ಕೇರಳದಲ್ಲಿ ಆಘಾತಕಾರಿ ಘಟನೆ ನಡೆದಿದೆ. ತೂಕ ಇಳಿಸಿಕೊಳ್ಳುವ ಆತುರದಲ್ಲಿ ವಿದ್ಯಾರ್ಥಿನಿ ಪ್ರಾಣ ಬಿಟ್ಟಿದ್ದಾಳೆ. ಯುಟ್ಯೂಬ್ ಮೂಲಕ ಡಯಟ್ ಫಾಲೋ ಮಾಡ್ತಿದ್ದ ಹುಡುಗಿಗೆ ಕಾಡಿದ ಸಮಸ್ಯೆ ಏನು?

ಈಗಿನ ದಿನಗಳಲ್ಲಿ ಜನರು ಡಾಕ್ಟರ್ ನಂಬೋದಕ್ಕಿಂತ ಸೋಶಿಯಲ್ ಮೀಡಿಯಾ (Social media), ಗೂಗಲ್ ಹೆಚ್ಚು ನಂಬ್ತಾರೆ. ಸಣ್ಣ ನೋವಾಗ್ಲಿ ಇಲ್ಲ ದೊಡ್ಡ ಖಾಯಿಲೆ ಬರಲಿ ಮೊದಲು ಗೂಗಲ್ ಅಥವಾ ಯುಟ್ಯೂಬ್ ನಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸ್ತಾರೆ. ಅದು ಸಾಧ್ಯವಾಗಿಲ್ಲ ಎಂದಾಗ ವೈದ್ಯರ ಬಳಿ ಓಡ್ತಾರೆ. ಸೋಶಿಯಲ್ ಮೀಡಿಯಾ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಪುಕ್ಕಟ್ಟೆ ಸಲಹೆ ನೀಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಆರೋಗ್ಯ, ಆಹಾರ, ಡಯಟ್ (Diet) ಅಂತ ನಾನಾ ವಿಡಿಯೋ, ಪೋಸ್ಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಬರ್ತಾನೆ ಇರುತ್ವೆ. ಅದನ್ನು ನಂಬಿ, ಡಯಟ್ ಫಾಲೋ ಮಾಡಿದ ಹುಡುಗಿಯೊಬ್ಬಳು ಪ್ರಾಣ ಬಿಟ್ಟಿದ್ದಾಳೆ. ತೂಕ ಇಳಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಫಾಲೋ ಮಾಡ್ತಿದ್ದ ಹುಡುಗಿ ಈಗ ಜೀವ ಕಳೆದುಕೊಂಡಿದ್ದಾಳೆ. ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮಟ್ಟನೂರಿನ ಪಳಸ್ಸಿ ರಾಜ ಎನ್‌ಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಪೂರ್ವ ವಿದ್ಯಾರ್ಥಿ ಎಂ. ಶ್ರೀನಂದಾ, ಮೃತ ಹುಡುಗಿ.
ತೂಕ ಇಳಿಸಿಕೊಳ್ಳಲು ಶ್ರೀನಂದಾ ನಿರಂತರ ಪ್ರಯತ್ನ ನಡೆಸುತ್ತಿದ್ದರು. ತನ್ನ ತೂಕ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ 18ರ ಶ್ರೀನಂದಾ ಊಟ ಕೂಡ ಬಿಟ್ಟಿದ್ದರು. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಂದಾ ಸಾವನ್ನಪ್ಪಿದ್ದಾರೆ. ಶ್ರೀನಂದಾಗೆ ತೂಕ ಹೆಚ್ಚಾಗುವ ಭಯ ಇತ್ತು. ಯುಟ್ಯೂಬ್ ವಿಡಿಯೋವನ್ನು ಫಾಲೋ ಮಾಡಿ, ಡಯಟ್ ಮಾಡ್ತಿದ್ದರು. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಯಾಮ ಮಾಡುತ್ತಿದ್ದರು. ತೂಕ ಹೆಚ್ಚಾಗುವ ಭಯದಲ್ಲಿ ಘನ ಆಹಾರವನ್ನು ಬಿಟ್ಟಿದ್ದರು. ಲಿಕ್ವಿಡ್ ಆಹಾರವನ್ನು ಮಾತ್ರ ಸೇವನೆ ಮಾಡ್ತಿದ್ದ ಶ್ರೀನಂದಾ, ಹಸಿವಿನಿಂದ ಸಾಯುವ ಸ್ಥಿತಿ ಬಂದಿದೆ.
