
ಭಾನುವಾರ ಕತಾರ್ನ ಲುಸೇಲ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ 2022 ರ ಅಂತಿಮ ಪಂದ್ಯದಲ್ಲಿ ಪೆನಾಲ್ಟಿ ಶೂಟ್-ಔಟ್ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸುವುದರೊಂದಿಗೆ ಅರ್ಜೆಂಟೀನಾ ತಂಡ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿದೆ. ಈ ವಿಶ್ವಕಪ್ ಗೆಲುವಿನೊಂದಿಗೆ ಮೆಸ್ಸಿ ತಮ್ಮ ಅಂತರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದಾರೆ. ಫೈನಲ್ ಪಂದ್ಯ ತನ್ನ ಅಂತರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಮೆಸ್ಸಿ ಈಗಾಗಲೇ ಹೇಳಿದ್ದರು. ಮೆಸ್ಸಿ ಅವರ ಸಂಪುಟದಲ್ಲಿ ವಿಶ್ವಕಪ್ ಟ್ರೋಫಿ ಇರಲಿಲ್ಲ, ಈಗ ಅದು ಕೂಡ ಮೆಸ್ಸಿ ಖಾತೆಗೆ ಜಮಾವಣೆಗೊಂಡಿದೆ. ಇದರೊಂದಿಗೆ ಮೆಸ್ಸಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ಅರ್ಜೆಂಟೀನಾ ತನ್ನ 36 ವರ್ಷಗಳ ವಿಶ್ವಕಪ್ ಬರವನ್ನು ನೀಗಿಸಿಕೊಂಡಿದೆ.
ಇತ್ತ, ರಷ್ಯಾದಲ್ಲಿ ನಡೆದ ಕಳೆದ ಆವೃತ್ತಿಯ ವಿಶ್ವಕಪ್ನಲ್ಲಿ ಪ್ರಶಸ್ತಿ ಗೆದ್ದಿದ್ದ ಫ್ರಾನ್ಸ್ ತಂಡಕ್ಕೆ ತನ್ನ ಹಾಲಿ ಚಾಂಪಿಯನ್ ಪಟ್ಟವನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ವೇಳೆ ಫ್ರಾನ್ಸ್ ಈ ಬಾರಿಯೂ ಚಾಂಪಿಯನ್ ಪಟ್ಟಕ್ಕೇರಿದ್ದರೆ, ಬ್ರೆಜಿಲ್ ಹಾಗೂ ಇಟಲಿ ನಂತರ ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ತಂಡವಾಗುತ್ತಿತ್ತು. ಈ ಮೊದಲು ಇಟಲಿ 1934 ಮತ್ತು 1938 ರಲ್ಲಿ ಸತತ ಎರಡು ಬಾರಿ ಪ್ರಶಸ್ತಿಯನ್ನು ಗೆದ್ದಿತ್ತು. ಬಳಿಕ ಬ್ರೆಜಿಲ್ 1958 ಮತ್ತು 1962 ರಲ್ಲಿ ಸತತ ಎರಡು ಬಾರಿ ವಿಶ್ವಕಪ್ ಗೆದ್ದಿತು.
ಅರ್ಜೆಂಟೀನಾ ಪಂದ್ಯದ ಮೊದಲಾರ್ಧದಲ್ಲಿಯೇ ಎರಡು ಗೋಲುಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಇದರ ನಂತರ, ಕೈಲಿಯನ್ ಎಂಬಪ್ಪೆ ಕೇವಲ 97 ಸೆಕೆಂಡುಗಳಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ದ್ವಿತೀಯಾರ್ಧದಲ್ಲಿ ಫ್ರಾನ್ಸ್ ತಂಡವನ್ನು ಮತ್ತೆ ಪಂದ್ಯದಲ್ಲಿ ಜೀವಂತವಾಗಿರಿಸಿದರು. ಆದರೆ ಮೆಸ್ಸಿ ಹೆಚ್ಚುವರಿ ಸಮಯದಲ್ಲಿ ಗೋಲು ಗಳಿಸುವ ಮೂಲಕ ಮತ್ತೆ ಅರ್ಜೆಂಟೀನಾ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಎಂಬಪ್ಪೆ ಕೂಡ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವ ಮೂಲಕ ಮತ್ತೆ ಪಂದ್ಯದಲ್ಲಿ ಸಮಬಲ ಸಾಧಿಸಿದರು. ಹೀಗಾಗಿ ಪಂದ್ಯ ಪೆನಾಲ್ಟಿ ಹಂತಕ್ಕೆ ತಲುಪಿತು.
2. ಪೆನಾಲ್ಟಿ ಶೂಟೌಟ್ನಲ್ಲಿ ಗೆದ್ದ ಅರ್ಜೆಂಟೀನಾ
ಪೆನಾಲ್ಟಿಯಲ್ಲಿ ಫ್ರಾನ್ಸ್ನ ಕೈಲಿಯನ್ ಎಂಬಪ್ಪೆ ಮೊದಲ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ನಂತರ ಅರ್ಜೆಂಟೀನಾ ಪರ ಮೆಸ್ಸಿ ಕೂಡ ಗೋಲು ಬಾರಿಸಿದರು. ಇದಾದ ನಂತರ ಫ್ರಾನ್ಸ್ ಪರ ಎರಡನೇ ಪೆನಾಲ್ಟಿ ಶೂಟೌಟ್ ಮಾಡಲು ಬಂದ ಮಾರ್ಟಿನೆಜ್ ಕೋಮನ್ ಅವರ ಕಿಕ್ ಅನ್ನು ತಡೆಯುವಲ್ಲಿ ಅರ್ಜೆಂಟೀನಾದ ಗೋಲ್ಕೀಪರ್ ಯಶಸ್ವಿಯಾದರು. ಬಳಿಕ ಅರ್ಜೆಂಟೀನಾ ಪರ ಡೈಬಾಲಾ ಎರಡನೇ ಗೋಲು ಗಳಿಸಿದರು.
ಹಾಗೆಯೇ ಫ್ರಾನ್ಸ್ ಪರ ಚುಮೇನಿ ಬಾರಿಸಿದ ಮೂರನೇ ಪೆನಾಲ್ಟಿ ಕಿಕ್ ಅನ್ನು ಸಹ ಅರ್ಜೆಂಟೀನಾದ ಗೋಲ್ಕೀಪರ್ ಮಾರ್ಟಿನೆಜ್ ತಡೆದರು. ಇದಾದ ನಂತರ ಅರ್ಜೆಂಟೀನಾ ಪರ ಪರೆಡೆಸ್ ಮೂರನೇ ಗೋಲು ಗಳಿಸಿದರು. ಆದರೆ 2 ಮತ್ತು 3 ನೇ ಪೆನಾಲ್ಟಿ ಶೂಟೌಟನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದ ಫ್ರಾನ್ಸ್ ನಾಲ್ಕನೇ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಫ್ರಾನ್ಸ್ ಪರ ಕೊಲೊ ಮುವಾನಿ 2ನೇ ಗೋಲು ಗಳಿಸಿದರು. ಅಂತಿಮವಾಗಿ ಮೊಂಟಿಯೆಲ್ ಅರ್ಜೆಂಟೀನಾ ಪರ 4ನೇ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.