Financial tasks: ಮಾರ್ಚ್ 31 ಡೆಡ್‌ಲೈನ್; ಹಣಕಾಸು ವರ್ಷಾಂತ್ಯದೊಳಗೆ ನೀವು ಪೂರ್ಣಗೊಳಿಸಲೇಬೇಕಾದ 7 ಪ್ರಮುಖ ಕೆಲಸಗಳಿವು!

2025-26ನೇ ಹಣಕಾಸು ವರ್ಷವು (Financial Year) ಮಾರ್ಚ್ 31ಕ್ಕೆ ಅಧಿಕೃತವಾಗಿ ಮುಕ್ತಾಯಗೊಳ್ಳಲಿದ್ದು, ಏಪ್ರಿಲ್ 1ರಿಂದ 2026-27ನೇ ಸಾಲಿನ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಹೊಸ ಆರ್ಥಿಕ ವರ್ಷಕ್ಕೆ ಕಾಲಿಡುವ ಮುನ್ನ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಹಣಕಾಸು ಲೆಕ್ಕಾಚಾರಗಳನ್ನು ಸರಿದೂಗಿಸಿಕೊಳ್ಳುವುದು ಅತ್ಯಗತ್ಯ.

ಮಾರ್ಚ್ 31ರೊಳಗೆ ಕೆಲವು ಪ್ರಮುಖ ಹಣಕಾಸು ಕಾರ್ಯಗಳನ್ನು (Financial tasks) ಪೂರ್ಣಗೊಳಿಸದಿದ್ದರೆ, ಮುಂದಿನ ದಿನಗಳಲ್ಲಿ ಆರ್ಥಿಕ ನಷ್ಟ ಅಥವಾ ದಂಡ ತೆರಬೇಕಾದ ಪರಿಸ್ಥಿತಿ ಎದುರಾಗಬಹುದು. ತೆರಿಗೆ ಉಳಿತಾಯದಿಂದ ಹಿಡಿದು ಫಾಸ್ಟ್‌ಟ್ಯಾಗ್ ಕೆವೈಸಿವರೆಗೆ, ನೀವು ಗಮನಹರಿಸಲೇಬೇಕಾದ 7 ಪ್ರಮುಖ ವಿಷಯಗಳ ಮಾಹಿತಿ ಇಲ್ಲಿದೆ.

1. ಪ್ಯಾನ್ ಕಾರ್ಡ್ (PAN Card) ನಿಯಮದಲ್ಲಿ ದೊಡ್ಡ ಬದಲಾವಣೆ

ನೀವಿನ್ನೂ ಪ್ಯಾನ್ ಕಾರ್ಡ್ ಮಾಡಿಸಿಲ್ಲವೇ? ಹಾಗಾದರೆ ಮಾರ್ಚ್ 31ರೊಳಗೆ ಮಾಡಿಸಿಕೊಳ್ಳುವುದು ಉತ್ತಮ. ಸದ್ಯ ಪ್ಯಾನ್ ಕಾರ್ಡ್ ಪಡೆಯಲು ಕೇವಲ ‘ಆಧಾರ್ ಕಾರ್ಡ್’ (Aadhaar Card) ನೀಡಿದರೆ ಸಾಕು. ಆದರೆ ಈ ನಿಯಮ 2026ರ ಮಾರ್ಚ್ 31ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಏಪ್ರಿಲ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಜೊತೆಗೆ ಮತದಾರರ ಗುರುತಿನ ಚೀಟಿ (Voter ID), ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಜನನ ಪ್ರಮಾಣಪತ್ರ ಅಥವಾ ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿಯಂತಹ ಹೆಚ್ಚುವರಿ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ.

2. ಕಚೇರಿಗೆ ಹೂಡಿಕೆ ದಾಖಲೆಗಳ (Investment Proofs) ಸಲ್ಲಿಕೆ

ನೀವು ಉದ್ಯೋಗಿಯಾಗಿದ್ದರೆ, ನಿಮ್ಮ ವೇತನದಿಂದ ಮುರಿದುಕೊಳ್ಳುವ ಟಿಡಿಎಸ್ (TDS) ತಪ್ಪಿಸಲು ನಿಮ್ಮ ಕಂಪನಿಯ ಮಾನವ ಸಂಪನ್ಮೂಲ ವಿಭಾಗಕ್ಕೆ (HR) ಹೂಡಿಕೆಯ ಪುರಾವೆಗಳನ್ನು ಸಲ್ಲಿಸುವುದು ಕಡ್ಡಾಯ.

