ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ.
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA)ದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ನಿರೀಕ್ಷೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಾಗಿದೆ.
ಅವರ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ.
ಸಿಆರ್‌ಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಎಂದು ಕೋರ್ಟ್ ಆದೇಶ ನೀಡಿತ್ತು. ಹಲವು ಸೆಕ್ಷನ್ ಗಳಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ದೂರಿನ ಮೇರೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನ್ಯಾಯಾಲಯ ಸೂಚಿಸಿರುವ ಐಪಿಸಿ ಸೆಕ್ಷನ್ ಭ್ರಷ್ಟಾಚಾರ ತಡೆ ಕಾಯ್ದೆ, ಬೇನಾಮಿ ಆಸ್ತಿ ವಹಿವಾಟು ಕಾಯ್ದೆ, ಭೂ ಕಬಳಿಕೆ ನಿರ್ಬಂಧ ಕಾಯ್ದೆಯಡಿ ಲೋಕಾಯುಕ್ತ ಎಫ್ಐಆರ್ ದಾಖಲಿಸಿದೆ.
ಎ1 ಆರೋಪಿ: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ A 1 ಆರೋಪಿಯಾಗಿದ್ದರೆ, ಅವರ ಪತ್ನಿ ಪಾರ್ವತಿ A 2 ಆರೋಪಿಯಾಗಿದ್ದಾರೆ. ಇನ್ನು ಅವರ ಬಾಮೈದಾ ಮಲ್ಲಿಕಾರ್ಜುನ A 3, ಭೂಮಾಲಿಕ ದೇವರಾಜು ಎ4 ಹಾಗೂ ಎ5 ಇತರರು ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.