ಉತ್ತರದಲ್ಲಿ ನಿಲ್ಲದ ಹೀಟ್​​ ಸ್ಟ್ರೋಕ್​ ಅಟ್ಟಹಾಸ.. ಅತಿಸಾರಕ್ಕೆ ನಾಲ್ಕು ಮಂದಿ ಬಲಿ!

ಬಿಸಿಲಿನ ಝಳ ಮತ್ತು ಕಡಿಮೆ ತೇವಾಂಶದಿಂದ ಜನತೆಯ ಸ್ಥಿತಿ ಶೋಚನೀಯವಾಗಿದೆ. ಏತನ್ಮಧ್ಯೆ, ಅತಿಸಾರದಿಂದ 4 ಜನರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಗೋರಖ್‌ಪುರ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರು ಬೇಸಿಗೆಯಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

ಗೋರಖ್‌ಪುರ( ಉತ್ತರಪ್ರದೇಶ): ದಿನೆ ದಿನೇ ಹೆಚ್ಚುತ್ತಿರುವ ತಾಪಮಾನ ಹೆಚ್ಚಳದಿಂದ ಉತ್ತರ ಭಾರತ ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಟ್​ ಸ್ಟ್ರೋಕ್​​ನಿಂದ ಉತ್ತರಭಾರತದಲ್ಲಿ ನೂರಾರು ಜನ ಬಲಿಯಾಗಿದ್ದಾರೆ ಎಂದು ವರದಿ ಆಗುತ್ತಿದೆ. ಉತ್ತರಪ್ರದೇಶದಲ್ಲಿ ಮೊನ್ನೆ ಕೇವಲ 24 ಗಂಟೆಯಲ್ಲಿ 12 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಈ ಘಟನೆ ಹಸಿರಾಗಿರುವಂತೆಯೇ ಉತ್ತರ ಪ್ರದೇಶದ ಗೋರಖ್​​ಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಅತಿಸಾರದಿಂದ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬಿಸಿಲಿನ ತಾಪಕ್ಕೆ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬಿಸಿಲಿನ ಝಳದಿಂದ ಆಗುತ್ತಿರುವ ವಾಂತಿ – ಭೇದಿ, ನಿರ್ಜಲೀಕರಣ, ಸುಸ್ತು, ಜ್ವರ ಸೇರಿದಂತೆ ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆಯಲು ಜನ ಆಸ್ಪತ್ರೆಗಳತ್ತ ಧಾವಿಸಿ ಬರುತ್ತಿದ್ದಾರೆ. ಹೀಗಾಗಿ ಉತ್ತರ ಪ್ರದೇಶದ ಆಸ್ಪತ್ರೆಗಳಲ್ಲಿ ಬೆಡ್​​ಗಳು ಸಂಪೂರ್ಣ ಭರ್ತಿಯಾಗಿದ್ದು, ಅನಾರೋಗ್ಯ ಪೀಡಿತರಿಂದ ತುಂಬಿ ತುಳುಕುತ್ತಿವೆ.

ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳೇ ಇರಲಿ, ಇಲ್ಲಿ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಬಿಸಿಲಿನ ತಾಪ ತಪ್ಪಿಸಲು ಜನರು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಇದರಲ್ಲಿ ನಿರ್ಲಕ್ಷ್ಯ ವಹಿಸಿದವರು ಪ್ರಾಣಾಪಾಯಕ್ಕೆ ಒಳಗಾಗುತ್ತಿದ್ದಾರೆ. ಗೋರಖ್‌ಪುರ ಜಿಲ್ಲಾ ಆಸ್ಪತ್ರೆಯ ಅಂಕಿ – ಅಂಶಗಳ ಪ್ರಕಾರ, ಇಲ್ಲಿ ಅತಿಸಾರದಿಂದ 4 ಜನರು ಸಾವನ್ನಪ್ಪಿದ್ದಾರೆ. ಸ್ವತಃ ಗೋರಖ್‌ಪುರ ಜಿಲ್ಲಾ ಆಸ್ಪತ್ರೆ ಮುಖ್ಯ ವೈದ್ಯಕೀಯ ಅಧೀಕ್ಷಕರು ಖಚಿತಪಡಿಸಿದ್ದಾರೆ