  • ಜೀವ ವಿಮೆ (Life Insurance) ಪ್ರೀಮಿಯಂ ರಸೀದಿ.
  • ಮನೆ ಬಾಡಿಗೆ ಭತ್ಯೆ (HRA) ಕ್ಲೇಮ್ ಮಾಡಲು ಬಾಡಿಗೆ ರಸೀದಿ ಮತ್ತು ರೆಂಟಲ್ ಅಗ್ರಿಮೆಂಟ್.
  • ಪಿಪಿಎಫ್ (PPF), ಇಎಲ್ಎಸ್ಎಸ್ (ELSS) ಮ್ಯೂಚುವಲ್ ಫಂಡ್ ಹೂಡಿಕೆಯ ಸ್ಟೇಟ್‌ಮೆಂಟ್‌ಗಳು. ಈ ದಾಖಲೆಗಳನ್ನು ಮಾರ್ಚ್ 31ರೊಳಗೆ ಸಲ್ಲಿಸದಿದ್ದರೆ, ನಿಮ್ಮ ಮಾರ್ಚ್ ತಿಂಗಳ ಸಂಬಳದಲ್ಲಿ ಭಾರೀ ಪ್ರಮಾಣದ ಟಿಡಿಎಸ್ ಕಡಿತವಾಗುವ ಸಾಧ್ಯತೆ ಇರುತ್ತದೆ.

3. ತೆರಿಗೆ ಉಳಿಸಲು (Tax Saving) ಹೂಡಿಕೆ ಮಾಡಿ

ಹಳೆಯ ತೆರಿಗೆ ಪದ್ಧತಿಯನ್ನು (Old Tax Regime) ಆಯ್ಕೆ ಮಾಡಿಕೊಂಡಿರುವವರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಇದಕ್ಕಾಗಿ ನೀವು ಮಾರ್ಚ್ 31ರೊಳಗೆ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಯೋಜನೆ (SSY), ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅಥವಾ 5 ವರ್ಷಗಳ ಟ್ಯಾಕ್ಸ್ ಸೇವಿಂಗ್ ಎಫ್‌ಡಿ (FD) ಗಳಲ್ಲಿ ಹೂಡಿಕೆ ಮಾಡಬೇಕು. ಡೆಡ್‌ಲೈನ್ ಮೀರಿದರೆ, ಈ ಹೂಡಿಕೆಗಳು ಮುಂದಿನ ಆರ್ಥಿಕ ವರ್ಷದ ಲೆಕ್ಕಕ್ಕೆ ಸೇರಿಕೊಳ್ಳುತ್ತವೆ.

4. ಕನಿಷ್ಠ ಠೇವಣಿ ಪಾವತಿಸಿ ಖಾತೆಗಳನ್ನು ಸಕ್ರಿಯವಾಗಿಡಿ

ನೀವು ಅಥವಾ ನಿಮ್ಮ ಮಕ್ಕಳ ಹೆಸರಿನಲ್ಲಿ PPF ಅಥವಾ ಸುಕನ್ಯಾ ಸಮೃದ್ಧಿ ಯೋಜನೆ (SSY) ಖಾತೆಗಳಿದ್ದರೆ, ಪ್ರತಿ ಆರ್ಥಿಕ ವರ್ಷದಲ್ಲಿ ಕನಿಷ್ಠ ಮೊತ್ತವನ್ನು ಜಮೆ ಮಾಡುವುದು ಕಡ್ಡಾಯ. PPF ಖಾತೆಗೆ ಕನಿಷ್ಠ ₹500 ಹಾಗೂ ಸುಕನ್ಯಾ ಸಮೃದ್ಧಿ ಖಾತೆಗೆ ಕನಿಷ್ಠ ₹250 ಠೇವಣಿ ಮಾಡದಿದ್ದರೆ ಆ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ (Inactive). ನಂತರ ಅದನ್ನು ಮರು-ಸಕ್ರಿಯಗೊಳಿಸಲು ದಂಡ ಪಾವತಿಸಬೇಕಾಗುತ್ತದೆ. ಆದ್ದರಿಂದ ಈ ಕೂಡಲೇ ಖಾತೆ ಪರಿಶೀಲಿಸಿ.

