ಹೊಸಬರಿಗೆ ಮಣೆ. ರೋಹಿತ್, ಕೊಹ್ಲಿ ನಿವೃತ್ತಿಗೆ ಗೌತಮ್ ಗಂಭೀರ್ ಕಾರಣ?

Rohit Sharma – Virat Kohli: ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಇನ್ಮುಂದೆ ಈ ಇಬ್ಬರು ದಿಗ್ಗಜರು ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಚುಟುಕು ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli)  ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲು ಯಾರು ಕಾರಣ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್. ಭಾರತ ತಂಡದ ಮುಖ್ಯ ಕೋಚ್ ಅವರ ಸೂಚನೆಯ ಮೇರೆಗೆ ಆಯ್ಕೆ ಸಮಿತಿಯು ಗಟ್ಟಿ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಅಂದರೆ ಇಲ್ಲಿ ಗೌತಮ್ ಗಂಭೀರ್ ಹೊಸ ಮುಖಗಳಿಗೆ ಪ್ರಾಧಾನ್ಯ ನೀಡಬೇಕೆಂದು ಆಯ್ಕೆ ಸಮಿತಿ ಮುಂದೆ ಬೇಡಿಕೆಯಿಟ್ಟಿದ್ದಾರೆ. ಇದೇ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಕೈ ಬಿಡಲು ಆಯ್ಕೆ ಸಮಿತಿ ಮುಂದಾಗಿತ್ತು ಪಿಟಿಐ ವರದಿ ಮಾಡಿದೆ.

ಗೌತಮ್ ಗಂಭೀರ್ ಕೋಚ್ ಆದ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ. ಅದರಲ್ಲೂ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ನಲ್ಲಿ ಭಾರತ ತಂಡ ಹೀನಾಯವಾಗಿ ಸೋಲನುಭವಿಸಿದೆ. ಈ ಸೋಲುಗಳಿಗೆ ಉತ್ತರ ಕಂಡುಕೊಳ್ಳಲು ಗಂಭೀರ್ ಹೊಸ ತಂಡ ಕಟ್ಟಲು ಮುಂದಾಗಿದ್ದಾರೆ.

ಅದರಲ್ಲೂ 2027ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯು ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಶುರುವಾಗುತ್ತಿದೆ. ಈ ಸರಣಿಗೆ ಹೊಸ ಆಟಗಾರರಿಗೆ ಪ್ರಾಧಾನ್ಯ ನೀಡಬೇಕೆಂದು ಗಂಭೀರ್ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತ ತಂಡದಲ್ಲಿ ಸ್ಟಾರ್ ಸಂಸ್ಕೃತಿಯನ್ನು ಕೊನೆಗಾಣಿಸುವುದು ಅವರ ಮೊದಲ ಗುರಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇತ್ತ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ತಂಡದಲ್ಲಿನ ಸ್ಟಾರ್ ಸಂಸ್ಕೃತಿಯನ್ನು ಕೊನೆಗೊಳಿಸುವ ಇರಾದೆಯಲ್ಲಿದ್ದರು. ಇಲ್ಲಿ ಗಂಭೀರ್ ಹಾಗೂ ಅಗರ್ಕರ್ ಅವರ ಉದ್ದೇಶಗಳು ಹೊಂದಿಕೆಯಾಗಿರುವ ಕಾರಣ, ದೃಢ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಅದರ ಮೊದಲ ಹೆಜ್ಜೆಯಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಇದೇ ಕಾರಣದಿಂದಾಗಿ ಇಬ್ಬರು ದಿಗ್ಗಜರು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಗೌತಮ್ ಗಂಭೀರ್ ಯುಗ ಆರಂಭವಾಗುತ್ತಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಆವೃತ್ತಿಯಲ್ಲಿ ಭಾರತ ಹೊಸ ಮುಖಗಳನ್ನು ಹೊಂದಿರಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಹೀಗಾಗಿಯೇ ತಂಡದಿಂದ ಹಿರಿಯ ಆಟಗಾರರನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಸಿಸಿಐನ ವ್ಯಕ್ತಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದು ತಂಡದೊಳಗೆ ಹೆಚ್ಚುತ್ತಿರುವ ಗೌತಮ್ ಗಂಭೀರ್ ಅವರ ಪ್ರಭಾವವನ್ನು ಸೂಚಿಸುತ್ತಿದೆ. ಹೀಗಾಗಿಯೇ ಇನ್ಮುಂದೆ ಟೀಮ್ ಇಂಡಿಯಾದಲ್ಲಿ ಗಂಭೀರ್ ಅವರ ನಿರ್ಧಾರಗಳೇ ಫೈನಲ್ ಆಗಲಿವೆ. ಈ ನಿರ್ಧಾರಗಳೊಂದಿಗೆ ಇಂಗ್ಲೆಂಡ್​ನಲ್ಲಿ  ಟೀಮ್ ಇಂಡಿಯಾ ಹೇಗೆ  ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

TV9Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *