ಸೆ.26:
ನೂರೆಂಟು ವಿಘ್ನ, ನೂರಾರು ಸವಾಲು, ಹತ್ತು ಹಲವು ಗೊಂದಲ, ಹತ್ತಾರು ಎಡವಟ್ಟುಗಳ ನಡುವೆಯೂ ಕರ್ನಾಟಕದಲ್ಲಿ ಜಾತಿಗಣತಿ ಕಾರ್ಯ ಶುರುವಾಗಿದೆ. ಐದನೇ ದಿನವಾದ ಇಂದು (ಸೆಪ್ಟೆಂಬರ್ 26) ಜಾತಿಗಣತಿ ಕಾರ್ಯ ಸಾಗುತ್ತಿದೆ. ಆದರೆ, ರಾಜ್ಯದ ಹಲವೆಡೆ ಒಟಿಪಿ ಸಮಸ್ಯೆ, ಸರ್ವರ್ ತೊಂದರೆ, ಮೊಬೈಲ್ ಆ್ಯಪ್ ಓಪನ್ ಆಗದೇ ಶಿಕ್ಷಕರು ಪರದಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ. ದಿವ್ಯಾಂಗ ಶಿಕ್ಷಕರು, ವಯಸ್ಸಾದ ಶಿಕ್ಷಕರನ್ನೂ ಗಣತಿ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಅವರಿಗೆ ಸಮೀಕ್ಷೆ ನಡೆಸುವುದು ಕಷ್ಟಕರವಾಗಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಸೆಪ್ಟೆಂಬರ್ 26) ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಸಮೀಕ್ಷೆಯ ಪ್ರಗತಿ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂತ್ರಿಕ ತೊಂದರೆಗಳು ಈಗ 90% ಬಗೆಹರಿದಿವೆ, ಉಳಿದ ಸಮಸ್ಯೆಗಳನ್ನೂ ಕೂಡಲೇ ಪರಿಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಿನಕ್ಕೆ 10% ಸರ್ವೇ ಗುರಿ
ಸಿಎಂ ಸಿದ್ದರಾಮಯ್ಯ ಹೇಳಿದರು: “ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಸರ್ವೇ ಕೆಲಸ ಮುಗಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ಆದ್ರೆ ಮೊದಲ ನಾಲ್ಕು ದಿನಗಳಲ್ಲಿ ಕಾರ್ಯ ನಿಧಾನಗತಿಯಲ್ಲಿತ್ತು. ಉಳಿದ ದಿನಗಳಲ್ಲಿ ಪ್ರತೀ ದಿನ ಶೇ.10ರಷ್ಟು ಮನೆಮನೆಗೆ ಸಮೀಕ್ಷೆ ಮಾಡಬೇಕು. ಎಲ್ಲ ಜಿಲ್ಲಾಧಿಕಾರಿಗಳು ಇದಕ್ಕೆ ಒಪ್ಪಿಕೊಂಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಸಹ ಭಾಗಿಯಾಗಿದ್ದಾರೆ,” ಎಂದರು.
ಇಲ್ಲಿಯವರೆಗೆ ಕೇವಲ 4% ಸರ್ವೇ
ರಾಜ್ಯಾದ್ಯಂತ ಒಟ್ಟು 2 ಕೋಟಿ ಹೌಸ್‌ಹೋಲ್ಡ್‌ಗಳಲ್ಲಿ ಕೇವಲ ಶೇ.4ರಷ್ಟು ಮಾತ್ರ ಸಮೀಕ್ಷೆ ಪೂರ್ಣವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು. ಪ್ರತಿದಿನ ಕನಿಷ್ಠ 10% ಸಮೀಕ್ಷೆ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಹಿಂದಿನ ಸರ್ವೇ ಗೌರವಧನ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಯಾರಿಗೂ ಅನುಮಾನ ಬಾರದಂತೆ ಈ ಬಾರಿ ಸಹ ಗೌರವಧನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
7 ಕೋಟಿ ಜನರ ಸಮೀಕ್ಷೆ ಗುರಿ
“ನ್ಯಾಯಾಲಯ ಹೇಳಿದಂತೆ ಸಮೀಕ್ಷೆ ನಡೆಯುತ್ತಿದೆ. ಒಟ್ಟು 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಗುರಿ ಇದೆ. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರು ಸಮೀಪದ ಶಾಲೆಗಳಲ್ಲಿ ಮಾಹಿತಿ ನೀಡಬಹುದು. ಎಲ್ಲ ಶಿಕ್ಷಕರ ಸಹಕಾರ ಅವಶ್ಯ. ಸಹಕರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಸಿಎಂ ಎಚ್ಚರಿಸಿದರು.
ಡಿಸಿ, ಸಿಇಒಗಳೊಂದಿಗೆ ಸಿಎಂ ಸಭೆಯ ಮುಖ್ಯಾಂಶಗಳು:
- ಸಮೀಕ್ಷೆ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದ್ದು, ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳಿಂದ ನಿಧಾನಗತಿಯಾಗಿತ್ತು. ಈಗ ಹೆಚ್ಚಿನ ಸಮಸ್ಯೆಗಳು ಬಗೆಹರಿದಿವೆ.
- ಇಂದಿನಿಂದ ಸಮೀಕ್ಷೆ ಕಾರ್ಯ ಚುರುಕುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ.
- ಯಾವುದೇ ತಾಂತ್ರಿಕ ತೊಂದರೆಗಳು ಎದುರಾದರೆ ತಕ್ಷಣ ಪರಿಹರಿಸಬೇಕು.
- ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆ ಗುರಿ. ಇದುವರೆಗೆ ಕೇವಲ 2,76,016 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.
- ಒಟ್ಟು 1,20,728 ಗಣತಿದಾರರು ನಿಯೋಜನೆ. 1,22,085 ಗಣತಿ ಬ್ಲಾಕ್‌ಗಳು ಗುರುತಿಸಲಾಗಿದೆ.
- ಅಕ್ಟೋಬರ್ 7ರೊಳಗೆ ಕಾರ್ಯ ಪೂರ್ಣಗೊಳ್ಳಬೇಕು.
- ಶಿಕ್ಷಕರಿಗೆ ಗೌರವಧನ ಬಿಡುಗಡೆ ಮಾಡಲಾಗಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕ್ರಮ.
- ಇದು ಕೇವಲ ಹಿಂದುಳಿದ ವರ್ಗಗಳ ಇಲಾಖೆಯ ಸಮೀಕ್ಷೆಯಲ್ಲ. ಕಂದಾಯ, ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಹಕಾರ ಅಗತ್ಯ.
- ಜಿಲ್ಲಾಧಿಕಾರಿಗಳು ದಿನನಿತ್ಯ ಪ್ರಗತಿ ಪರಿಶೀಲನೆ ಮಾಡಬೇಕು.
- ಅಗತ್ಯವಿದ್ದರೆ ಅನುದಾನಿತ ಶಾಲಾ ಶಿಕ್ಷಕರ ಸೇವೆ ಪಡೆಯಬೇಕು.
- ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಸೂಚನೆ.
- ತಾಂತ್ರಿಕ ಸಮಸ್ಯೆ ಬಗೆಹರಿಸಲು ಸ್ಥಳೀಯ ಐಟಿ ತಜ್ಞರ ಸಹಾಯ ಪಡೆಯಬೇಕು.
- ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ 50 ಲಕ್ಷ ಮನೆಗಳ ಸಮೀಕ್ಷೆ ತಕ್ಷಣ ಪ್ರಾರಂಭವಾಗಬೇಕು.
- ಪ್ರತಿಯೊಂದು ಕುಟುಂಬಗಳ ಸಮೀಕ್ಷೆ ಆಗಬೇಕು, ಯಾರೂ ಹೊರಗುಳಿಯಬಾರದು.
- ಗುಡ್ಡಗಾಡು ಪ್ರದೇಶಗಳಲ್ಲಿ ಸಮೀಕ್ಷೆ ಕೇಂದ್ರ ಆರಂಭಿಸಲು ಅನುಮತಿ.
- ಜನರು ಕೇಂದ್ರಗಳಲ್ಲಿ ಅಥವಾ ಆನ್‌ಲೈನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
- ಮನೆಗಳಿಗೆ ಬೀಗ ಹಾಕಿದ್ದರೂ ನಂತರ ಸಮೀಕ್ಷೆ ನಡೆಸಲಾಗುತ್ತದೆ.
Views: 12