ಚಿತ್ರದುರ್ಗ ಸೆ. 25
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಸ್ಪೃಶ್ಯ-ಅಸ್ಪೃಶ್ಯ ಎಂಬ ಅಸಂವಿಧಾನಿಕ ಪದ ಬಳಕೆಯನ್ನು ಕಡತದಿಂದ ತೆಗೆದುಹಾಕಿ, ದಮನಿತ ಅಥವಾ ವಿಮುಕ್ತ ಜಾತಿಗಳೆಂದು ಹೆಸರಿಸಬೇಕು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ಸಿ ವರ್ಗದವರಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಶೇ6 ರಷ್ಟು ಮೀಸಲಾತಿ ನೀಡಬೇಕು ಹಲವು ಆಯೋಗಗಳ ವರದಿಯಲ್ಲಿ ಇರುವಂತೆ ಅಲೆಮಾರಿಗಳಿಗೂ ಪ್ರತ್ಯೇಕ ಶೇ1 ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಸೆ. 29 ರಂದು ಜನ ಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಆಖಿಲ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸಂಚಾಲಕರಾದ ನಿಂಗನಾಯ್ಕೆ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ರಚನೆಯಾಗಿದ್ದ ನಿವೃತ್ತ ನ್ಯಾ. ನಾಗಮೋಹನದಾಸ ಏಕ ಸದಸ್ಯ ಆಯೋಗವು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನೇ ಕೆಲವು ಬದಲಾವಣೆಯೊಂದಿಗೆ ರಾಜ್ಯ ಸರ್ಕಾರ ಜಾರಿಗೊಳಿ ಸಿರುವುದು ಬಂಜಾರ ಸಮುದಾಯ ಸೇರಿದಂತೆ ಇತರೆ ಸಮುದಾಯಗಳಲ್ಲಿ ಆತಂಕವನ್ನುಂಟು ಮಾಡಿದೆ.
ಸುಪ್ರೀಂ ಕೋರ್ಟಿನ ಮಾನದಂಡಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಸಿದ್ಧಪಡಿಸಲಾಗಿರುವ ನಾಗ ಮೋಹನ ದಾಸ ವರದಿಯು ನಿವೃತ್ತ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ಮುಂದುವರೆದ ಭಾಗದಂತಿದೆ.ಶಿಕ್ಷಣ, ಉದ್ಯೋಗ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಅಂಕಿ ಅಂಶಗಳು ಹಿಂದುಳಿದ ಸಮುದಾಯಗಳ ಅನುಮಾನಕ್ಕೆ ಕಾರಣವಾಗಿದ್ದು, ಈ ಅಂಕಿ ಸಂಖ್ಯೆಗಳು ಯಾವ ಮೂಲದಿಂದ ಪಡೆಯಲಾಗಿದೆ ಎಂಬುದನ್ನು ಆಯೋಗ ಸ್ಪಷ್ಟಪಡಿಸಬೇಕಿದೆ ಎಂದು ಒತ್ತಾಯಿಸಿದರು.
ಆಯಾ ಜಾತಿಗಳ ಪ್ರಗತಿಯ ಮೇಲೆ ಸಿದ್ಧಪಡಿಸಿರುವ 23 ವಿಷಯವಾರು ಮಾನದಂಡಗಳಲ್ಲಿ ‘ಸಿ’ ಗುಂಪಿನಲ್ಲಿ ಬರುವ ಲಂಬಾಣಿ ಮತ್ತು ಇತರೆ ಸಮುದಾಯ ಕೇವಲ 6 ವಿಷಯಗಳಲ್ಲಿ ಮಾತ್ರ ಸ್ವಲ್ಪ ಮುಂದಿವೆ ಎಂದು ಕಾಣಿಸಲಾಗಿದೆ. ಉಳಿದ 17 ವಿಷಯಗಳಲ್ಲಿ ‘ಸಿ’ ಗುಂಪಿಗಿಂತ ತುಂಬಾ ಹಿಂದುಳಿದಿದೆ ಎಂದು ಅಂಕಿ ಸಂಖ್ಯೆಗಳ ಮೂಲಕ ತೋರಿಸಲಾಗಿದೆ.’ಡಿ’ ಗುಂಪಿಗಿಂತ ‘ಸಿ’ ಗುಂಪಿನ ಸಮುದಾಯಕ್ಕೆ ಶೇಕಡಾವಾರು ಹೆಚ್ಚಿನ ಮೀಸಲಾತಿ ನೀಡಿರುವುದು ಯಾವ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹುನ್ನಾರವಿದೆ ಎಂಬುದನ್ನು ನಾಗಮೋಹನ್ ದಾಸ್ರವರೇ ಹೇಳಬೇಕಿದೆ.ನಾಗಮೋಹನ್ ದಾಸರವರು ಜಾತಿಗಳನ್ನು ವಿಂಗಡಿಸುವಾಗ ಅತ್ಯಂತ ಹಿಂದುಳಿದ, ಹೆಚ್ಚು ಹಿಂದುಳಿದ, ಹಿಂದುಳಿದ ಹಾಗೂ ಕಡಿಮೆ ಹಿಂದುಳಿದ ಸಮುದಾಯಗಳೆಂದು ವರದಿಯಲ್ಲಿ ಹೆಸರಿಸಿದ್ದಾರೆ, ಆದರೆ ಮೀಸಲಾತಿ ವರ್ಗೀಕರಿಸುವಾಗ ಸ್ಪೃಶ್ಯ, ಅಸ್ಪೃಶ್ಯ ಎಂದು ಅಸಂವಿಧಾನಿಕ ಪದ ಬಳಕೆ ಮಾಡಿರುವುದರ ಹಿಂದೆ ಯಾವ ತಂತ್ರಗಾರಿಕೆ ಇದೆ ಎಂಬುದನ್ನು ಅವರೇ ಬಹಿರಂಗ ಪಡಿಸಬೇಕಿದೆ ಎಂದು ಆಗ್ರಹಿಸಿದರು.
