ಪೌರಕಾರ್ಮಿಕರು ಕಾಯಕ ಯೋಗಿಗಳು, ಸಿದ್ದರಾಮಯ್ಯ ಆಧುನೀಕ ಜೀತಪದ್ಧತಿ ಮುಕ್ತ ನೀತಿ ಹರಿಕಾರ: ಮಾಜಿ ಸಚಿವ ಹೆಚ್.ಆಂಜನೇಯ ಬಣ್ಣನೆ.

ಚಿತ್ರದುರ್ಗದಲ್ಲಿ ಪೌರಕಾರ್ಮಿಕರ ಸಮಾಲೋಚನಾ ಸಭೆ

ಚಿತ್ರದುರ್ಗ, ಜೂ.9:ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದಷ್ಟು ಅನುಕೂಲ ಪೌರಕಾರ್ಮಿಕರಿಗೆ ಸಿದ್ದರಾಮಯ್ಯ ಒದಗಿಸಿದ್ದಾರೆ. ಇನ್ನಷ್ಟು ಬೇಡಿಕೆಗಳು ಶೀಘ್ರ ಈಡೇರಿಸುವ ಭರವಸೆ ಇದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.

ರಾಜ್ಯ ಪೌರಕಾರ್ಮಿಕ ಸಂಘದಿಂದ ನಗರದ ಗಾಯತ್ರಿ ಕಲ್ಯಾಣ ಮಂಪಟದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಪೌರಕಾರ್ಮಿಕರ ಸಮಾವೇಶದಲ್ಲಿ ಪ್ರೊ.ಬಿ.ಕೃಷ್ಣಪ್ಪ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪೌರಕಾರ್ಮಿಕರ ಬದುಕು ಅತ್ಯಂತ ನಿಕೃಷ್ಠ. ಲಕ್ಷ-ಲಕ್ಷ ಕೊಟ್ಟರೂ ಯಾರೂ ಮಾಡದ ಕೆಲಸ ಮಾಡುತ್ತಾರೆ. ಶೌಚಗುಂಡಿ, ಚರಂಡಿಗೆ ಇಳಿದು ಕೆಲಸ ಮಾಡುವುದು ಅತ್ಯಂತ ಅಮಾನವೀಯ. ಆದರೂ ಸಮಾಜದ ಹಿತದೃಷ್ಠಿಗಾಗಿ, ಜನರ ಆರೋಗ್ಯಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿರುವ ಪೌರಕಾರ್ಮಿಕರು ನಿಜವಾದ ಕಾಯಕಯೋಗಿಗಳು ಎಂದು ಬಣ್ಣಿಸಿದರು.
2013-18ರ ಸಿದ್ದರಾಮಯ್ಯ ಸರ್ಕಾರದ ಅವಧಿ ಪೌರಕಾರ್ಮಿಕರ ಪಾಲಿಗೆ ಸುವರ್ಣಯುಗವಾಗಿತ್ತು. ಈಗಲೂ ಅಂತಹದ್ದೇ ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ ಉಳಿದವರನ್ನು ಖಾಯಂ ಮಾಡಲು ನಾವೆಲ್ಲರೂ ಹೋಗಿ ಅವರಲ್ಲಿ ಕೋರುತ್ತೇವೆ ಎಂದು ತಿಳಿಸಿದರು.
ಪೌರಕಾರ್ಮಿಕರು ಬಸವಲಿಂಗಪ್ಪ, ಐಪಿಡಿ ಸಾಲಪ್ಪ ಅವರನ್ನು ಸದಾ ಸ್ಮರಿಸಬೇಕು. ಜೊತೆಗೆ ದೇವರಾಜ ಅರಸು, ಸಿದ್ದರಾಮಯ್ಯ ಅವರು ನಮಗಾಗಿ ಅನೇಕ ಯೋಜನೆಗಳನ್ನು ಜಾರಿಮಾಡಿದ್ದು, ಈ ವಿಷಯದಲ್ಲಿ ಕೃತಜ್ಞರಾಗಿರಬೇಕು ಎಂದರು.

