ಕಲ್ಲುಗಣಿಗಾರಿಕೆ ವಿರೋಧಿಸಿ ರೈತಸಂಘ ಪ್ರತಿಭಟನೆ.

ಚಿತ್ರದುರ್ಗ ಮಾ.27

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಮೊಳಕಾಲ್ಮೂರು ತಾಲ್ಲೂಕು ಮರ್ಲಹಳ್ಳಿಯಲ್ಲಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡುವ ಷಡ್ಯಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ರೈತಸಂಘ-ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಮುಷ್ಕರ ನಡೆಸಿದ ನೂರಾರು ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕೂಡಲೇ ಜಿಲ್ಲಾಡಳಿತ ಗಣಿಗಾರಿಕೆಗೆ ಅನುಮತಿ ನೀಡುವುದಿಲ್ಲವೆಂಬ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಮೊಳಕಾಲ್ಮೂರು ತಾಲ್ಲೂಕಿನಲ್ಲ ಹಾದು ಹೋಗಿರುವ ಹೆದ್ದಾರಿಗಳ ಬಂದ್ ಚಳವಳಿ, ತಾಲ್ಲೂಕು, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ. ಇದಕ್ಕೆ ಆಡಳಿತ ವರ್ಗ ಅವಕಾಶ ನೀಡಬಾರದು ಎಂದು ರೈತಮುಖಂಡರು ಕೋರಿದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಬಯಲುಸೀಮೆ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶಗಳೇ ಅಂತರ್ಜಲ ರಕ್ಷಣೆಯ ಜಲಪಾತ್ರೆಗಳು. ಅವುಗಳ ರಕ್ಷಣೆ ಸರ್ಕಾರದ ಹೊಣೆಗಾರಿಕೆ. ಆದರೆ, ಅಂತಹ ಅಮೂಲ್ಯ ಸಂಪತ್ತಿಗೆ ಕನ್ನ ಹಾಕುವ ದುಷ್ಕøತ್ಯ ಇಡೀ ಜೀವಸಂಕುಲವನ್ನೇ ಸಂಕಷ್ಟಕ್ಕೆ ಸಿಲುಕಿಸುವ ನಡೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಗಡಿಪ್ರದೇಶ, ಹನಿ ನೀರಿಗೂ ಪರದಾಡುವ ಸ್ಥಿತಿಯಲ್ಲಿರುವ ಮೊಳಕಾಲ್ಮೂರು ಜನರ ಬದುಕಿಗೆ ಕಲ್ಲುಬಂಡೆಗಳೇ ಜೀವನಾಧಾರ. ಮರ್ಲಹಳ್ಳಿಯಲ್ಲಿ ರೈತರು ಕೊಳವೆಬಾವಿ ಮೂಲಕ ಸಣ್ಣದಾಗಿ ನೀರಾವರಿ ಕೈಗೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ಕೃಷಿಯನ್ನು ಅನೇಕ ಜೀವಿಗಳು ಅವಲಂಬಿಸಿವೆ. ಜೊತೆಗೆ ನೂರಾರು ಜನರ ಜೀವನ ಅಡಕವಾಗಿದೆ ಎಂದರು.