ಒಕ್ಕೂಟದ ವತಿಯಿಂದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೆ.29 ರಂದು ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಲಂಬಾಣಿಹಟ್ಟಿ ಗ್ರಾಮದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಜನಜಾಗೃತಿ ಪಾದ ಯಾತ್ರೆಯನ್ನು ಹಮ್ಮಿಕೊಂಡಿದ್ದು ಸದರಿ ಪಾದಯಾತ್ರೆಯಲ್ಲಿ ಮಾಜಿ ಶಾಸಕರುಗಳಾದ ಪಿ.ರಾಜೀವ್ ಹಾಗೂ ಕೆ.ಬಿ ಅಶೋಕ್ನಾಯ್ಕ್ ರವರು ಸೇರಿದಂತೆ ಸುಮಾರು 1500 ಜನ ಕೊರಚ, ಕೊರಮ, ಭೋವಿ, ಲಂಬಾಣಿ, ಅಲೆಮಾರಿ ಸಮುದಾಯದವರು ಭಾಗವಹಿಸಲಿದ್ದಾರೆ.
ಭೋವಿ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ ಎ.ಜೆ. ಸದಾಶಿವ ಆಯೋಗ, ನಾಗಮೋಹನ್ ದಾಸ್ ಹಾಗೂ ಮಾಧುಸ್ವಾಮಿ ವರದಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನಿಗದಿಗೊಳಿಸಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲೆಮಾರಿ ಸಮುದಾಯವನ್ನು ಯಾವುದೇ ದೃಷ್ಟಿಕೋನದಿಂದಲೂ ಹೊಂದಾಣಿಕೆ ಆಗದ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯದ ಸಿ ವರ್ಗದವರೊಂದಿಗೆ ಸೇರಿಸಿ ಅಲೆಮಾರಿಗಳಿಗೆ ಮೀಸಲಾತಿಯಿಂದ ವಂಚನೆ ಮಾಡಲು ಮುಂದಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಹಲವು ಆಯೋಗಗಳ ವರದಿಯಲ್ಲಿ ತಿಳಿಸಿರುವಂತೆ ಅಲೆಮಾರಿಗಳಿಗೂ ಶೇ 1 ರಷ್ಟು ಮೀಸಲಾತಿ ನೀಡಬೇಕು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ಸಿ ವರ್ಗದಲ್ಲಿ ಬರುವ ಬಂಜಾರ, ಭೋವಿ, ಕೊರಚ,ಕೊರಮ ಸಮುದಾಯದವರಿಗೂ ಶೇ6ರಷ್ಟು ಮೀಸಲಾತಿ ನಿಗದಿಗೊಳಿಸಲು ಸರ್ಕಾರ ಮುಂದಾಗ ಬೇಕಿದೆ. ಔದ್ಯೋಗಿಕವಾಗಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವ ಖಾಸಗಿ ವಲಯದಲ್ಲೂ ಮೀಸಲಾತಿ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ವಲಸೆ ಅಥವಾ ಗುಳಿ ಹೋದವರ ಮಾಹಿತಿ ಪಡೆಯದ ಹಾಗೂ ನಗರ ಪ್ರದೇಶದ ಜನಗಣತಿಯ ಅಪೂರ್ಣ ಮಾಹಿತಿ ಹೊಂದಿರುವ ನ್ಯಾ.ನಾಗಮೋಹನ್ ದಾಸ್ ವರದಿ ತಿರಸ್ಕರಿಸಿ, ಕೇಂದ್ರ ಸರ್ಕಾರ ನಡೆಸುವ ಜಾತಿಗಣತಿವರಿಗೆ ಒಳ ಮೀಸಲಾತಿ ವರ್ಗೀಕರಣ ಆದೇಶವನ್ನು ರಾಜ್ಯ ಸರ್ಕಾರ ತಡೆಹಿಡಿಯಬೇಕು. ಬೇಡ ಜಂಗಮರನ್ನು ಪಟ್ಟಿಯಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಬಂಜಾರ ಸಮುದಾಯದ ಮುಖಂಡರಾದ ವೆಂಕನಾಯ್ಕ್, ಜಿ.ಪಂ. ಮಾಜಿ ಸದಸ್ಯರಾದ ರಾಜಾನಾಯ್ಕ್, ಮಾಧು ನಾಯ್ಕ್, ಶ್ರೀನಿವಾಸ್ ನಾಯ್ಕ್, ಆರವಿಂದ ಕುಮಾರ್ ನಾಯ್ಕ್, ಶಿವನಾಯ್ಕ್, ಗೀರೀಶ್ ನಾಯ್ಕ್, ಸೇರಿದಂತೆ ಇತರರು ಭಾಗವಹಿಸಿದ್ದರು.