ಪೌರಕಾರ್ಮಿಕರ ಎಲ್ಲ ಬೇಡಿಕೆಗಳನ್ನು ನಾವೆಲ್ಲರೂ ಸಿಎಂ ಸಿದ್ದರಾಮಯ್ಯ ಅವರ ಬಳಿಗೆ ಈಡೇರಿಸುವಂತೆ ಕೋರುತ್ತೇವೆ. ಅವರು ನಿಜಕ್ಕೂ ಸ್ಪಂದಿಸುತ್ತಾರೆ. ಆದರೆ, ಅದಕ್ಕೆ ತಕ್ಕಂತೆ ನೀವುಗಳು ಬದಲಾಗಬೇಕು. ಆರೋಗ್ಯದ ಕಡೆ ಗಮನಹರಿಸಬೇಕು. ಮಕ್ಕಳ ಶಿಕ್ಷಣ, ಮನೆ, ಕುಟುಂಬ ನಿರ್ವಹಣೆಗೆ ಆದ್ಯತೆ ನೀಡಬೇಕು. ಗಳಿಸಿದ ಹಣ ಕುಡಿತಕ್ಕೆ ವೆಚ್ಚ ಮಾಡದೇ ಉತ್ತಮ ಜೀವನ ನಡೆಸಲು ಮೀಸಲಿಡಬೇಕು ಎಂದು ತಿಳಿಸಿದರು.

ಯುಜಿಡಿ, ಕಸ ಸಂಗ್ರಹಣೆ ವಾಹನ ಚಾಲಕರು, ಕಸ ಎತ್ತುವವರು, ಕಸ ವಿಂಗಡಿಸುವವರನ್ನು ಪೌರಕಾರ್ಮಿಕರು ಎಂದು ಪರಿಗಣಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಜೊತೆಗೆ ಗೃಹಭಾಗ್ಯ ಯೋಜನೆಯಡಿ ಎಲ್ಲ ಪೌರಕಾರ್ಮಿಕರಿಗೆ ಮನೆ, ನಿವೇಶನ ಒದಗಿಸಲು ತಕ್ಷಣ ಸ್ಥಳೀಯ ಸಂಸ್ಥೆಗಳು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೇ ನಾನೇ ಸರ್ಕಾರಿ ಜಾಗಕ್ಕೆ ಪೌರಕಾರ್ಮಿಕರನ್ನು ಕರೆದುಕೊಂಡು ಹೋಗಿ ಗುರುತು ಹಾಕಿ ಹಂಚಿಕೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪೌರಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ, ಮೈಸೂರು ಮಾಜಿ ಮೇಯರ್ ನಾರಾಯಣ್ ಮಾತನಾಡಿ, ಗುಜರಾತ್ ರಾಜ್ಯದಲ್ಲೂ ಪೌರಕಾರ್ಮಿಕರ ನೇಮಕಾತಿ ಹೊರಗುತ್ತಿಗೆ ಪದ್ಧತಿಯಲ್ಲಿದೆ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಅನಿಷ್ಠ ಪದ್ಧತಿ ರದ್ದುಮಾಡಿ, ನೇರ ವೇತನ ಪಾವತಿ ಜಾರಿಗೊಳಿಸಿದ್ದಾರೆ. ಜೊತೆಗೆ ಸಾವಿರಾರು ಮಂದಿಯನ್ನು ಖಾಯಂ ಗೊಳಿಸಿದ್ದಾರೆ. ಇನ್ನಷ್ಟು ಮಂದಿ ಉಳಿದಿದ್ದು, ಅವರನ್ನು ಖಾಯಂ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.

ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವ ವಾಹನಗಳ ಚಾಲಕರು, ಸೇವಕರು, ಕಸ ವಿಂಗಡಿಸುವ ಮಂದಿಯನ್ನು ಖಾಯಂ ಮಾಡಬೇಕಾಗಿದೆ. ಗಟಾರ್‍ದಲ್ಲಿ ಇಳಿದು ಕೆಲಸ ಮಾಡುವ ಮಂದಿಯನ್ನು ಹೊರಗುತ್ತಿಗೆ ಪದ್ಧತಿಯಿಂದ ಬಿಡುಗಡೆಗೊಳಿಸಿ ನೇರ ನೇಮಕಾತಿಗೆ ಒಳಪಡಿಸಬೇಕು. ಈ ಸಂಬಂಧ ಶೀಘ್ರ ಮುಖ್ಯಮಂತ್ರಿ ಬಳಿಗೆ ಆಂಜನೇಯ, ನಾನು ಸೇರಿ ಸಂಘದ ಪದಾಧಿಕಾರಿಗಳ ನೇತೃತ್ವದ ನಿಯೋಗ ತೆರಳಿ ಮನವಿ ಮಾಡಲಾಗುದು ಎಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಪೌರಕಾರ್ಮಿಕರ ಕೆಲಸ ಯಾರೂ ಮಾಡುವುದಿಲ್ಲ. ಆದರೆ, ಅವರಿಗೆ ವೇತನ ಸೇರಿ ಅನೇಕ ಸೌಲಭ್ಯಗಳನ್ನು ಸರ್ಕಾರ ನೀಡಲು ಮೀನಾಮೇಷ ಎಣಿಸಬಾರದು. ಜೊತೆಗೆ ಅವರ ನೇಮಕಾತಿ ಸಂದರ್ಭದಲ್ಲಿಯೇ ನಿವೇಶನ, ಮನೆ ಸೌಲಭ್ಯ ಕೊಡಬೇಕು. ನಮ್ಮಗಳ ಆರೋಗ್ಯ ಕಾಪಾಡುವ ಜನರ ಬದುಕು ರಕ್ಷಿಸುವ ಕಾರ್ಯ ಸರ್ಕಾರದ್ದಾಗಿದೆ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಜು ಮಾತನಾಡಿ, ಪೌರಕಾರ್ಮಿಕರ ಬದುಕು ಶೋಚನಿಯವಾಗಿದೆ. ಅದರೆ, ಸರ್ಕಾರ ಖಾಯಂ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಬೇಸರಿಸಿದರು.
ವಯೋಮಿತಿ ಸಡಿಲಗೊಳಿಸಬೇಕು, ಗುತ್ತಿಗೆ ಪದ್ಧತಿ ರದ್ದಾಗಬೇಕು, ಆರೋಗ್ಯ ಸಂಜೀವಿನಿ ಸೌಲಭ್ಯ ಸಿಗಬೇಕು, ನೇರ ನೇಮಕಾತಿ ಪದ್ಧತಿ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಸಂಘದ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.

ಪೌರಸೇವಾ ನೌಕರ ಸಂಘದ ಜಿಲ್ಲಾಧ್ಯಕ್ಷ ಡಿ.ದುರುಗೇಶಪ್ಪ, ನಗರಸಭೆ ಅಧ್ಯಕ್ಷೆ ಸುಮಿತಾ, ಆಯುಕ್ತೆ ರೇಣುಕಾ, ಮಾಜಿ ಅಧ್ಯಕ್ಷ ಗೊಪ್ಪೆ ಮಂಜುನಾಥ್, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು, ಜಗದೀಶ್, ಓಬಳೇಶ್, ಯತಿರಾಜ್, ದಾಸ್, ಗಂಗಾಧರ್, ಮಂಜುನಾಥ್ ನಾಯಕನಹಟ್ಟಿ, ಹರ್ಷದ್, ನಾಗಪ್ಪ ಹೊಸದುರ್ಗ, ಚಕ್ರವರ್ತಿ, ಶ್ರೀನಿವಾಸ್ ಇತರರಿದ್ದರು.

Leave a Reply

Your email address will not be published. Required fields are marked *