“ಉದ್ಯಾನ ಶಿಲ್ಪಿ ಜಿ.ಹೆಚ್. ಕೃಂಬಿಗಲ್: ಕನ್ನಡನಾಡನ್ನು ಹಸಿರುಗೊಳಿಸಿದ ಜರ್ಮನ್ ಮಹನೀಯ | ಲೇಖನ: ಚೇತನ ಕುಮಾರ್ ಸಿ”

ಉದ್ಯಾನ ಶಿಲ್ಪಿ ಕೃಂಬಿಗಲ್ ಅವರನ್ನು ಮರೆಯುವುದುಂಟೇ…!?

✍️ ಲೇಖಕ: ಚೇತನ್ ಕುಮಾರ್ ಸಿ

ಕನ್ನಡ ನಾಡಿನ ಬೆಳವಣಿಗೆಯಲ್ಲಿ ಜರ್ಮನ್ನರ ಕೊಡುಗೆ ಪ್ರಮುಖವಾದದ್ದು. ಹಾಗೆ ನೋಡಿದರೆ ಕನ್ನಡದ ಪತ್ರಿಕೆ, ಶಬ್ಧಕೋಶವನ್ನು ಕೊಟ್ಟವರು ಇವರೇ ಕಿಟ್ಟೆಲ್ ಶಬ್ಧಕೋಶ ನೀಡಿದರೆ, ಮೋಗ್ಲಿಂಗ್ ‘ಮಂಗಳೂರು ಸಮಾಚಾರ ಪತ್ರಿಕೆ’ ನೀಡಿದರು. ಕನ್ನಡದ ಬಗೆಗೆ ಇವರಿಗದ್ದ ಆಸಕ್ತಿ, ಮತ್ತು ಅಭಿಮಾನದಿಂದಾಗಿ ಈ ಕಾರ್ಯವು ಇವರಿಂದಾಯಿತು. ಸಂತೆ ಪೇಟೆಯ ಬೀದಿಯಲ್ಲಿ ನಿಂತ ತನ್ನ ಕೈಯಲ್ಲೊಂದು ವಸ್ತು ಹಿಡಿದು ಅದರ ಹೆಸರು ಏನೆಂದು ಕರೆಯುತ್ತಾರೆ ಎಂದು ಹಲವರ ಬಳಿ ಕೇಳಿ ತಿಳಿದುಕೊಂಡು ಶಬ್ಧವನ್ನು ಕಂಡುಕೊAಡು, ಅದಕ್ಕಿರುವ ಪರ್ಯಾಯಪದವನ್ನು ಬರೆದಕೊಳ್ಳುವುದರ ಮೂಲಕ ಕನ್ನಡ ಶಬ್ಧಗಳನ್ನು ಸಂಗ್ರಹಿಸಿದ ಕೀರ್ತಿ ರೆವೆರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಗೆ ಸಲ್ಲುತ್ತದೆ.

1 ಜುಲೈ 1843 ರಲ್ಲಿ ಮೊದಲಬಾರಿಗೆ ಕನ್ನಡದ ಪತ್ರಿಕೆಯೊಂದು ಹೊರಬರುತ್ತದೆ. ಇದರ ಸಂಪಾದಕರಾಗಿದ್ದವರು ರೆವರೆಂಡ್ ಹರ್ಮನ್ ಮೋಗ್ಲಿಂಗ್ ಧರ್ಮ ಪ್ರಚಾರಕರಾಗಿ ಬಂದು ಅದರ ಜೊತೆಗೆ ಸ್ಥಳೀಯ ಜನರಿಗೆ ಬೇಕಾದ ಮಾಹಿತಿ, ಸುದ್ಧಿಸಮಾಚಾರ ಗಳನ್ನು ಒಳಗೊಂಡAತೆ ಹಲವು ಮಾಹಿತಿಗಳನ್ನು ತಿಳಿಸುವುದಾಗಿತ್ತು. ಹಾಗಾಗಿ ಇದು ಕನ್ನಡದ ಮೊದಲ ಪತ್ರಿಕೆಯೆಂದೆನಿಸಿತು. ಇವೆರಡನ್ನು ನೀಡಿದವರು ಜರ್ಮನ್ನರೇ ಇದರ ಜೊತೆಗೆ ಮತ್ತೊಂದು ಹೆಸರು ‘ಗುಸ್ತಾವ್ ಹರ್ಮನ್ ಕೃಂಬಿಗಲ್’ ಬೆAಗಳೂರಿನ ಲಾಲ್ ಬಾಗ್ ಪಕ್ಕದ ರಸ್ತೆಗೆ ಕೃಂಬಿಗಲ್ ರಸ್ತೆ ಎಂದು ಕಂಡಾಗ ಇದೇನು ಕೃಂಬಿಗಲ್ ಅಂದರೆ? ಎಂದು ಅನಿಸುತ್ತಿತ್ತು. ಆದರೆ ಯಾರಲ್ಲಿ ಕೇಳುವುದು? ಎಂದು ಸುಮ್ಮನಾಗಿದ್ದೆ ಅದಾಗಿ ಹಲವು ವರ್ಷಗಳ ನಂತರ ಗ್ರಂಥಾಲಯದ ಪುಸ್ತಕವೊಂದರಲ್ಲಿ ಕೃಂಬಿಗಲ್ ಎಂಬ ಪದ ಕಂಡೊಡನೆ ಏನಿರಬಹುದು ಎಂದು ಹುಡುಕಾಡಿದಾಗ ಸಿಕ್ಕದ್ದು, ಇಂದು ಎಲ್ಲಿಯಾದರೂ ನಾವು ‘ಉದ್ಯಾನವನ’ ವನ್ನು ಕಂಡರೆ ಸ್ಮರಿಸಬೇಕಿರುವ ಹೆಸರೇ ಕೃಂಬಿಗಲ್.