5. ಆರೋಗ್ಯ ವಿಮೆ (Health Insurance) ಪ್ರೀಮಿಯಂ ಪಾವತಿ

ಆದಾಯ ತೆರಿಗೆಯ ಸೆಕ್ಷನ್ 80D ಅಡಿಯಲ್ಲಿ ಆರೋಗ್ಯ ವಿಮೆಯ ಪ್ರೀಮಿಯಂ ಪಾವತಿಗೆ ತೆರಿಗೆ ವಿನಾಯಿತಿ ಸಿಗುತ್ತದೆ. ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯ ವಿಮೆಗೆ ಪಾವತಿಸುವ ಮೊತ್ತದಲ್ಲಿ 25,000 ರೂ. ವರೆಗೆ (ಹಿರಿಯ ನಾಗರಿಕರಾಗಿದ್ದರೆ 50,000 ರೂ.) ಡಿಡಕ್ಷನ್ ಕ್ಲೇಮ್ ಮಾಡಬಹುದು. ನಿಮ್ಮ ವಿಮೆಯ ನವೀಕರಣ (Renewal) ಬಾಕಿ ಇದ್ದರೆ ಮಾರ್ಚ್ 31ರೊಳಗೆ ಪೂರ್ಣಗೊಳಿಸಿ.

6. ಗೃಹ ಸಾಲದ (Home Loan) ಪ್ರಮಾಣಪತ್ರ ಪಡೆಯಿರಿ

ನೀವು ಮನೆ ಕಟ್ಟಲು ಅಥವಾ ಖರೀದಿಸಲು ಬ್ಯಾಂಕ್‌ನಿಂದ ಗೃಹ ಸಾಲ ಪಡೆದಿದ್ದರೆ, ಸಾಲದ ಅಸಲು (Principal) ಮತ್ತು ಬಡ್ಡಿ (Interest) ಎರಡಕ್ಕೂ ತೆರಿಗೆ ವಿನಾಯಿತಿ ಸೌಲಭ್ಯವಿದೆ. ಸೆಕ್ಷನ್ 24(b) ಅಡಿಯಲ್ಲಿ ಬಡ್ಡಿಗೆ 2 ಲಕ್ಷ ರೂ. ಹಾಗೂ 80C ಅಡಿಯಲ್ಲಿ ಅಸಲಿಗೆ 1.5 ಲಕ್ಷ ರೂ. ವರೆಗೆ ವಿನಾಯಿತಿ ಪಡೆಯಬಹುದು. ಇದಕ್ಕಾಗಿ ನೀವು ಮಾರ್ಚ್ ಅಂತ್ಯದೊಳಗೆ ನಿಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ‘ಹೋಮ್ ಲೋನ್ ಇಂಟರೆಸ್ಟ್ ಸರ್ಟಿಫಿಕೇಟ್’ ಅನ್ನು ಪಡೆದಿಟ್ಟುಕೊಳ್ಳುವುದು ಅತ್ಯಗತ್ಯ.

7. ಫಾಸ್ಟ್‌ಟ್ಯಾಗ್ (FASTag) ಕೆವೈಸಿ (KYC) ಅಪ್‌ಡೇಟ್ ಕಡ್ಡಾಯ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ‘ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್’ (One Vehicle, One FASTag) ನಿಯಮದ ಅನ್ವಯ, ನಿಮ್ಮ ವಾಹನದ ಫಾಸ್ಟ್‌ಟ್ಯಾಗ್‌ನ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ಫಾಸ್ಟ್‌ಟ್ಯಾಗ್ ಕೆವೈಸಿ ಅಪೂರ್ಣವಾಗಿದ್ದರೆ ಮಾರ್ಚ್ 31ರೊಳಗೆ ಅಪ್‌ಡೇಟ್ ಮಾಡಿ. ಇಲ್ಲದಿದ್ದರೆ ನಿಮ್ಮ ಫಾಸ್ಟ್‌ಟ್ಯಾಗ್ ಖಾತೆ ನಿಷ್ಕ್ರಿಯಗೊಳ್ಳಬಹುದು (Deactivate) ಅಥವಾ ಬ್ಲಾಕ್‌ಲಿಸ್ಟ್‌ಗೆ ಸೇರಬಹುದು. ಹೀಗಾದಲ್ಲಿ ಟೋಲ್ ಪ್ಲಾಜಾಗಳಲ್ಲಿ ದುಪ್ಪಟ್ಟು ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಬಹುದು.

Leave a Reply

Your email address will not be published. Required fields are marked *