ಅರ್ಹರ BPL ರೇಷನ್ ಕಾರ್ಡ್ ರದ್ದಾಗಿದ್ದರೆ ಮರು ಅರ್ಜಿ ಸಲ್ಲಿಸಲು ಅವಕಾಶ; ಆಹಾರ ಸಚಿವ ಮುನಿಯಪ್ಪ!

ಬೆಂಗಳೂರು (ನ.18): ರಾಜ್ಯ ಸರ್ಕಾರದಿಂದ ಬರೋಬ್ಬರಿ 11 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ವರದಿ ಆಗುತ್ತಿದ್ದಂತೆಯೇ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದ ಅಡಿಕೆಯಂತಾಗಿದೆ. ಹೀಗಾಗಿ, ಆಹಾರ ಇಲಾಖೆ ಸಚಿವರು ಹಾಗೂ ಅಧಿಕಾರಿಗಳನ್ನು ತುರ್ತು ಸಭೆ ಕರೆದ ಸಿಎಂ ಸಿದ್ದರಾಮಯ್ಯ ಅವರು ತರಾಟೆ ತೆಗೆದುಕೊಂಡ ಬೆನ್ನಲ್ಲಿಯೇ ಅರ್ಹರ ರೇಷನ್ ಕಾರ್ಡ್‌ಗಳು ರದ್ದಾಗಿದ್ದರೆ, ಅಂಥವರಿಗೆ ಮರು ಅರ್ಜಿ ಸಲ್ಲಿಕೆ ಮಾಡಿ ಅಗತ್ಯವಿರುವ ರೇಷನ್ ಕಾರ್ಡ್ ಕೊಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸಭೆಯಲ್ಲಿ ತಿಳಿಸಿದ್ದಾರೆ.

ಆಹಾರ ಸಚಿವ ಮುನಿಯಪ್ಪ: ರಾಜ್ಯದಲ್ಲಿ ಯಾವುದೇ ಬಿಪಿಎಲ್ (BPL) ಅಥವಾ ಎಪಿಎಲ್ (APL) ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಿಲ್ಲ. ಆದರೆ, ಆದಾಯ ತೆರಿಗೆ ಪಾವತಿ ಮಾಡುವವರಿಗೆ ನೀಡಲಾಗಿದ್ದ ಎಲ್ಲ ಬಿಪಿಎಲ್ ಕಾರ್ಡ್‌ಗಳನ್ನು ಇದೀಗ ರದ್ದು ಮಾಡಿದ್ದೇವೆ. ಇಲ್ಲಿ ಮುಖ್ಯವಾಗಿ ಪಡಿತರ ಚೀಟಿಯ ನಿಯಮಾವಳಿಗಳಂತೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವುದಕ್ಕೆ ಅರ್ಹತೆ ಇಲ್ಲದ ಲಕ್ಷಾಂತರ ಜನರು ಬಿಪಿಎಲ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇಲ್ಲದವರನ್ನು ಎಪಿಎಲ್ ಕಾರ್ಡ್‌ಗಳಿಗೆ ಶಿಫ್ಟ್ ಮಾಡುತ್ತಿದ್ದೇವೆ. ರಾಜ್ಯದಲ್ಲಿ 11 ಲಕ್ಷ ಪಡಿತರ ಚೀಟಿಗಳು ರದ್ದಾಗಿದೆ ಅನ್ನೋದು ಬಿಜೆಪಿ ಸುಳ್ಳಿನ ಆರೋಪವಾಗಿದೆ ಎಂದು ಸ್ಪಷ್ಟನೆಯನ್ನು ನೀಡಿದರು.

ಸಿಎಂ ಸಿದ್ದರಾಮಯ್ಯ: ನೀವು ಏನಾದರೂ ಮಾಡಿ, ರೇಷನ್ ಕಾರ್ಡ್ ಕುರಿತಂತೆ ರಾಜ್ಯದಲ್ಲಿ ಉಂಟಾಗಿರುವ ಸಮಸ್ಯೆ ಹಾಗೂ ಗೊಂದಲ ನಿವಾರಣೆ ಮಾಡಬೇಕು. ನಿಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ಮಾಡಿ ಈಗ ಉಂಟಾಗಿರುವ ಗೊಂದಲ ನಿವಾರಣೆ ಮಾಡಬೇಕು ಎಂದು ಮತ್ತೊಮ್ಮೆ ಸೂಚಿಸಿದರು.

ಸಚಿವ ಮುನಿಯಪ್ಪ: ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿರುವ ಕಾರ್ಡ್‌ದಾರರ ಪೈಕಿ ಒಂದು ವೇಳೆ ಅರ್ಹರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದ್ದೆರೆ, ಅಂತಹ ಫಲಾನುಭವಿಗಳು ಮರು ಅರ್ಜಿ ಹಾಕುವುದಕ್ಕೆ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು. ಕೂಡಲೇ ಈ ಗೊಂದಲಕ್ಕೆ ಯಾವ ರೀತಿ ಪರಿಹಾರ ಮಾಡಬೇಕು, ಸಮಸ್ಯೆ ನಿವಾರಣೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದರು.

Source : https://kannada.asianetnews.com/state/eligible-to-re-apply-if-bpl-ration-card-is-cancelled-food-minister-muniyappa-sat-sn5jqq

Leave a Reply

Your email address will not be published. Required fields are marked *