ಭಾರತದಲ್ಲಿ ಎಟಿಎಂಗಳು ಮುಚ್ಚಲ್ಪಡುತ್ತವೆ ಎಂಬ ವದಂತಿ ಹಬ್ಬಿದೆ. ಸರ್ಕಾರವು ಈ ವದಂತಿಯನ್ನು ತಳ್ಳಿಹಾಕಿದೆ. ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನವು ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಸರ್ಕಾರ ಹೇಳಿದೆ. ಜನರು ವದಂತಿಗಳಿಗೆ ಕಿವಿಗೊಡದಂತೆ ಸೂಚಿಸಲಾಗಿದೆ. ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಪರಿಶೀಲಿಸುವಂತೆ ವಿನಂತಿಸಲಾಗಿದೆ. ಸೈಬರ್ ದಾಳಿಯ ಬಗ್ಗೆ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ.
ಹೈಲೈಟ್ಸ್:
- ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ನಕಲಿ ಸುದ್ದಿಗಳು ವೈರಲ್.
- ಭಾರತದಲ್ಲಿ ಎಟಿಎಂಗಳು 2 – 3 ದಿನಗಳವರೆಗೆ ಮುಚ್ಚಲ್ಪಡುತ್ತವೆ ಎಂಬ ವದಂತಿ.
- ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡುತ್ತವೆ ಎಂದ ಸರ್ಕಾರ.

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತದಲ್ಲಿ ಎಟಿಎಂಗಳು 2 – 3 ದಿನಗಳವರೆಗೆ ಬಂದ್ ಆಗುತ್ತವೆ ಎಂಬ ವದಂತಿ ಹರಡುತ್ತಿದೆ. ಆದರೆ, ಈ ಮಾಹಿತಿಯನ್ನು ಭಾರತ ಸರ್ಕಾರ ತಳ್ಳಿ ಹಾಕಿದ್ದು, ಇದು ನಕಲಿ ಎಂದು ಸ್ಪಷ್ಟಪಡಿಸಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಾಗರೀಕರಿಗೆ ದಾಳಿ ಮತ್ತು ಮುಷ್ಕರಗಳಂತಹ ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಲು ತರಬೇತಿ ನೀಡಲಾಗುತ್ತಿದೆ. ಈ ಬೆನ್ನಲ್ಲೆ ಎಟಿಎಂಗಳು ಬಂದ್ ಆಗುತ್ತವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೈಬರ್ ದಾಳಿಯ ನಂತರ ಸರ್ಕಾರವು ಕೆಲವು ದಿನಗಳವರೆಗೆ ಎಟಿಎಂಗಳನ್ನು ಮುಚ್ಚಲಿದೆ. ಆನ್‌ಲೈನ್ ವಹಿವಾಟಿಗೂ ಅಡಚಣೆಯಾಗಲಿ ಎಂದು ವ್ಯಾಟ್ಸಪ್ ಫೇಸ್‌ಬುಕ್ ಟ್ವೀಟರ್‌ಗಳಲ್ಲಿ ಸಂದೇಶ ಹರಿದಾಡುತ್ತಿತ್ತು. ಈ ಹಿನ್ನೆಲೆ ಸರ್ಕಾರ ಸ್ಪಷ್ಟನೆ ನೀಡಿದೆ.
ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಣೆ
“ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಪಾಕಿಸ್ತಾನವು ತಪ್ಪು ಮಾಹಿತಿಯನ್ನು ಹರಡುವ ಮೂಲಕ ಭಾರತದಲ್ಲಿ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಸಾರ್ವಜನಿಕರು ನಂಬಬಾರದು ” ಎಂದು ಸರ್ಕಾರ ತಿಳಿಸಿದೆ.
ವದಂತಿಗೆ ಕಿವಿಗೊಡಬೇಡಿ ಎಂದ ಭಾರತ ಸರ್ಕಾರ
ಪಹಲ್ಗಾಮ್ ದಾಳಿಗೆ ಭಾರತ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಉತ್ತರ ನೀಡಿತ್ತು. ಇದು ಎರಡು ರಾಷ್ಟ್ರಗಳ ನಡುವೆ ಯುದ್ಧ ಭೀತಿಗೆ ಕಾರಣವಾಗಿದೆ. ಪಾಕಿಸ್ತಾನವು ವದಂತಿಗಳ ಮೂಲಕ ಭಾರತದ ಜನರನ್ನು ಭಯ ಪಡಿಸಲು ಮುಂದಾಗಿದ್ದಾರೆ. ” ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಪರಿಶೀಲಿಸುವಂತೆ ” ಸರ್ಕಾರವು ಮನವಿ ಮಾಡಿದೆ.
ಎಟಿಎಂ ಬಂದ್ ಬಗ್ಗೆ ವ್ಯಾಟ್ಸಪ್ ನಕಲಿ ಸಂದೇಶಗಳೇನು?
- ಇಂಡಿಯಾ VS ಪಾಕಿಸ್ತಾನ ಇಂಪಾರ್ಟೆಂಟ್ ಎಂದು ವಾಟ್ಸಾಪ್ ಸಂದೇಶವು ಪ್ರಾರಂಭವಾಗುತ್ತದೆ. ” ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಸೈಬರ್ ದಾಳಿಯಿಂದಾಗಿ ಭಾರತದಾದ್ಯಂತ ಎಟಿಎಂಗಳನ್ನು ಮುಚ್ಚಲಾಗುವುದು “.
- “ಮುಂದಿನ 2 – 3 ದಿನಗಳವರೆಗೆ ಎಟಿಎಂಗಳನ್ನು ಮುಚ್ಚಲಾಗುವುದು “
- “ಸೈಬರ್ ದಾಳಿ ಸಾಧ್ಯತೆ ಇದೆ ಯುದ್ಧದ ವೇಳೆ ಆನ್‌ಲೈನ್ ವಹಿವಾಟುಗಳನ್ನು ಮಾಡುವುದನ್ನು ತಪ್ಪಿಸಿ”
ಪಿಐಬಿಯಿಂದಲೂ ಸ್ಪಷ್ಟನೆ
ಭಾರತದಾದ್ಯಂತ ಎಟಿಎಂಗಳನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿಯನ್ನು ಪಿಐಬಿಯ ಸತ್ಯ – ಪರಿಶೀಲನಾ ಘಟಕವು ಕೂಡ ಪರಿಶೀಲನೆ ನಡೆದಿದೆ. ಇದೊಂದು ನಕಲಿ ಸುದ್ದಿ ನಂಬ ಬೇಡಿ ಎಂದು ಪಿಐಬಿ ಜನರಿಗೆ ತಿಳಿಸಿದೆ. ಇವುಗಳ ಜತೆಗೆ ಐಎನ್‌ಎಸ್ ವಿಕ್ರಾಂತ್, ಎಸ್ 400 ಕುರಿತ ಹಲವು ನಕಲಿ ವಿಡಿಯೋಗಳು ಕೂಡ ಹರಿದಾಡುತ್ತಿವೆ. ಅವುಗಳನ್ನು ನಂಬಬೇಡಿ ಎಂದು ಪಿಐಬಿ ತಿಳಿಸಿದೆ.
Source : Vijayakarnataka