ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಂಗಳವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಗೌರವಾರ್ಥ ಕೇರಳ ಸರ್ಕಾರ ಇಂದು ಸಾರ್ವಜನಿಕ ರಜೆ ಘೋಷಿಸಿದೆ.

Oommen Chandy passed away : ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಂಗಳವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮೂಲಗಳ ಪ್ರಕಾರ, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಾಂಡಿ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿಯೇ ತಂಗಿದ್ದರು. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೆಳಿಗ್ಗೆ 4.25 ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ ಅವರಿಗೆ ಗೌರವ ಸೂಚಕವಾಗಿ ಕೇರಳ ಸರ್ಕಾರ ಇಂದು ಸಾರ್ವಜನಿಕ ರಜೆ ಘೋಷಿಸಿದೆ. ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ಕೇರಳದಲ್ಲಿ ಎರಡು ದಿನಗಳ ಶೋಕಾಚರಣೆ ನಡೆಯಲಿದೆ.
ಹಿರಿಯ ಕಾಂಗ್ರೆಸ್ ನಾಯಕನ ನಿಧನವನ್ನು ಅವರ ಪುತ್ರ ಚಾಂಡಿ ಉಮ್ಮನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಕಟಿಸಿದ್ದಾರೆ. “ಅಪ್ಪ ನಿಧನರಾಗಿದ್ದಾರೆ” ಎಂದು ಉಮ್ಮನ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
ಚಾಂಡಿ ನಿಧನಕ್ಕೆ ಕೇರಳದ ಹಾಲಿ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. ಒಂದೇ ವರ್ಷ ವಿಧಾನಸಭೆಗೆ ಆಯ್ಕೆಯಾಗಿದ್ದೆವು. ಒಂದೇ ಹಂತದಲ್ಲಿ ವಿದ್ಯಾರ್ಥಿ ಜೀವನದ ಮೂಲಕ ರಾಜಕೀಯ ಮುಂಚೂಣಿಗೆ ಬಂದಿದ್ದು, ಏಕಕಾಲದಲ್ಲಿ ಸಾರ್ವಜನಿಕ ಜೀವನ ನಡೆಸಿದ್ದೆವು. ಇಂದು ಉಮ್ಮನ್ ಚಾಂಡಿ ಅಗಲಿರುವುದು ಅತ್ಯಂತ ಕಷ್ಟಕರವಾಗಿದೆ ಎಂದಿದ್ದಾರೆ.
ವಿಜಯನ್ ಅವರಲ್ಲದೆ, ವಿಧಾನಸಭೆ ಸ್ಪೀಕರ್ ಎಎನ್ ಶಂಸೀರ್, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್, ಕೇಂದ್ರ ಸಚಿವ ವಿ ಮುರಳೀಧರನ್ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಚಾಂಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉಮ್ಮನ್ ಚಾಂಡಿ ಒಟ್ಟು ಏಳು ವರ್ಷಗಳ ಕಾಲ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. (2004-2006 ಮತ್ತು ಮತ್ತೆ 2011-2016).
ಚಾಂಡಿ ಅವರು ಕೆ ಕರುಣಾಕರನ್ ಮತ್ತು ಎಕೆ ಆಂಟನಿ ನೇತೃತ್ವದ ವಿವಿಧ ಸರ್ಕಾರಗಳಲ್ಲಿ ಕಾರ್ಮಿಕ, ಗೃಹ ಮತ್ತು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಚಾಂಡಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ ದಾಖಲೆ ನಿರ್ಮಿಸಿದರು.
Source : https://zeenews.india.com/kannada/india/kerala-ex-cm-oommen-chandy-passed-away-146443