ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ.02
ನಗರದ ಹೊಳಲ್ಕೆರೆ ರಸ್ತೆಯ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿನ ವೀರಶೈವ ಸಮಾಜ(ರಿ.) ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರೀ ವೀರಭದ್ರದೇವರ ಗುಗ್ಗುಳ ಮತ್ತು ಅಗ್ನಿಕುಂಡ ಕಾರ್ಯ ಕ್ರಮವನ್ನು ವಿಭೃಂಭಣೆ, ಭಕ್ತಿ-ಭಾವದಿಂದ ನಡೆಸಲಾಯಿತು.
ವೀರಭದ್ರ ದೇವರ ಗುಗ್ಗುಳ ಮತ್ತು ಅಗ್ನಿಕುಂಡ ಮಹೋತ್ಸವವು ಭಕ್ತಿ ಮತ್ತು ಆವೇಶದಿಂದ ಆಚರಿಸಲಾಗುವ ಪ್ರಮುಖ ಆಚರಣೆಯಾಗಿದ್ದು, ಇದು ಶಿವನ ರೌದ್ರಾವತಾರವಾದ ವೀರಭದ್ರನ ಶಕ್ತಿ, ಅಗ್ನಿತತ್ವ ಮತ್ತು ದುಷ್ಟ ಶಿಕ್ಷಣವನ್ನು ಸಂಕೇತಿಸುತ್ತದೆ. ಈ ಉತ್ಸವದಲ್ಲಿ, ಪುರವಂತರು ಅಗ್ನಿಕುಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ, ವೀರಭದ್ರನ ಭಕ್ತರು (ಪುರವಂತರು) ಹಳದಿ ಬಟ್ಟೆ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು, ಆವೇಶದಿಂದ ಕುಣಿಯುತ್ತಾ ಗುಗ್ಗುಳೋ ಗುಗ್ಗುಳಎಂದು ಘೋಷಣೆ ಕೂಗುತ್ತಾರೆ. ಉಜ್ಜಯಿನಿ ಮಠದ ಆವರಣದಲ್ಲಿ ದೊಡ್ಡ ಅಗ್ನಿಕುಂಡವನ್ನು ಸಿದ್ಧಪಡಿಸಿ, ಅದಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಕುಂಡವು ವೀರಭದ್ರನು ದಕ್ಷಯಜ್ಞವನ್ನು ಧ್ವಂಸಗೊಳಿಸಿದ ಜ್ವಾಲೆಯನ್ನು ಪ್ರತಿನಿಧಿಸುತ್ತದೆ. ಪುರವಂತರು ಧಗಧಗಿಸುವ ಕೆಂಡದ ಮೇಲೆ ನಡೆದು, ವೀರಭದ್ರನ ಮೇಲಿನ ಭಕ್ತಿಯನ್ನು ಪ್ರದರ್ಶಿಸುತ್ತಾರೆ. ಇದು ಕೆಟ್ಟ ಶಕ್ತಿಗಳ ನಾಶ ಮತ್ತು ರಕ್ಷಣೆಯ ಸಂಕೇತವಾಗಿದೆ. ಹಿAದೂ ಧರ್ಮದಲ್ಲಿ ವೇದ ಹಾಗೂ ಪುರಾಣ ಕಥೆಗಳಲ್ಲಿ ತಿಳಿಸಿರುವಂತೆ ವೀರಭದ್ರನ ಅವತಾರ ಒಂದು ನಿರ್ದಿಷ್ಟ ಗುರಿಯ ಈಡೇರಿಕೆಗಾಗಿ ಆಗಿದೆ. ವೀರಭದ್ರ ಹೆಸರು ಸೃಷ್ಟಿಯಾಗಿದ್ದು, ಎರಡು ಸಂಸ್ಕöÈತ ಶಬ್ದಗಳಾದ ವೀರ ಎಂದರೆ, ನಾಯಕ ಹಾಗೂ ಯೋಧ. ಭದ್ರ ಎಂದರೆ, ಸ್ನೇಹಿತ ಎಂದರ್ಥ. ತನ್ನ ಸೃಷ್ಟಿಯೊಂದಿಗೆ ನಾಲ್ಕು ವಿಧವಾದ ಅಸ್ತçಗಳನ್ನು ಎಂಟು ಕೈಗಳಲ್ಲಿ ಹಿಡಿದುಕೊಂಡು ಅವತರಿಸಿದ್ದಾನೆ. ಬಾಣ, ಖಡ್ಗ, ಧನಸ್ಸು, ಕೇತಕ ಮತ್ತು ಅಸ್ಥಿ ಪಂಜರಗಳು ಇವನ ಆಯುಧಗಳಾಗಿವೆ.

ನಗರದ ರಂಗಯ್ಯನ ಬಾಗಿಲ ಬಳಿಯಲ್ಲಿನ ಉಜ್ಜಯಿನಿ ಮಠದಲ್ಲಿ ಗಂಗಾಪೂಜೆಯ ನಂತರ ಗುಗ್ಗುಳದ ಮೆರವಣಿಗೆಯು ರಂಗಯ್ಯನಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಮಹಾತ್ಮಗಾಂಧಿ ವೃತ್ತದ ಮುಖಾಂತರವಾಗಿ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಾಣ ಮಾಡಲಾದ ಅಗ್ನಿಕುಂಡ ಹಾಯುವುದರ ಮೂಲಕ ಸಮಾಪ್ತಿ ಮಾಡಿ ವೀರಭದ್ರ ಸ್ವಾಮಿಗೆ ಮಹಾಮಂಗಳಾರತಿಯ ನಂತರ ಆಗಮಿಸಿದ ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.
ಗುಗ್ಗಳದ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಹರಪನಹಳ್ಳಿ ಪಟ್ಟಣದ ಮೇಗಳಪೇಟೆ ಶ್ರೀ ಗುಗ್ಗುಳ ವೀರಭದ್ರೇಶ್ವರ ದೇವಸ್ಥಾನ ಸಮಿತಿಯವರು ವೀರಭದ್ರನ ಪರಾಕ್ರಮದ ಬಗ್ಗೆ ಒಡಪುಗಳನ್ನು ಅಲಲ್ಲಿ ಹೇಳುವುದರ ಮೂಲಕ ಭಕ್ತರಿಗೆ ವೀರಭದ್ರನ ಸಾಹಸದ ಕಥೆಗಳನ್ನು ಪರಿಚಯ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಭಾಗವಹಿಸಿದ್ದ ಶಿವಸಿಂಪಿ ಮಹಿಳಾ ಘಟಕದ ಪದಾಧಿಕಾರಿಗಳು ಹಳದಿ ಸೀರೆಯನ್ನು ಧರಿಸಿ ತಲೆಯ ಮೇಲೆ ಕುಂಭವನ್ನು ಇಟ್ಟುಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು. ಇದ್ದಲ್ಲದೆ ಹಲವಾರು ಭಕ್ತರು ಪುರವಂತರಿAದ ತಮ್ಮ ಬಾಯಿಗೆ, ಕೈಗೆ ಹಿತ್ತಾಳೆಯಿಂದ ಮಾಡಿದ ದಬ್ಬಳದ ರೀತಿಯ ವಸ್ತುವಿನಿಂದ ಚುಚಿಸಿಕೊಂಡಿದ್ದು ಕಂಡು ಬಂದಿತು. ಇದು ಸಹಾ ವೀರಭದ್ರನಿಗೆ ಪ್ರಿಯವಾದ ಕಾರ್ಯ ವಾಗಿದೆ. ಗುಗ್ಗುಳ ಮೆರವಣಿಗೆ ಬರುವ ದಾರಿಯಲ್ಲಿನ ಭಕ್ತರ ಮನೆಗಳ ಮುಂದೆ ರಸ್ತೆಯನ್ನು ಗುಡಿಸಿ ನೀರನ್ನು ಹಾಕಿ ರಂಗೋಲಿಯನ್ನು ಬಿಡಿಸಿ ಗುಗ್ಗಳವನ್ನು ಸ್ವಾಗತಿಸಿದರು. ಇದ್ದಲ್ಲದೆ ಕೆಲವು ಭಕ್ತರು ತಮ್ಮ ಮನೆಗಳ ಮುಂದೆ ಗುಗ್ಗಳದಲ್ಲಿ ಆಗಮಿಸಿದವರು ಮಜ್ಜಿಗೆ, ನೀರು, ಪಾನಕವನ್ನು ನೀಡಿದರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಪದಾಧಿಕಾರಿಗಳು, ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ದಾರಿಯಲ್ಲಿ ಮಹಿಳೆಯರು, ಮಕ್ಕಳು ಸರದಿ ಸಾಲಿನಲ್ಲಿ ಕುಳಿತು ಅವರ ತಲೆಯ ಮೇಲೆ ವೀರಭದ್ರ ಸ್ವಾಮಿಯ ಅಗ್ನಿಕುಂಡವನ್ನು ಹಾಯುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ನೂರಾರು ಭಕ್ತರು ಮಧ್ಯಾಹ್ನದ ಬಿಸಿಲಿನಲ್ಲಿ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಾಣ ಮಾಡಲಾದ ಅಗ್ನಿಕೆಂಡದ ಮೇಲೆ ನಡೆದು, ಗುಗ್ಗುಳ ಸೇವೆ ಸಲ್ಲಿಸುವ ಮೂಲಕ ವೀರಭದ್ರನಿಗೆ ಹರಕೆ ತೀರಿಸುವ ಸಂಪ್ರದಾಯವನ್ನು ನೇರವೇರಿಸಿದರು.