ಕೃಂಬಿಗಲ್ ಜರ್ಮನ್ ದೇಶದಲ್ಲಿ 18 ಡಿಸೆಂಬರ್ 1865ರಲ್ಲಿ ಜನಿಸಿದರು. ತಮ್ಮ ಶಿಕ್ಷಣವನ್ನು ಮುಗಿಸಿ ತೋಟಗಾರಿಕೆ ತರಬೇತಿಯನ್ನು ಪಡೆದರು. ತೋಟಗಾರಿಕೆ, ಸಸ್ಯೋದ್ಯಾನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ಬಲು ಪ್ರೀತಿಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇಂಗ್ಲೇAಡ್ ನಲ್ಲಿ ಇವರ ಕೆಲಸ, ಚತುರತೆಯನ್ನು ಕಂಡು ಬರೋಡಾದ ಮಹಾರಾಜರು ತಮ್ಮಲ್ಲಿಗೆ ಕರೆಸಿಕೊಂಡರು. ಬರೋಡಾದಲ್ಲಿನ ಇಂದಿನ ಬೃಹತ್ ಉದ್ಯಾನಗಳ ನಿರ್ಮಾಣದಲ್ಲಿ ಅಂದಿನ ಇವರ ಕೊಡುಗೆ ಅಪಾರವಾದದ್ದು. ಬರೋಡಾದ ಉದ್ಯಾನವನಗಳ ಆಕರ್ಶಕ ನೋಟ, ವಿವಿಧ ರೀತಿಯ ಗಿಡಗಳು, ಹಲವಾರು ಬಣ್ಣ, ಎಲೆಗಳಿಂದ ಕೂಡಿದ ಸೊಬಗು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಮನಸ್ಸನ್ನು ಆಕರ್ಷಿಸಿತು. ನಂತರ ಬರೋಡಾದ ಮಹಾರಾಜರಿಂದ ಒಪ್ಪಿಗೆ ಪಡೆದು ಮೈಸೂರಿಗೆ ಕರೆದುಕೊಂಡು ಬಂದರು. ಅಲ್ಲಿಂದ ಮೈಸೂರಿನ ಉದ್ಯಾನ ಕ್ಷೇತ್ರವೇ ಬದಲಾಯಿತು.

ಇಂದಿಗೂ ಕೆ.ಆರ್.ಎಸ್ ಡ್ಯಾಂ ನ ಭಾಗದಲ್ಲಿ ಕಂಡುಬರುವ ಉದ್ಯಾನದ ನಿರ್ಮಾಣದ ಶಿಲ್ಪಿ ಇವರೇ. ಬೆಂಗಳೂರನ್ನು ‘ಗ್ರೀನ್ ಸಿಟಿ’ ಎಂದು ಕರೆಯುವಲ್ಲೂ ಇವರ ಪಾತ್ರ ಪ್ರಧಾನವಾದದ್ದು. ಇಂದಿಗೂ ಯಾವುದೇ ನಗರದಲ್ಲಿ ಹೊಸದಾದ ಬಡಾವಣೆಯ ನಕ್ಷೆ ನೋಡಿದರೆ ಅದರಲ್ಲಿ ಒಂದು ಉದ್ಯಾನವನ ಇರಲೇಬೇಕು ಎಂಬುದು ಸರ್ಕಾರದ ನಿಯಮವಾಗಿದೆ. ಆ ನಿಯಮದ ಜಾರಿಗೆ ಮೂಲ ಕಾರಣಕರ್ತರು ಇವರೇ. ಜೊತೆಗೆ ಬೆಂಗಳೂರಿನ ಪ್ರಸಿದ್ಧ ‘ಲಾಲ್ ಬಾಗ್’ ನ ಕ್ಯುರೇಟರ್ ಆದ ನಂತರ ಇವರ ಕಲ್ಪನೆಯಲ್ಲಿ ಹಲವಾರು ವಿಶೇಷತೆಗಳು ಮೂಡಿಬಂದಿದೆ. ಲಾಲ್ ಬಾಗ್ ನಲ್ಲಿ ಮಕ್ಕಳು, ಯುವಕರು, ವೃದ್ಧರಾದಿಯಾಗಿ ವಿಹಾರ ಮಾಡುವ ಜಾಗಗಳಲ್ಲಿ ಹಲವು ರೀತಿಯ ಹೂವಿನ ಗಿಡಗಳು, ಹಣ್ಣಿನ ಮರಗಳು, ವಿದೇಶಿ ಸಸ್ಯಸಂಕುಲಗಳನ್ನು, ಅವುಗಳಲ್ಲಿ ತಮ್ಮ ಸಂಸಾರ ನಡೆಸುತ್ತಿರುವ ಹಲವು ರೀತಿಯ ಪಕ್ಷಿಗಳ ಕುಟುಂಬಗಳು, ಅವುಗಳ ಕೊರಳದನಿಯ ಇಂಚರವನ್ನು ಆಲಿಸುತ್ತ, ನೋಡುತ್ತ ವಿಹರಿಸುವಾಗ ಸಮಯ ಕಳೆದದ್ದೇ ತಿಳಿಯುವುದಿಲ್ಲ.

ಮೈಸೂರು ಉದ್ಯಾನ ಕಲಾ ಸಂಘ’ ಹೆಸರಿನಲ್ಲಿ ಉದ್ಯಾನಪ್ರಿಯರನ್ನೆಲ್ಲ ಸೇರಿಸಿ ಒಂದು ಸಂಘವನ್ನು ಮಾಡಿದರು. ಇದರ ಮೂಲಕ ಉದ್ಯಾನಗಳ ನಿರ್ಮಾಣ, ನಿರ್ವಹಣೆಯ ಬಗ್ಗೆ ಆಸಕ್ತಿಯನ್ನು ಮೂಡಿಸುವುದಾಗಿತ್ತು. ಇದರ ಜೊತೆಗೆ ತೋಟಗಾರಿಕೆಯನ್ನು ರೈತರಿಗೆ ಪರಿಚಯಿಸಿ ತಾವು ಬೆಳೆಯುತ್ತಿರುವ ಬೆಳೆಯ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮಾರ್ಗವನ್ನು ತಿಳಿಸಿದರು. ಜೊತೆಗೆ ಆಗಾಗ ರೈತರಿಗೆ ಮಣ್ಣು, ಬೆಳೆ, ಗೊಬ್ಬರ ಹೀಗೆ ಕೃಷಿಯ ಬಗ್ಗೆ ಮಾಹಿತಿಯನ್ನು ತಿಳಿಸುವ ಕಾರ್ಯಗಾರ, ತರಬೇತಿಯನ್ನು ನೀಡುವುದರ ಮೂಲಕ ಅವರನ್ನು ಸ್ವಾವಲಂಭಿ ಜೀವನವನ್ನು ನಿರ್ವಹಿಸಲು ಅವಕಾಶ ಕಲ್ಪಿಸಿದರು. ಇಂದು ಪ್ರತೀ ಜಿಲ್ಲೆಯಲ್ಲೂ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಮೊದಲ ಮೆಟ್ಟಿಲು ಹಾಕಿಕೊಟ್ಟವರು ಇವರು. ಇದರ ಮೂಲಕ ಅಲ್ಲಿ ರೈತರು ಬೆಳೆಯುವ ವಿಧಾನ, ಪದ್ಧತಿ, ಎಲ್ಲಾ ಮಾಹಿತಿಯನ್ನು ರೈತರು ನೀಡುವುದು ಇತರ ರೈತರಿಗೆ ಅನುಕೂಲವಾಯಿತು. ಜೊತೆಗೆ ಹಣ್ಣಿನ ಬೆಳೆಗಳಿಗೆ ಮಾರುಕಟ್ಟೆಯನ್ನು ಒದಗಿಸಿಕೊಟ್ಟರು. ಇದರ ಮೂಲಕ ರೈತರು ಬೆಳೆದ ಹಣ್ಣ, ಹೂವು, ಇತರ ಧಾನ್ಯಗಳು ವಿದೇಶಕ್ಕೆ ರಫ್ತಾಗತೊಡಗಿತು. ಇದರ ಮೂಲಕ ಗ್ರಾಮೀಣ ಭಾಗದ ಜನರ ಜೀವನವು ಸುಧಾರಿಸಿತು. ಜರ್ಮನ್ ದೇಶದಲ್ಲಿ ಜನಿಸಿ, ಇಂಗ್ಲೇAಡ್ ನಲ್ಲಿ ಕಾರ್ಯ ಆರಂಭಿಸಿ, ಮೈಸೂರು ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತ ಕನ್ನಡಿಗರಾಗಿಯೇ ಬಾಳಿದ ಜಿ.ಹೆಚ್.ಕೃಂಬಿಗಲ್ 1956ರಲ್ಲಿ ಕನ್ನಡನಾಡಿನಲ್ಲಿಯೇ ನಿಧನರಾದರು. ಬೆಂಗಳೂರಿನ ಮೆಥಾಡಿಸ್ಟ್ ಚರ್ಚ್ ನ ಆವರಣದ ರುದ್ರಭೂಮಿಯಲ್ಲಿ ಚಿರಶಾಂತಿಯಲ್ಲಿ ಇದ್ದಾರೆ.

