ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೇಬಾವಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತೊಗರಿ ಕಟಾವು ಯಂತ್ರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐದು ಜನರು ಸಾವನ್ನಪ್ಪಿದ್ದಾರೆ. ಮೃತರು ವಿಜಯಪುರ ತಾಲೂಕಿನ ಅಲಿಯಾಬಾದ್ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದಿಂದಾಗಿ ಘಟನಾ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತು.

ವಿಜಯಪುರ, ಡಿಸೆಂಬರ್ 06: ಭೀಕರ ರಸ್ತೆ ಅಪಘಾತದಲ್ಲಿ (Accident) ಐವರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ಸಂಭವಿಸಿದೆ. ಕಾರಿಗೆ ತೊಗರಿ ಕಟಾವು ಮಷಿನ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಮೂವರು ಪುರುಷರು ಸಾವನ್ನಪ್ಪಿದ್ದಾರೆ. ಮೃತರು ವಿಜಯಪುರ ತಾಲೂಕು ಅಲಿಯಾಬಾದ್ ನಿವಾಸಿಗಳಾಗಿದ್ದಾರೆ. ನಿಂಗಪ್ಪಾ ಪಾಟೀಲ್ (55), ಶಾಂತವ್ವ ಶಂಕರ ಪಾಟೀಲ್ (45), ಭೀಮಶಿ ಸಂಕನಾಳ (65), ಶಶಿಕಲಾ ಜೈನಾಪೂರ (50) ಹಾಗೂ ದಿಲೀಪ್ ಪಾಟೀಲ್ (45) ಮೃತರು.
ಮೃತರಾದ ಐವರು ಯಾದಗಿರಿ ಜಿಲ್ಲೆಯ ಅಗ್ನಿ ಗ್ರಾಮದಲ್ಲಿ ಕನ್ಯೆ ನೋಡಲು ಹೋಗಿದ್ದು, ವಾಪಸ್ ಆಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಕ್ರೂಸರ್ ಓವರ್ ಟೇಕ್ ಮಾಡುವ ಭರದಲ್ಲಿ ತೊಗರಿ ಕಟಾವು ಮಷಿನ್ಗೆ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಿಂದಾಗಿ ಘಟನಾ ಸ್ಥಳದಲ್ಲಿ ಟ್ರಾಫಿಕ್‌ಜಾಮ್ ಉಂಟಾಗಿತ್ತು. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.