ಜನರು ಸುರಕ್ಷಿತವಾಗಿ ಮನೆಯಲ್ಲಿರಬೇಕು.. ಆಹಾರ ಸೇವೆಯಲ್ಲಿ ಮುಂಜಾಗ್ರತೆ ವಹಿಸುವಂತೆ ವೈದ್ಯರ ಸಲಹೆ: ನಿತ್ಯವೂ ಹೆಚ್ಚುತ್ತಿರುವ ಸೂರ್ಯನ ಶಾಖ ಹಾಗೂ ಅದರಿಂದಾಗುತ್ತಿರುವ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿರುವ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರ ಠಾಕೂರ್, ಜನರು ರಸ್ತೆ, ಬಿಸಿಲು ಮತ್ತು ಬೇಸಿಗೆಯಲ್ಲಿ ತೆರೆದ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಆಗ ಮಾತ್ರ ಅತಿಸಾರ ಇತ್ಯಾದಿ ರೋಗಗಳಿಂದ ಜನ ಪಾರಾಗಬಹುದು. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಔಷಧ ಮತ್ತು ಮಕ್ಕಳ ವಿಭಾಗದ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 25 ರಿಂದ 40ಕ್ಕೆ ಹಾಸಿಗೆಗಳನ್ನು ಹೆಚ್ಚಿಸಲಾಗಿದೆ. 23 ಹಾಸಿಗೆಗಳ ವಿಶೇಷ ವಾರ್ಡ್ ಕೂಡಾ ರೆಡಿ ಮಾಡಲಾಗಿದೆ. ಅಗತ್ಯ ಬಿದ್ದರೆ ವಿಶೇಷ ವಾರ್ಡ್​ಗಳನ್ನು ಬಳಸಿಕೊಂಡು, ಜನರ ಸೇವೆ ಮಾಡಲು ರೆಡಿ ಇದ್ದೇವೆ ಎಂದು ಅವರು ಹೇಳಿದ್ದಾರೆ.

ಸೂರ್ಯನ ಶಾಖ ಹೆಚ್ಚಳದಿಂದಾಗಿ, ಬೇಸಿಗೆ ದಗೆ ತಡೆದುಕೊಳ್ಳಲಾರದೇ, ಜನ ಆಸ್ಪತ್ರೆಗೆ ಧಾವಿಸಿ ಬರುತ್ತಿರುವುದರಿಂದ ಒಪಿಡಿಗಳು ತುಂಬಿ ತುಳುಕುತ್ತಿವೆ. ಶೇ 25 ಕ್ಕಿಂತ ಹೆಚ್ಚು ರೋಗಿಗಳು ವಾಂತಿ, ಭೇದಿ ಮತ್ತು ಜ್ವರದಿಂದ ಬಳಲುತ್ತಿದ್ದಾರೆ. ಎದೆ, ಐಸಿಯು, ಮಕ್ಕಳು , ಹೃದ್ರೋಗ ಮತ್ತು ಎಲ್ಲಾ ಖಾಸಗಿ ವಾರ್ಡ್‌ಗಳು ಸಹ ರೋಗಿಗಳಿಂದ ಸಂಪೂರ್ಣವಾಗಿ ಭರ್ತಿಯಾಗಿವೆ ಎಂದು ರಾಜೇಂದ್ರ ಠಾಕೂರ್​ ಮಾಹಿತಿ ನೀಡಿದ್ದಾರೆ.

ಬಿಕ್ಕಟ್ಟಿಗೆ ಹೆಚ್ಚುತ್ತಿರುವ ಬಿಸಿಲು ಕಾರಣ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಆದರೆ ಬಹಿರಂಗವಾಗಿ ಬಿಸಿಗಾಳಿ ಎಂದು ಕರೆಯುತ್ತಿಲ್ಲ. ಇದೇ ವೇಳೆ, ಇಲ್ಲಿನ ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಔಷಧ ವಿಭಾಗದಲ್ಲಿ 250 ಹಾಸಿಗೆಗಳನ್ನು ಹೊರತುಪಡಿಸಿ, ಇನ್ನೂ 50 ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಅಧೀಕ್ಷಕ ಠಾಕೂರ್​ ಹೇಳಿದ್ದಾರೆ.

ಗೋರಖ್‌ಪುರ ವೈದ್ಯಕೀಯ ಕಾಲೇಜು ನೆಹರೂ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್‌ ಕುಮಾರ್‌ ರೈ ಈ ಬಗ್ಗೆ ಮಾತನಾಡಿ, ಬಿಸಿಲಿನ ತಾಪ ಹೆಚ್ಚಿರುವುದರಿಂದ ಔಷಧ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇನ್ನು ಮಕ್ಕಳಿಗೆ ತೊಂದರೆಯಾದರೆ ಕೂಡಲೇ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಇದೇ ವೇಳೆ, ಮೆದುಳು ಜ್ವರಕ್ಕಾಗಿ ವಾರ್ಡ್‌ನ ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಸಿಎಂಒ ಡಾ.ಅಶುತೋಷ್ ಕುಮಾರ್ ದುಬೆ ತಿಳಿಸಿದ್ದಾರೆ. ಇದಲ್ಲದೇ ಇಡೀ ಜಿಲ್ಲೆಯ ಸಿಎಚ್‌ಸಿ ಮತ್ತು ಪಿಎಚ್‌ಸಿಗಳಲ್ಲೂ ವ್ಯವಸ್ಥೆ ಹೆಚ್ಚಿಸಲಾಗಿದೆ. ಇಲ್ಲಿಗೆ ಬರುವ ರೋಗಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ತಡೆಗಟ್ಟುವ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಅವರು ಜನರಲ್ಲಿ ದುಬೆ ಅವರು ಮನವಿ ಮಾಡಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/uttaradalli+nilladha+hit+strok+attahaasa+atisaarakke+naalku+mandi+bali+-newsid-n511645906?listname=newspaperLanding&topic=homenews&index=10&topicIndex=0&mode=pwa&action=click

Leave a Reply

Your email address will not be published. Required fields are marked *