ಇವರು ಕನ್ನಡನಾಡಿಗೆ ನೀಡಿದ ಕೊಡುಗೆಗಳು ಇವರನ್ನು ಚಿರಸ್ಥಾಯಿಯಾಗಿಸಿದೆ. ಇವರಿಗೆ ಗೌರವವನ್ನು ನೀಡುವ ಸಲುವಾಗಿ ಲಾಲ್ ಬಾಗ್ ಪಕ್ಕದ ರಸ್ತೆಗೆ ಜಿ.ಹೆಚ್.ಕೃಂಬಿಗಲ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಸಾಮಾನ್ಯವಾಗಿ ರಾಜ್ಯ, ದೇಶದ ವಿಚಾರಕ್ಕೆ ಬಂದಾಗಿ ವಿದೇಶಿಯರಿಂದ ತೊಂದರೆಗಳನ್ನೇ ಅನುಭವಿಸಿರುವುದು ನಿಜವೇ ಆದರೂ, ಬಂದ ಎಲ್ಲಾ ವಿದೇಶೀಯರೂ ತೊಂದರೆ ನೀಡಲೆಂದೇ ಬಂದವರಲ್ಲ ಎಂಬುದು ಕೃಂಬಿಗಲ್ ಅವರಿಗೆ ಸಲ್ಲುತ್ತದೆ. ಇಂದು ಆ ರಸ್ತೆಯ ಹೆಸರನ್ನು ಕಂಡಾಗ, ಲಾಲ್ ಬಾಗ್ ನ ಸುತ್ತಲೂ ವಾಯುವಿಹಾರಕ್ಕೆಂದು ಅಲ್ಲಿ ಸಂಚರಿಸುವಾಗ ಬೀಸುವ ಗಾಳಿ, ಹಾಡುವ ಹಕ್ಕಿಪಕ್ಷಿಗಳು, ಕಣ್ಣನ್ನು ಸೂರೆಗೊಳ್ಳುವ ಹೂಗಳ ಬಣ್ಣ, ತಂಪು ನೀಡುವ ಮರಗಿಡಗಳ ನೆರಳು, ಹುಲ್ಲಿನ ಹಾಸು, ಇವೆಲ್ಲವನ್ನು ಕಂಡು ಸಾಗುವಾಗ ದೂರದ ಯಾವುದೋ ಯಾಂತ್ರಿಕ ಬದುಕು ನಡೆಸುವ ಬೆಂಗಳೂರಿನ ಬದುಕೆಲ್ಲ ಮರೆಯಾಗಿ ಮಲೆನಾಡಿನ ಮಡಿಲಲ್ಲಿ, ಹಸರಿನಿ ಸಿರಿಯಲ್ಲಿರುವಂತೆ ತೋರುತ್ತದೆ. ಇದಕ್ಕೆ ಹಲವು ಮಹನೀಯರ ಕೊಡುಗೆ ಎಂದರೆ ಎಂದರೆ ತಪ್ಪಾಗಲಾರದು. ಇದರಲ್ಲಿ ಮುಕುಟಪ್ರಾಯದಲ್ಲಿರುವ ಹೆಸರು ಜಿ.ಹೆಚ್.ಕೃಂಬಿಗಲ್.

ನೆನ್ನೆ ಅವರ ಜನುಮದಿನ ಹಾಗಾಗಿ ಆ ನಿಟ್ಟಿನಲ್ಲಿ ಮತ್ತೊಮೆ ಇವರನ್ನು ನೆನೆಯುವಂತಾಗಿದೆ. ಇವರು ಮಾಡಿರುವ ಕೆಲಸದ ಮೂಲಕ ಇಂದಿಗೂ ಇವರು ಸದಾ ಹಸಿರಾಗಿದ್ದಾರೆ.

ಚೇತನ ಕುಮಾರ್ ಸಿ

ಗ್ರಂಥಪಾಲಕರು

ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಗಳು

Leave a Reply

Your email address will not be published. Required fields are marked *