GT vs MI: ಕನ್ನಡಿಗನ ಪ್ರಚಂಡ ಬೌಲಿಂಗ್ ದಾಳಿಗೆ ಮುಂಬೈ ತತ್ತರ! ಪೈಪೋಟಿಯನ್ನೇ ನೀಡದೆ ಹೀನಾಯ ಸೋಲು ಕಂಡ ಹಾರ್ದಿಕ್ ಪಡೆ

ಮುಂಬೈ ಇಂಡಿಯನ್ಸ್ 2025ರ ಐಪಿಎಲ್​​ನಲ್ಲಿ ಗುಜರಾತ್ ವಿರುದ್ಧ 36 ರನ್​​ಗಳ ಸೋಲು ಕಂಡಿತು. ಸೂರ್ಯಕುಮಾರ್ ಯಾದವ್ 48, ತಿಲಕ್ ವರ್ಮಾ 39 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 2025ರ ಆವೃತ್ತಿಯ ಐಪಿಎಲ್​ನಲ್ಲಿ ಸತತ 2ನೇ ಸೋಲು ಕಂಡಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 36 ರನ್​ಗಳ ಸೋಲು ಕಂಡಿತು. ಗುಜರಾತ್ ನೀಡಿದ್ದ 197ರನ್​ಗಳ ಗುರಿಯನ್ನ ಬೆನ್ನಟ್ಟಿದ ಮುಂಬೈ ತಂಡ 20 ಓವರ್​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಸೂರ್ಯಕುಮಾರ್ ಯಾದವ್​ 48, ತಿಲಕ್ ವರ್ಮಾ 39 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ರೋಹಿತ್, ಹಾರ್ದಿಕ್ ಪಾಂಡ್ಯ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿದರು.

197ರನ್​ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಮೊದಲ ಓವರ್​​ನಲ್ಲೇ ಮಾಜಿ ನಾಯಕ ರೋಹಿತ್ ಶರ್ಮಾ (8) ವಿಕೆಟ್ ಕಳೆದುಕೊಂಡಿತು. ಸಿರಾಜ್​ ಬೌಲಿಂಗ್​​ನಲ್ಲಿ ಸತತ 2 ಬೌಂಡರಿ ಬಾರಿಸಿದ ಅವರು 4ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇನ್ನು ರಿಕಲ್ಟನ್(6) ಇಂದೂ ಕೂಡ ವಿಫಲರಾದರು. ಅವರು ಕೂಡ ಸಿರಾಜ್​​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.

3ನೇ ವಿಕೆಟ್​​ಗೆ ಒಂದಾದ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ 62 ರನ್​ಗಳ ಜೊತೆಯಾಟ ನಡೆಸಿದರು. ಇದು ಮುಂಬೈ ಇನ್ನಿಂಗ್ಸ್​ಗ ಏಕೈಕ ಅರ್ಧಶತಕದ ಜೊತೆಯಾಟವಾಯಿತು. ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್​ಗಳ ನೆರವಿನಿಂದ 48 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ತಿಲಕ್ ವರ್ಮಾ 36 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್ ಸಹಿತ 39 ರನ್​ಗಳಿಸಿದರು.

ಹಾರ್ದಿಕ್ ಪಾಂಡ್ಯ 17 ಎಸೆತಗಳನ್ನಾಡಿ ಕೇವಲ 11 ರನ್​ಗಳಿಸಿ ಔಟ್ ಆದರು. ಬ್ಯಾಟಿಂಗ್​​ ಆಗಮಿಸಿ ಔಟ್ ಆಗುವ ವರೆಗೂ ರನ್​ಗಳಿಸಲು ಪರದಾಡಿದರು.  ಇಂಪ್ಯಾಕ್ಟ್ ಪ್ಲೇಯರ್ ರಾಬಿನ್ ಮಿಂಜ್ 3 ರನ್​ಗಳಿಸಿ ಮತ್ತೊಮ್ಮೆ ವಿಫಲರಾದರು.

ಕೊನೆಯಲ್ಲಿ ನಮನ್ ಧಿರ್ 11 ಎಸೆತಗಳಲ್ಲಿ 3 ಬೌಂಡರಿ ಸಹಿತ ಅಜೇಯ 18, ಮಿಚೆಲ್ ಸ್ಯಾಂಟ್ನರ್ 8 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 18 ರನ್​ಗಳಿಸಿ ಸೋಲಿನ ಅಂತರವನ್ನ ತಗ್ಗಿಸಿದರು.

ಗುಜರಾತ್ ಟೈಟನ್ಸ್ ಪರ ಕನ್ನಡಿಗ ಪ್ರಸಿಧ್ ಕೃಷ್ಣ 4 ಓವರ್​ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮಿಖ ಪಾತ್ರವಹಿಸಿದರು. ಮೊಹಮ್ಮದ್ ಸಿರಾಜ್ 34ಕ್ಕೆ2 , ಸಾಯಿ ಕಿಶೋರ್ 37ಕ್ಕೆ1 , ಕಗಿಸೋ ರಬಾಡ 42ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್ ಮಾಡಿದ  ಗುಜರಾತ್ ಟೈಟನ್ಸ್​​ಗೆ ನಾಯಕ ಗಿಲ್ ಹಾಗೂ ಸುದರ್ಶನ್​ ಮೊದಲ ವಿಕೆಟ್​​ಗೆ 78 ರನ್​​ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿಕೊಟ್ಟರು. ನಾಯಕ ಗಿಲ್​ 27 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 38 ರನ್​ಗಳಿಸಿದರು. ನಂತರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ ಬಟ್ಲರ್​ 2ನೇ ವಿಕೆಟ್​​ಗೆ ಸುದರ್ಶನ್ ಜೊತೆಗೂಡಿ ಕೇವಲ 32 ಎಸೆತಗಳಲ್ಲಿ 51 ರನ್​ಗಳ ಜೊತೆಯಾಟ ನೀಡಿದರು. ಬಟ್ಲರ್​ 24 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 39 ರನ್​ಗಳಿಸಿ ಮುಜೀಬ್​​ ಜಾಡ್ರನ್​ ಬೌಲಿಂಗ್​​ನಲ್ಲಿ ಕೀಪರ್​ಗೆ ಕ್ಯಾಚ್ ನೀಡಿದರು.

ನಂತರ ಬಂದ ಶಾರುಖ್ ಖಾನ್ ಕೇವಲ 9 ರನ್​ಗಳಿಸಿ ಔಟ್ ಆದರು. ಸಾಯಿ ಸುದರ್ಶನ್ 41 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 63 ರನ್​ಗಳಿಸಿದರು. ಸುದರ್ಶನ್ ವಿಕೆಟ್ ಬೀಳುತ್ತಿದ್ದಂತೆ ಗುಜರಾತ್ ರನ್​ ಗತಿಗೆ ಮುಂಬೈ ಕಡಿವಾಣ ಹಾಕಿತು 11 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 18 ರನ್​ಗಳಿಸಿದ್ದ ಶೆರ್ಫೇನ್​ ರುದರ್ಫೋರ್ಡ್​ 18 ರನ್​ಗಳಿಸಿ ಔಟ್ ಆದರೆ, ತೆವಾಟಿಯಾ ಖಾತೆ ತೆರೆಯದೇ ರನ್​ಔಟ್ ಆಗಿ ಮರಳಿದರು. ರಶೀದ್ ಖಾನ್ 6 ಹಾಗೂ ಕಗಿಸೋ ರಬಾಡ 7 ರನ್​ಗಳಿಸಿದರು.

ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ 29 ರನ್​ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಟ್ರೆಂಟ್ ಬೌಲ್ಟ್​ 34ಕ್ಕೆ1, ದೀಪಕ್ ಚಾಹರ್ 39ಕ್ಕೆ1, ಮುಜೀಬ್ ಉರ್ ರೆಹಮಾನ್ 28ಕ್ಕೆ1, ಎಸ್​ ರಾಜು 40ಕ್ಕೆ1 ವಿಕೆಟ್ ಪಡೆದು ಮಿಂಚಿದರು.

Source : News 18 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *