ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು.೨೨ : ಮಾನವ ಎಲ್ಲರಂತೆ ಪ್ರಾಣಿ, ಆದರೆ ಈತನಿಗೆ ಸಂಸ್ಕಾರವನ್ನು ನೀಡುವುದರ ಮೂಲಕ ಆತನನ್ನು ದೇವ ಮಾನವನ್ನಾಗಿ ಮಾಡುವ ಗುಣ ಗುರುವಿಗೆ ಇದೆ ಎಂದು ಉಪನ್ಯಾಸಕರು, ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವೇಕ ವಿದ್ಯಾ ವಾಹಿನಿಯ ಸಂಸ್ಥಾಪಕರಾದ ನಿತ್ಯಾನಂದ ವಿವೇಕವಂಶಿ ತಿಳಿಸಿದರು.
ಚಿತ್ರದುರ್ಗ ನಗರದ ಡಾನ್ ಬಾಸ್ಕೋ ಶಾಲೆಯ ಆವರಣದಲ್ಲಿ ಸಂಸ್ಕಾರ ಭಾರತಿ ಚಿತ್ರದುರ್ಗ ಜಿಲ್ಲಾ ಸಮಿತಿ, ರೋಟರಿ ಕ್ಲಬ್ ಚಿತ್ರದುರ್ಗ ಪೋರ್ಟ್, ಇನ್ನರ್ ವೀಲ್ ಚಿತ್ರದುರ್ಗ ಪೋರ್ಟ್ ಹಿಮಂತ ಮಹಿಳಾ ವಿಕಾಸ ಸಂಸ್ಥೆ ಹಾಗೂ ಡಾನ್ ಬಾಸ್ಕೋ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಗುರುಪೂರ್ಣಿಮೆ ಅಂಗವಾಗಿ ಸೋಮವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಭಾರತಾಂಬೆ ಹಾಗೂ ನಟರಾಜ ಬಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಮಾನದಲ್ಲಿ ಗುರುವಿನ ಬಗ್ಗೆ ಜನರಲ್ಲಿ ಗೊಂದಲ ಇದೆ. ಯಾರನ್ನು ಗುರು ಎನ್ನಬೇಕು ಎಂದು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವನ್ನೇ ಗುರು, ಅಜ್ಞಾನ, ಅಂಧಕಾರದಿಂಧ ಸುಜ್ಞಾನ ಕಡೆಗೆ ಕರೆದ್ಯೂವವನೆ ಗುರುವಾಗಿರಲು ಸಾಧ್ಯವಿದೆ. ಮಾನವನಿಗೆ ಅಧ್ಯಾತ್ಮವನ್ನು ಕಲಿಸುವವನೇ ಗುರು. ಮಾನವರಾದ ನಮಗೆ ಅಧ್ಯಾತ್ಮದ ಜ್ಞಾನದ ಅವಶ್ಯಕತೆ ಇದೆ. ಮಾನವರಂತೆ ಪ್ರಾಣಿಗಳು ಸಹಾ ಆಹಾರ ಸೇವನೆ, ನಿದ್ದೆ, ಭಯದ ವಾತಾವರಣ ಹಾಗೂ ಮೈಥುನವನ್ನು ಮಾಡುತ್ತವೆ ಅದರಂತೆ ನಾವು ಸಹಾ ಮಾಡಿದರೆ ನಮಗೂ ಅವುಗಳಿಗೂ ವ್ಯತ್ಯಾಸ ಕಂಡು ಬರುವುದಿಲ್ಲ, ಮಾನವರಾದ ನಮಗೆ ನಿರ್ಧಿಷ್ಠವಾದ ಗುರಿ ಇರಬೇಕಿದೆ. ಇದ್ದಲ್ಲದೆ ನಮ್ಮ ಗುರಿಯು ಸಹಾ ಕನಿಷ್ಠಕ್ಕೆ ಸೀಮಿತವಾಗಬಾರದು ಅದು ನಿರಂತರವಾಗಿ ಮುಂದುವರೆಯತ್ತಾ ಇರಬೇಕಿದೆ ಎಂದರು.
ನಮ್ಮ ಹಿಂದಿನ ಪೂರ್ವಿಕರು ನೀಡಿದ ಕೊಡುಗೆಯನ್ನು ಇಂದು ನಾವುಗಳು ಅನುಭವಿಸುತ್ತೀದ್ದೇವೆ, ನಮ್ಮ ಮುಂದಿನ ಪೀಳಿಗೆಗೆ ನಾವು ಸಹಾ ಏನಾದರು ಕೊಡುಗೆಯನ್ನು ನೀಡಬೇಕಿದೆ. ಇಲ್ಲಿ ನಮ್ಮದು ಎಂದು ಏನು ಇಲ್ಲವಾಗಿದೆ ಹೆಸರು, ದೇಹ, ತೂಕ ಎತ್ತರ, ಬಣ್ಣ, ಗುಣ, ರೂಪ ಬುದ್ದಿ, ಎಲ್ಲವು ಸಹಾ ಯಾವಾಗ ಬೇಕಾದರೂ ಬದಲಾಗುತ್ತದೆ ಆದರೆ ಆತ್ಮ ಮಾತ್ರ ಯಾವಾಗಲೂ ಸಹಾ ಒಂದೇ ರೀತಿಯಲ್ಲಿ ಇರುತ್ತದೆ ಇದರ ಬಗ್ಗೆ ಬಹಳ ನಿಷ್ಠೆಯಿಂದ ಇರಬೇಕಿದೆ ಎಂದು ತಿಳಿಸಿದ ನಿತ್ಯಾನಂದ ರವರು, ಪ್ರಾಣಿಗಳು ಹುಟ್ಟಿನಿಂದ ಸಾಯುವವರೆಗೂ ಸಹಾ ಪ್ರಾಣಿಗಳಾಗಿರುತ್ತವೆ ಅವರಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ ಆದರೆ ಮಾನವ ಹಾಗಲ್ಲ ಹುಟ್ಟಿನಿಂದ ಸಾಯುವರೆವಿವಿಗೂ ವಿವಿಧ ರೀತಿಯಲ್ಲಿ ಬದಲಾವಣೆಯನ್ನು ಕಾಣುತ್ತಾನೆ. ಸಂಸ್ಕಾರವನ್ನು ಪಡೆದ ಮಾನವ ದೇವಮಾನವನಾಗಲು ಸಾಧ್ಯವಿದೆ ಎಂದು ಹೇಳಿದರು.
ಸಂಸ್ಕಾರ ಭಾರತಿಯ ದಕ್ಷಿಣ ಪ್ರಾಂತದ ಪ್ರಧಾನ ಕಾರ್ಯದರ್ಶಿಗಳಾದ ಡಾ.ರಾಜೀವಲೋಚನ ಮಾತನಾಡಿ, 1972ರಲ್ಲಿ ಸಂಸ್ಕಾರ ಭಾರತಿ ಸಂಸ್ಥೆ ಪ್ರಾರಂಭವಾಗಿ ಇಂದು ಪ್ರಪಂಚದಲ್ಲಿ ಸುಮಾರು 2000 ಶಾಖೆಗಳನ್ನು ಹೊಂದಿದೆ. ಚಿತ್ರದುರ್ಗದಲ್ಲಿ ಪ್ರಾರಂಭವಾಗಿ 12 ವರ್ಷವಾಗಿದೆ, ಕಲೆಯನ್ನು ಆರಾಧಿಸುತ್ತಾ ಬದುಕನ್ನು ನಡೆಸುತ್ತಿರುವವರನ್ನು ಗುರುತಿಸಿ ಅವರನ್ನು ಪ್ರೋತ್ಸಾಹ ನೀಡುವುದು ನಮ್ಮ ಸಂಸ್ಕಾರ ಭಾರತಿಯ ಗುರಿಯಾಗಿದೆ. ಇದ್ದಲ್ಲದೆ ಕಲೆಯನ್ನು ಮುಂದಿನ ಪೀಳೀಗೆಗೆ ತೆಗೆದುಕೊಂಡು ಹೋಗುವುದು ಸಹಾ ನಮ್ಮ ಗುರಿಯಾಗಿದೆ. ಎಲೆ ಮರೆ ಕಾಯಿಯಂತೆ ಕಲೆಯಲ್ಲಿ ಕೆಲಸವನ್ನು ಮಾಡುವವರನ್ನು ಗುರುತಿಸುವುದು ನಮ್ಮ ಕೆಲಸವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಡಾನ್ ಬಾಸ್ಕೋ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯರಾದ ಅನೂಪ್ ಥಾಮಸ್ ಮಾತನಾಡಿ, ಶಿಕ್ಷಕ ವೃತ್ತಿಯನ್ನು ಗೌರವಿಸಬೇಕಿದೆ, ಗುರುಗಳ ಮಾರ್ಗದರ್ಶನ ಅಗತ್ಯವಾಗಿದೆ, ಸಮಾಜದಲ್ಲಿ ಗುರುವಿನ ಸ್ಥಾನ ಉನ್ನತ ಮಟ್ಟದಲ್ಲಿದೆ. ಯಾವ ಶಿಕ್ಷಕರಿಗೂ ಸಹಾ ತೊಂದರೆಯನ್ನು ನೀಡಬಾರದು, ಅವರ ಪ್ರೀತಿ ವಿಶ್ವಾಸವನ್ನು ಗಳಿಸುವುದರ ಮೂಲಕ ಅವರ ಕೃಪೆಗೆ ಪಾತ್ರರಾಗಬೇಕಿದೆ, ನಮ್ಮ ಎಲ್ಲಾ ಯಶಸ್ವಿನ ಹಿಂದೆ ಗುರುಗಳ ಬೆಂಬಲ ಆರ್ಶೀವಾದ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿಯ ಚಿತ್ರದುರ್ಗ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾದ ಟಿ.ಕೆ.ನಾಗರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ರೋಟರಿ ಕ್ಲಬ್ ಚಿತ್ರದುರ್ಗ ಪೋರ್ಟ್‌ನ ಅಧ್ಯಕ್ಷರಾದ ಚೇತನಬಾಬು, ಇನ್ನರ್ ವೀಲ್ ಚಿತ್ರದುರ್ಗ ಪೋರ್ಟ್‌ನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಮಹೇಶ್, ಹಿಮಂತ ಮಹಿಳಾ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾಂತಮ್ಮ, ಸಂಸ್ಕಾರ ಭಾರತಿಯ ಕಾರ್ಯದರ್ಶಿಗಳಾದ ಉಮ್ಮೇಶ ವೀರಣ್ಣ ತುಪ್ಪದ್ ಜಾನಪದ ವಿಭಾಗದ ಡಿ.ಓ.ಮೂರಾರ್ಜಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಂಗೀತದಲ್ಲಿ ಸಾಧನೆಯನ್ನು ಮಾಡಿದ ಶ್ರೀಮತಿ ಮೀನಾಕ್ಷಿ ಭಟ್, ಶಿಲ್ಪ ಕಲೆಯಲ್ಲಿ ಸಾಧನೆ ಮಾಡಿದ ಪಿ.ನಾಗರಾಜ್, ಜಾನಪದ ಕಲೆಯಲ್ಲಿ ಸಾಧನೆ ಮಾಡಿದ ಶ್ರೀಮತಿ ಗೌರಮ್ಮ ಹಾಗೂ ಶಿಕ್ಷಕ ವೃತ್ತಿಯಲ್ಲಿ ಸಾಧನೆಯನ್ನು ಮಾಡಿದ ಜಿ.ಎಸ.ಸಿದ್ದಲಿಂಗಪ್ಪರವರನ್ನು ಸನ್ಮಾನಿಸಲಾಯಿತು.
ಗುರುರಾಜ್ ಸಂಗಡಿದರು ಪ್ರಾರ್ಥಿಸಿದರೆ, ಉಮೇಶ್ ತುಪ್ಪದ್ ಸ್ವಾಗತಿಸಿದರು, ನವೀನ್ ವಂದಿಸಿದರೆ ಸಂಸ್ಕಾರ ಭಾರತೀಯ ಉಪಾಧ್ಯಕ್ಷರಾದ ನಾಗರಾಜ್ ಸಂಗಂ ಕಾರ್ಯಕ್ರಮ ನಿರೂಪಿಸಿದರು.