ಬಸ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತವಾಗಿ ಐವರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

ಚಿತ್ರದುರ್ಗ: ಕೆಎಸ್ಆರ್ಟಿಸಿ ಬಸ್ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಐವರು ಮೃತಪಟ್ಟ ಘಟನೆ ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಬಸ್ ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೆ ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ.
ಒಂದು ಮಗು ಸೇರಿ ಐವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಬಸ್ಸಿನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸಿನಲ್ಲಿ ಎಡಗಡೆಯ ಸೀಟಿನಲ್ಲಿ ಮುಂದೆ ಕುಳಿತಿರುವ ನಾಲ್ವರು ಮೃತಪಟ್ಟಿದ್ದಾರೆ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಐಮಂಗಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಅತಿ ವೇಗವಾಗಿ ಬಸ್ ಚಾಲಕ ಓವರ್ ಟೇಕ್ ಮಾಡಲು ಹೋಗಿ ಲಾರಿಗೆ ಗುದ್ದಿದ್ದರಿಂದ ಅಪಘಾತ ಸಂಭವಿಸಿದೆ. ಚಾಲಕ ವಾಹನ ಚಾಲನಾ ಪರವಾನಗಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ADGP ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ರಾಯಚೂರು ಮೂಲದ ಮೃತರು: ಮೃತಪಟ್ಟವರು ರಾಯಚೂರು ಮೂಲದವರಾಗಿದ್ದು, ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೃತ ರವಿ (24) ಎಂಬುವರು ಮಸ್ಕಿಗೆ ಹೆಣ್ಣು ನೋಡಲು ಹೋಗಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದರು. ಹಾಗೆಯೇ ಕಡೋಣಿ ಇಂದ ಬೆಂಗಳೂರಿಗೆ ಗಾರೆ ಕೆಲಸಕ್ಕೆ ತೆರಳುತ್ತಿದ್ದ ಶ್ರೀದೇವಿ ಎಂಬುವರ ಮಗು ಕೂಡ ಅಪಘಾತದಲ್ಲಿ ಸಾವನ್ನಪ್ಪಿದೆ. ಗಾಯಾಳುಗಳನ್ನು ಚಳ್ಳಕೆರೆ, ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅಪಘಾತದಲ್ಲಿ ಬಸ್ ನುಜ್ಜುಗುಜ್ಜಾಗಿರುವುದು
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii