್ಯಾಹ್ನದ ಹೊತ್ತು ಮನೆಯೊಳಗೆ ನೇರ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಿ. ಸಂಜೆ ಮಾತ್ರ ಕಿಟಕಿಗಳನ್ನು ತೆರೆದಿಡಿ ಮತ್ತು ಇದರಿಂದ ಬರುವ ನೈಸರ್ಗಿಕ ಗಾಳಿಯನ್ನು ಆನಂದಿಸಿ.
ಹೀಗೆ ಈ ಸಿಂಪಲ್ ಟಿಪ್ಸ್ಗಳನ್ನು ಫಾಲೋ ಮಾಡುವ ಬೇಸಿಗೆಯಲ್ಲೂ ಎಸಿ ಇಲ್ಲದೇ ನಿಮ್ಮ ಮನೆಯನ್ನು ತಂಪಾಗಿಸಿಕೊಳ್ಳಬಹುದು.