ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ. 09 — ರಾಜ್ಯದ ಕಾಡುಗೊಲ್ಲ, ಗೊಲ್ಲ, ಯಾದವ ಸಮುದಾಯದ ಸ್ವಾಮೀಜಿಗಳು ಹಾಗೂ ಮುಖಂಡರು ಮುಂಬರುವ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‍ರಚನೆಯಲ್ಲಿ ಎಂಎಲ್‌ಸಿ ಡಿ.ಟಿ. ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ಚಿತ್ರದುರ್ಗ ನಗರದ ಹೊರವಲಯದ ಯಾದವ ಮಠದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಯಾದವ ಮಠದ ಶ್ರೀ ಕೃಷ್ಣಯಾದವನಂದ ಶ್ರೀಗಳು ಮಾತನಾಡಿ, ರಾಜ್ಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆಯುಳ್ಳ ಕಾಡುಗೊಲ್ಲ–ಗೊಲ್ಲ–ಯಾದವ ಸಮುದಾಯಕ್ಕೆ ಒಂದು ಶಾಸಕರೂ ಇಲ್ಲ, ಮಾತ್ರ ಎಂಎಲ್‌ಸಿ ಶ್ರೀನಿವಾಸ್ ಮಾತ್ರ ಪ್ರತಿನಿಧಿಯಾಗಿದ್ದಾರೆ ಎಂದರು. ಹೀಗಾಗಿ ಸಮುದಾಯದ ಹಿಂದುಳಿದ ಸ್ಥಿತಿಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯಸಮ್ಮತ ಎಂದರು.
ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಮುಖಂಡ ಹಾಲಸ್ವಾಮಿ ಮಾತನಾಡಿ, ಎಲ್ಲಾ ಜಿಲ್ಲೆಗಳಲ್ಲಿಯೂ ಗೊಲ್ಲ ಸಮುದಾಯವಿದ್ದು ತೀವ್ರ ಹಿಂದುಳಿದ ವರ್ಗಕ್ಕೆ ಸೇರಿದೆ. ಸಾಮಾಜಿಕ–ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಸೂಕ್ತ ಪ್ರತಿನಿಧಿತ್ವ ಅಗತ್ಯವಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಮುಂದಾಗಬೇಕು ಎಂದು ಮನವಿ ಮಾಡಿದರು.
ನಗರಸಭೆಯ ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ ಹೇಳಿದರು, ಗೊಲ್ಲ ಸಮುದಾಯವು ಯಾವತ್ತೂ ಕಾಂಗ್ರೆಸ್ ಪಕ್ಷದ ಬೆಂಬಲದಲ್ಲೇ ನಿಂತಿದೆ. ಎ. ಕೃಷ್ಣಪ್ಪ, ಮುದ್ದಪ್ಪನವರಂತಹ ನಾಯಕರು ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಸಮುದಾಯದ ಏಕೈಕ ಪ್ರತಿನಿಧಿ ಶ್ರೀನಿವಾಸ್ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸುವ ಮೂಲಕ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ಪರವಾಗಿ ನಿಂತಿದೆ ಎಂಬ ಸಂದೇಶವನ್ನು ರಾಜ್ಯಕ್ಕೆ ನೀಡಬಹುದು ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಸಿದ್ದಪ್ಪ, ರೇವಣಸಿದ್ದಪ್ಪ, ರಂಗಸ್ವಾಮಿ, ರಮೇಶ್, ವೀರಪಂಜಪ್ಪ, ಹಾಯಿತೋಳು ತಿಮ್ಮಣ್ಣ ಸೇರಿದಂತೆ ಸಮುದಾಯದ ಹಲವರು ಭಾಗವಹಿಸಿದರು.
Views: 23