ಅನೇಕ ದಿನಗಳ ಹಿಂದೆಯೇ ಶ್ರೀನಂದಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಶ್ರೀನಂದಾ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ನಾಗೇಶ್ ಪ್ರಭು, ಶ್ರೀನಂದಾ ಅನೋರೆಕ್ಸಿಯಾ ನರ್ವೋಸಾ (anorexia nervosa)ದಿಂದ ಬಳಲುತ್ತಿದ್ದರು ಎಂದಿದ್ದಾರೆ. ಇದು ತೂಕ ಹೆಚ್ಚಾಗುವ ತೀವ್ರ ಭಯದಿಂದ ಉಂಟಾಗುವ ಅಸ್ವಸ್ಥತೆಯಾಗಿದೆ. ಶ್ರೀನಂದಾ ಸುಮಾರು ಆರು ತಿಂಗಳ ಹಿಂದೆ ಯುಟ್ಯೂಬ್ ನೋಡಿ ಈ ಡಯಟ್ ಶುರು ಮಾಡಿದ್ದರು. ಶ್ರೀನಂದಾಗೆ ಮೊದಲೇ ಚಿಕಿತ್ಸೆ ನೀಡುವಂತೆ ಕುಟುಂಬಸ್ಥರಿಗೆ ಆಪ್ತರು ಸಲಹೆ ನೀಡಿದ್ದರು. ಆದ್ರೆ ಕುಟುಂಬಸ್ಥರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಅನೋರೆಕ್ಸಿಯಾ ನರ್ವೋಸಾ ಪ್ರಚಲಿತವಾಗಿದೆ. ಅದ್ರೆ ಕೇರಳದಲ್ಲಿ ಇದು ಅಪರೂಪ ಎಂದು ವೈದ್ಯರು ಹೇಳಿದ್ದಾರೆ.
ಅನೋರೆಕ್ಸಿಯಾ ನರ್ವೋಸಾ ಅಂದ್ರೇನು? : ಅನೋರೆಕ್ಸಿಯಾ ನರ್ವೋಸಾ ತಿನ್ನುವ ಅಸ್ವಸ್ಥತೆಯಾಗಿದೆ. ಅನೋರೆಕ್ಸಿಯಾ ಇರುವ ಜನರು ತಮ್ಮ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ತಮ್ಮ ತೂಕವನ್ನು ಸಾಮಾನ್ಯವಾಗಿ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಿಸಿಕೊಳ್ಳಲು ಹೆಣಗಾಡುತ್ತಾರೆ. ಅನೋರೆಕ್ಸಿಯಾ ಸಮಸ್ಯೆ ಹೆಚ್ಚಾಗಿ ಹದಿಹರೆಯದಲ್ಲಿ ಶುರುವಾಘುತ್ತದೆ. ಇದು ಹೆಚ್ಚಾಗಿ ಪ್ರೌಢಾವಸ್ಥೆಯವರೆಗೂ ಮುಂದುವರಿಯುತ್ತದೆ.
ಅನೋರೆಕ್ಸಿಯಾ ಇರುವ ಜನರು ಹೆಚ್ಚಾಗಿ ತೂಕ ಹೆಚ್ಚಾಗುವ ತೀವ್ರ ಭಯವನ್ನು ಅನುಭವಿಸುತ್ತಾರೆ. ತೂಕ ಹೆಚ್ಚಾಗುವುದನ್ನು ತಡೆಯಲು ಹಲವಾರು ಕೆಲಸಗಳನ್ನು ಮಾಡುತ್ತಾರೆ. ದೇಹದ ತೂಕ ಕಡಿಮೆಯಾಗುವುದು ಎಷ್ಟು ಗಂಭೀರ ಎಂಬುದನ್ನ ಅವರು ಪರಿಗಣಿಸುವುದಿಲ್ಲ. ತೂಕ ಇಳಿಸಿಕೊಳ್ಳಲು, ಅನೋರೆಕ್ಸಿಯಾ ಪೀಡಿತ ಜನರು ಆಹಾರವನ್ನು ನಿರ್ಬಂಧಿಸುತ್ತಾರೆ. ಹೆಚ್ಚು ವ್ಯಾಯಾಮ ಮಾಡುತ್ತಾರೆ. ಇದು ಮಾನಸಿಕ ಅಸ್ವಸ್ಥತೆಯಾಗಿದೆ. ಅನೋರೆಕ್ಸಿಯಾಕ್ಕೆ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದ್ರೆ ಜೀವಕ್ಕೆ ಹಾನಿ.