ಒಂದೇಡೆ ತಾಲ್ಲೂಕನ್ನು ನೀರಾವರಿ ಪ್ರದೇಶವನ್ನಾಗಿಸುವ ಕೆಲಸ ಮಾಡುತ್ತಿಲ್ಲ. ಒಂದೇಡೆ ರೈತರು ಕಟ್ಟಿಕೊಂಡಿರುವ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಈ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆಗೆ ಯಾವುದೇ ಒತ್ತಡಕ್ಕೂ ಮಣಿದು ನೀಡಬಾರದು. ಒಂದು ವೇಳೆ ಅಸಡ್ಡೆ ತೋರಿದರೆ ಅನಿವಾರ್ಯವಾಗಿ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ಮರ್ಲಹಳ್ಳಿ ರವಿಕುಮಾರ್ ಮಾತನಾಡಿ, ಯಾವುದೇ ಕಾರಣಕ್ಕೂ ಗಣಿಗಾರಿಕೆ ಅನುಮತಿ ನೀಡಲು ನಾವು ಅವಕಾಶ ನೀಡುವುದಿಲ್ಲ. ಒಂದು ವೇಳೆ ಅನುಮತಿ ನೀಡಿದಲ್ಲಿ ಗಣಿಗಾರಿಕೆ ಪ್ರದೇಶಕ್ಕೆ ಸ್ಥಳೀಯ ಗ್ರಾಮಸ್ಥರು ನುಗ್ಗಿ ಯಂತ್ರಗಳನ್ನೇ ಧ್ವಂಸ ಮಾಡಲಿದ್ದಾರೆ. ಈಗಾಗಲೇ ಜನರು ರೊಚ್ಚಿಗೆದ್ದಿದ್ದು, ಅದನ್ನು ತಣಿಸಲು ಜಿಲ್ಲಾಡಳಿತ ತಕ್ಷಣವೇ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಮೊಳಕಾಲ್ಮೂರು ತಾಲ್ಲೂಕು, ಮರ್ಲಹಳ್ಳಿ ಬಳಿಕ ದೂರದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದು ನ್ಯಾಯ ಕೇಳುತ್ತಿದ್ದೇವೆ. ನಮ್ಮ ಕೂಗು,ಆತಂಕ, ಭವಿಷ್ಯದಲ್ಲಿ ಕೃಷಿ ಹಾಗೂ ಜೀವಸಂಕುಲಗಳ ಮೇಲಾಗುವ ಹಾನಿ ಕುರಿತು ದೂರದೃಷ್ಟಿ ಜಿಲ್ಲಾಡಳಿತ ಪ್ರದರ್ಶಿಸಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಹೋರಾಟವನ್ನು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಕೃಷಿಕರ ಬದುಕು ಉನ್ನತಗೊಳಿಸಲು ಸರ್ಕಾರ ಪ್ರಯತ್ನಿಸಬೇಕು. ಆದರೆ, ಆಡಳಿತ ವರ್ಗ ರೈತರ ಬದುಕಿಗೆ ಬರೆ ಎಳೆಯುವ ಕೆಲಸ ಮಾಡುತ್ತಿರುವುದು ಆತಂಕದ ವಿಷಯ ಎಂದರು.

ಅನ್ನದಾತ ದೇಶದ ಬೆನ್ನೇಲುಬು ಎಂಬ ಮಾತು ಅರಿತು ಸರ್ಕಾರ ಕೃಷಿಪರ ಯೋಜನೆಗಳನ್ನು ಜಾರಿಗೊಳಿಸಬೇಕು. ಆದರೆ, ಬೆಳೆ ವಿಮೆ, ನೀರಾವರಿ ಸೌಲಭ್ಯ, ಅತಿವೃಷ್ಠಿ-ಅನಾವೃಷ್ಠಿ ಸಂದರ್ಭ ಪರಿವಹಾರ ವಿತರಣೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಒಂದು ವೇಳೆ ಅನ್ನದಾತ ಕೈಕಟ್ಟಿ ಕುಳಿತರೆ ಇಡೀ ಜಗತ್ತು ಹಸಿವಿನಿಂದ ಬಳಲಿದೆ. ಈ ಸತ್ಯ ಅರಿತು ಸರ್ಕಾರಗಳು ಕೃಷಿ ವಿರುದ್ಧ ನೀತಿ ಕೈಬಿಡಬೇಕು. ಮೊಳಕಾಲ್ಮೂರು ತಾಲ್ಲೂಕು ಮರ್ಲಹಳ್ಳಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ಮುಖಂಡರಾದ ದಂಡಿ ಸೂರಯ್ಯ, ರಾಜ, ತಿಪ್ಪೇಸ್ವಾಮಿ, ಬಸವರಾಜ್ ಹಿರೇಹಳ್ಳಿ, ಮೀಸೆ ತಿಪ್ಪೇಸ್ವಾಮಿ, ಚಂದ್ರಣ್ಣ, ವೆಂಕಟೇಶ್, ತಿಮ್ಮಯ್ಯ, ಪಾಲಯ್ಯ, ನಾಗರಾಜ್, ನಾಗೇಂದ್ರ, ಬಸವರಾಜ್, ಶರಣಪ್ಪ, ಪೂಲಯ್ಯ,ತಿಪ್ಪಯ್ಯ, ಅಂಜಿನಿ, ಸೂರಪಾಪಯ್ಯ, ಮೂರ್ತಿ, ಕಾಂತರಾಜ್, ಉಮೇಶ್, ಲೋಕೇಶ್, ಗೋವಿಂದ, ಬೋರಸ್ವಾಮಿ, ಮಂಜಣ್ಣ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *