ತುಮಕೂರು: ಕರ್ನಾಟಕದ ಜನತೆಯ ಬಹುಕಾಲದ ಕನಸಾದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಯು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಈ ಮಹತ್ವಾಕಾಂಕ್ಷೆಯ ರೈಲ್ವೆ ಯೋಜನೆಯ ಕಾಮಗಾರಿ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಿದ ನಂತರ, ತುಮಕೂರು ಜಿಲ್ಲೆಯ ಶಿರಾದ ಮಿನಿ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು.
2028ರ ಫೆಬ್ರವರಿ ಗಡುವು
ಒಟ್ಟು 192 ಕಿಲೋಮೀಟರ್ ಉದ್ದದ ಈ ನೇರ ರೈಲು ಮಾರ್ಗದ ಕಾಮಗಾರಿಯನ್ನು 2028ರ ಫೆಬ್ರವರಿ ವೇಳೆಗೆ ಸಂಪೂರ್ಣವಾಗಿ ಮುಗಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ದಾವಣಗೆರೆ ಸಮೀಪದ ಆನೆಗೋಡು, ಭರಮಸಾಗರ, ಹೆಬ್ಬಾಳು ಮತ್ತು ಚಿತ್ರದುರ್ಗದವರೆಗೆ ಪ್ರಸ್ತುತ ನಡೆಯುತ್ತಿರುವ ಕೆಲಸಗಳ ವೇಗವನ್ನು ಅವರು ಪರಿಶೀಲಿಸಿದರು.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಎದುರಾಗಿದ್ದ ಅಡಚಣೆಗಳನ್ನು ನಿವಾರಿಸಿ, ಯೋಜನೆಗೆ ಹೊಸ ವೇಗ ನೀಡಲಾಗಿದೆ. ರಾಯದುರ್ಗ-ತುಮಕೂರು ಮತ್ತು ತುಮಕೂರು-ದಾವಣಗೆರೆ ನಡುವಿನ ಒಟ್ಟು 400ಕ್ಕೂ ಹೆಚ್ಚು ಕಿ.ಮೀ. ರೈಲ್ವೆ ಜಾಲವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಇಲಾಖೆ ಹಗಲಿರುಳು ಶ್ರಮಿಸುತ್ತಿದೆ ಎಂದು ಸೋಮಣ್ಣ ವಿವರಿಸಿದರು.
ಕೇಂದ್ರದಿಂದ ಭರಪೂರ ಅನುದಾನ
ರಾಷ್ಟ್ರದ ಅಭಿವೃದ್ಧಿಯಲ್ಲಿ ಕರ್ನಾಟಕವೂ ಮುಂಚೂಣಿಯಲ್ಲಿರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ, ಕೇಂದ್ರ ಸರ್ಕಾರವು ಈ ಬಾರಿ ರೈಲ್ವೆ ಯೋಜನೆಗಳಿಗಾಗಿ ರಾಜ್ಯಕ್ಕೆ 52,000 ಕೋಟಿ ರೂ. ಗಳ ಬೃಹತ್ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದರು. ಕಳೆದ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಎಲ್ಲಾ ರೈಲ್ವೆ ಯೋಜನೆಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ ಎಂದರು.
ಯಲಹಂಕದಲ್ಲಿ ಮೆಗಾ ಟರ್ಮಿನಲ್
ರೈಲುಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಬೆಂಗಳೂರಿನ ಯಲಹಂಕದಲ್ಲಿ ಸುಮಾರು 5,900 ಕೋಟಿ ರೂ. ವೆಚ್ಚದಲ್ಲಿ ಬೃಹತ್ ‘ಮೆಗಾ ಟರ್ಮಿನಲ್’ ಸ್ಥಾಪಿಸಲಾಗುತ್ತಿದೆ. ಇದು ದೇಶದ ನಾಲ್ಕನೇ ಮತ್ತು ಅತ್ಯಂತ ದೊಡ್ಡ ಟರ್ಮಿನಲ್ ಆಗಿರಲಿದ್ದು, ಕರ್ನಾಟಕದ ಎಲ್ಲಾ ರೈಲುಗಳ ರಿಪೇರಿ ಕಾರ್ಯ ಇಲ್ಲಿ ನಡೆಯಲಿದೆ. ಇದಕ್ಕಾಗಿ ವಿಶೇಷವಾಗಿ 8 ಪಥಗಳ ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸೋಮಣ್ಣ ತಿಳಿಸಿದರು.
ರಸ್ತೆ ಅಭಿವೃದ್ಧಿಗೂ ಚಾಲನೆ
ಶಿರಾ-ಬೈರೇನಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಮೊದಲ ಹಂತವಾಗಿ, ಶಿರಾ-ಬಡವನಹಳ್ಳಿ ನಡುವಿನ 25.20 ಕಿ.ಮೀ. ರಸ್ತೆ ಅಭಿವೃದ್ಧಿಗೆ ಪ್ರಧಾನ ಮಂತ್ರಿಗಳ ಸೂಚನೆ ಮೇರೆಗೆ ಕೇಂದ್ರ ಸರ್ಕಾರ 585 ಕೋಟಿ ರೂ. ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲೇ ಭೂಮಿ ಪೂಜೆ ನಡೆಯಲಿದೆ. ಎರಡನೇ ಹಂತದಲ್ಲಿ ಬಡವನಹಳ್ಳಿಯಿಂದ ಬೈರೇನಹಳ್ಳಿವರೆಗಿನ 52 ಕಿ.ಮೀ. ಸೇರಿ ಒಟ್ಟು 1600 ಕೋಟಿ ರೂ. ಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಮಾರ್ಗದ ಪ್ರಮುಖ ರೈಲು ನಿಲ್ದಾಣಗಳು:
ತುಮಕೂರು-ದಾವಣಗೆರೆ ನೇರ ಮಾರ್ಗದಲ್ಲಿ ಒಟ್ಟು 16 ಹೊಸ ನಿಲ್ದಾಣಗಳು ಬರಲಿವೆ. ಪಟ್ಟಿ ಇಲ್ಲಿದೆ:
- ತುಮಕೂರು (ಹಳೆ ನಿಲ್ದಾಣ)
- ಉರಕೆರೆ
- ತಿಮ್ಮರಾಜನಹಳ್ಳಿ
- ಜೋಗಿಹಳ್ಳಿ
- ಚಕ್ಕನಹಳ್ಳಿ
- ಶಿರಾ
- ತಾವರೆಕೆರೆ
- ಆನೆಸಿದ್ರಿ
- ಹಿರಿಯೂರು
- ಮೇಟಿ ಕುರ್ಕೆ
- ಐಮಂಗಲ
- ಪಾಲವ್ವನಹಳ್ಳಿ
- ದೊಡ್ಡಸಿದ್ಧವನಹಳ್ಳಿ
- ಚಿತ್ರದುರ್ಗ (ಹಳೆ ನಿಲ್ದಾಣ)
- ಸಿರಿಗೆರೆ ಕ್ರಾಸ್
- ಭರಮಸಾಗರ
- ಹೆಬ್ಬಾಳು
- ಆನಗೋಡು
- ತೋಳಹುಣಸೆ (ಹಳೆ ನಿಲ್ದಾಣ)
- ದಾವಣಗೆರೆ (ಹಳೆ ನಿಲ್ದಾಣ)