ಖಾಕಿ ಪಡೆಗೆ ಸಿಹಿ ಸುದ್ದಿ: ಇನ್ಮುಂದೆ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವಕ್ಕೆ ಸಿಗಲಿದೆ ಕಡ್ಡಾಯ ರಜೆ!

ಬೆಂಗಳೂರು: ನಾಡಿನ ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಭರ್ಜರಿ ಉಡುಗೊರೆಯನ್ನೇ ನೀಡಿದೆ. ಇನ್ಮುಂದೆ ಪೊಲೀಸ್ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದಂದು ಕರ್ತವ್ಯಕ್ಕೆ ಹಾಜರಾಗುವ ಒತ್ತಡವಿರುವುದಿಲ್ಲ. ಬದಲಿಗೆ, ಕುಟುಂಬದೊಂದಿಗೆ ಸಂತಸದಿಂದ ಕಳೆಯಲು ‘ರಜೆ ಭಾಗ್ಯ’ ಸಿಗಲಿದೆ.

ಡಿಜಿ ಮತ್ತು ಐಜಿಪಿ ಅಧಿಕೃತ ಆದೇಶ ಪೊಲೀಸ್ ಇಲಾಖೆಯ ಸಿಬ್ಬಂದಿಯ ಒತ್ತಡದ ಬದುಕಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (DG & IGP) ಡಾ. ಎಂ.ಎ. ಸಲೀಂ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಇದರ ಅನ್ವಯ, ಇಲಾಖೆಯ ಸಿಬ್ಬಂದಿ ತಮ್ಮ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವದಂದು ರಜೆ ಪಡೆದು ಕುಟುಂಬಸ್ಥರೊಂದಿಗೆ ಸಮಯ ಕಳೆಯಲು ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ದಿನಗಳಂದು ರಜೆ ಕೋರಿದರೆ ತಪ್ಪದೇ ಮಂಜೂರು ಮಾಡುವಂತೆ ಎಲ್ಲಾ ಘಟಕಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಯಾರಿಗೆಲ್ಲ ಅನ್ವಯವಾಗಲಿದೆ? ಈ ರಜೆ ಸೌಲಭ್ಯವು ಪ್ರಮುಖವಾಗಿ ಕೆಳಹಂತದ ಸಿಬ್ಬಂದಿಗೆ ವರದಾನವಾಗಲಿದೆ.

  • ಪೊಲೀಸ್ ಕಾನ್ಸ್‌ಟೇಬಲ್ (PC)
  • ಹೆಡ್ ಕಾನ್ಸ್‌ಟೇಬಲ್ (HC)
  • ಸಹಾಯಕ ಪೊಲೀಸ್ ಉಪನಿರೀಕ್ಷಕರು (ASI) ಈ ಶ್ರೇಣಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಹೊಸ ಆದೇಶದ ಫಲಾನುಭವಿಗಳಾಗಲಿದ್ದಾರೆ.

ಹಿನ್ನೆಲೆ ಏನು? ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ಈ ಕುರಿತು ಸರ್ಕಾರದ ಗಮನ ಸೆಳೆದಿದ್ದರು. ಕಾನ್ಸ್‌ಟೇಬಲ್‌ನಿಂದ ಎಎಸ್‌ಐ ದರ್ಜೆಯವರೆಗಿನ ಸಿಬ್ಬಂದಿಗೆ ವಿಶೇಷ ದಿನಗಳಂದು ಕಡ್ಡಾಯ ರಜೆ ನೀಡುವಂತೆ ಅವರು ಸಲಹೆ ನೀಡಿದ್ದರು. ಈ ಸಲಹೆಯನ್ನು ಪರಿಗಣಿಸಿದ ರಾಜ್ಯ ಒಳಾಡಳಿತ ಇಲಾಖೆಯು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿತ್ತು. ಇದನ್ನು ಗಂಭಿರವಾಗಿ ಪರಿಗಣಿಸಿದ ಡಿಜಿ ಡಾ. ಸಲೀಂ ಅವರು ಇದೀಗ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಒತ್ತಡ ನಿರ್ವಹಣೆಗೆ ರಾಮಬಾಣ ಹಬ್ಬ-ಹರಿದಿನ ಎನ್ನದೆ, ಪ್ರಕೃತಿ ವಿಕೋಪವಿರಲಿ ಅಥವಾ ಬಂದೋಬಸ್ತ್ ಇರಲಿ, ಪೊಲೀಸರು ಸದಾ ಕರ್ತವ್ಯದಲ್ಲಿರುತ್ತಾರೆ. ಇದರಿಂದ ವೈಯಕ್ತಿಕ ಜೀವನ ಮತ್ತು ಕೆಲಸದ ನಡುವೆ ಸಮತೋಲನ ಕಾಪಾಡುವುದು ಕಷ್ಟವಾಗಿತ್ತು. ಇದೀಗ ವರ್ಷದ ಎರಡು ಪ್ರಮುಖ ದಿನಗಳಂದಾದರೂ ಕುಟುಂಬದ ಜೊತೆ ಕಳೆಯಲು ಅವಕಾಶ ಸಿಗುತ್ತಿರುವುದು ಅವರ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಲಿದೆ. ಸಿಬ್ಬಂದಿಯ ಮನೋಬಲ ಹೆಚ್ಚಿಸಲು ಮತ್ತು ಕೆಲಸದಲ್ಲಿ ಉತ್ಸಾಹ ತುಂಬಲು ಈ ನಿರ್ಧಾರ ಸಹಕಾರಿಯಾಗಲಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

Leave a Reply

Your email address will not be published. Required fields are marked *