ಹಾವೇರಿ: ರಾಜ್ಯಾದ್ಯಂತ ಮಾರ್ಚ್ 18ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ನಾನಾ ರೀತಿಯಲ್ಲಿ ಜಾಗೃತಿ ಹಾಗೂ ಧೈರ್ಯ ತುಂಬುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆದರೆ, ಇದೇ ಹೊತ್ತಿನಲ್ಲಿ ಪರೀಕ್ಷಾ ಆತಂಕದಿಂದಾಗಿ ಹಾವೇರಿ ಜಿಲ್ಲೆಯಲ್ಲಿ ಐವರು ವಿದ್ಯಾರ್ಥಿಗಳು ವಸತಿ ಶಾಲೆಯಿಂದ ಪರಾರಿಯಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ರಾಣೆಬೆನ್ನೂರು ತಾಲೂಕಿನ ಸುಣಕಲಬಿದರಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ 10ನೇ ತರಗತಿಯ ಐವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ಪೂರ್ವ ಸಿದ್ಧತಾ (Preparatory) ಪರೀಕ್ಷೆಗಳು ನಡೆಯುತ್ತಿದ್ದು, ಇದರಿಂದ ಉಂಟಾದ ಒತ್ತಡ ಹಾಗೂ ಭಯವೇ ವಿದ್ಯಾರ್ಥಿಗಳು ಈ ಕಠಿಣ ಹೆಜ್ಜೆ ಇಡಲು ಕಾರಣ ಎನ್ನಲಾಗಿದೆ. ರಾತ್ರಿ ಪಾಳಯದಲ್ಲಿ ಕಾವಲುಗಾರ (ವಾಚ್‌ಮ್ಯಾನ್) ಇಲ್ಲದಿರುವುದನ್ನು ಗಮನಿಸಿದ ಈ ವಿದ್ಯಾರ್ಥಿಗಳು, ನಸುಕಿನ ಜಾವ ಶಾಲೆಯ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದಾರೆ.
ಮಾಹಿತಿ ಮುಚ್ಚಿಡುತ್ತಿರುವ ಆರೋಪ: ಈ ಘಟನೆ ಕುರಿತಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಸತಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ. ನಾಪತ್ತೆಯಾಗಿರುವ ಮಕ್ಕಳ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ, ‘ಮಕ್ಕಳು ಸಿಕ್ಕಿದ್ದಾರೆ’, ‘ಅವರು ಬೇರೆ ಕಡೆ ಸುರಕ್ಷಿತವಾಗಿದ್ದಾರೆ’ ಎಂಬಂತಹ ಹಾರಿಕೆಯ ಉತ್ತರಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಈ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಸ್ತುತ ನಾಪತ್ತೆಯಾಗಿರುವ ಮಕ್ಕಳಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಆಪ್ತಸಮಾಲೋಚನೆಯ ಅಗತ್ಯತೆ: ಒಂದೆಡೆ ಶಿಕ್ಷಣ ಇಲಾಖೆ, ಅಧಿಕಾರಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಗಳಿಸಲು ಪ್ರೇರಣೆ ನೀಡುತ್ತಿದ್ದರೆ, ಮತ್ತೊಂದೆಡೆ ಇಂತಹ ಘಟನೆಗಳು ಪೋಷಕರಲ್ಲಿ ಹಾಗೂ ಶಿಕ್ಷಣ ವಲಯದಲ್ಲಿ ತೀವ್ರ ಆತಂಕ ಮೂಡಿಸಿವೆ. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಲು ಕೇವಲ ಪಾಠವಷ್ಟೇ ಅಲ್ಲದೆ, ಸೂಕ್ತ ಆಪ್ತಸಮಾಲೋಚನೆ (Counseling) ಹಾಗೂ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯದ ತುರ್ತು ಅಗತ್ಯವಿದೆ ಎಂಬುದನ್ನು ಈ ಘಟನೆ ಎತ್ತಿತೋರಿಸುತ್ತಿದೆ.