Gautam Gambhir: ಟೀಮ್ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ: ವರದಿ.

Gautam Gambhir: ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂರು ಬಾರಿ ಕೂಡ ಗೌತಮ್ ಗಂಭೀರ್ ಕೆಕೆಆರ್ ತಂಡದ ಭಾಗವಾಗಿದ್ದರು ಎಂಬುದು ವಿಶೇಷ. ಅಂದರೆ 2012 ಮತ್ತು 2014 ರಲ್ಲಿ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟಕ್ಕೇರಿದರೆ, 2024 ರಲ್ಲಿ ಗೌತಿ ಅವರ ಮಾರ್ಗದರ್ಶನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಹೀಗಾಗಿಯೇ ಟಿ20 ವಿಶ್ವಕಪ್​ ಬಳಿಕ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಅವರನ್ನು ನೇಮಿಸಲು ಬಿಸಿಸಿಐ ಆಸಕ್ತಿವಹಿಸಿದೆ.

ಭಾರತ ತಂಡದ ಮುಖ್ಯ ತರಬೇತುದಾರರಾಗಿ ಗೌತಮ್ ಗಂಭೀರ್ (Gautam Gambhir) ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಐಪಿಎಲ್ 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಐಪಿಎಲ್​ ಮಾಲೀಕರೊಬ್ಬರು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.

ಇದರೊಂದಿಗೆ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಕಾಣಿಸಿಕೊಳ್ಳುವುದು ಖಚಿತವಾದಂತಾಗಿದೆ. ಇದಕ್ಕೂ ಮುನ್ನವೇ ಟೀಮ್ ಇಂಡಿಯಾದ ಕೋಚ್ ಆಗಿ ಭಾರತೀಯರೊಬ್ಬರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸುಳಿವು ನೀಡಿದ್ದರು.

ಭಾರತೀಯ ಕ್ರಿಕೆಟ್ ರಚನೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವಲ್ಲಿ ನಾವು ಗಮನಹರಿಸಿದ್ದೇವೆ. ಟೀಮ್ ಇಂಡಿಯಾವನ್ನು ಮುಂದಿನ ಹಂತಕ್ಕೆ ಏರಿಸಲು ನಮ್ಮ ಕೋಚ್ ನಮ್ಮ ದೇಶೀಯ ಕ್ರಿಕೆಟ್ ಚೌಕಟ್ಟಿನ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವುದು ಬಹಳ ಮುಖ್ಯ. ಹೀಗಾಗಿ ಭಾರತೀಯರನ್ನು ಕೋಚ್ ಆಗಿ ನೇಮಕ ಮಾಡಲು ಬಯಸಿದ್ದೇವೆ ಎಂದು ಜಯ್ ಶಾ ತಿಳಿಸಿದ್ದರು.

ಇದರ ಬೆನ್ನಲ್ಲೇ ಐಪಿಎಲ್ ಫೈನಲ್ ಪಂದ್ಯದ ಬಳಿಕ ಜಯ್ ಶಾ ಹಾಗೂ ಗೌತಮ್ ಗಂಭೀರ್ ಮಾತುಕತೆ ನಡೆಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೈರಲ್ ಬೆನ್ನಲ್ಲೇ ಜಿಜಿ ಟೀಮ್ ಇಂಡಿಯಾ ಕೋಚ್ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಇದೀಗ ಭಾರತದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಅವರ ನೇಮಕವನ್ನು ಐಪಿಎಲ್ ಮಾಲೀಕರು ಖಚಿತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಕ್ರಿಕ್​ಬಝ್​ ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಮುಂದಿನ ಕೋಚ್ ಆಗಿ ಜಿಜಿ (ಗೌತಮ್ ಗಂಭೀರ್) ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.

Source: https://tv9kannada.com/photo-gallery/cricket-photos/ipl-owner-confirms-gautam-gambhirs-appointment-as-indias-head-coach-zp-840301-5.html

Leave a Reply

Your email address will not be published. Required fields are marked *