ಚಿತ್ರದುರ್ಗ, ಜುಲೈ 12:
ಗುರುಪೂರ್ಣಿಮೆಯು ಜ್ಞಾನ ನೀಡಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನ. ಈ ಹಿನ್ನಲೆಯಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಬ್ಯಾಂಕ್ ಕಾಲೋನಿ ಬಾಲಗೋಕುಲ ಸಮಿತಿಯ ಸಹಯೋಗದಿಂದ, ನಗರದ ತುರುವನೂರು ರಸ್ತೆಯ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದ ಕಲ್ಯಾಣ ಮಂಟಪದಲ್ಲಿ ಭಕ್ತಿ ಭರಿತ ‘ಗುರುವಂದನೆ’ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಪ್ರಚಾರಕ ರವಿ ಕೆ. ಅಂಬೇಕರ್ ಅವರು ಮಾತನಾಡುತ್ತಾ, “ಗುರು-ಶಿಷ್ಯ ಸಂಬಂಧವು ಕೇವಲ ಆಚರಣೆ ಮಾತ್ರವಲ್ಲ, ಅದು ಜ್ಞಾನ, ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಒಳಗೊಂಡುದು. ಗುರುಪೂರ್ಣಿಮೆಯಂದು ಪಾದಸ್ಪರ್ಶ ಎಂಬ ಸಂಪ್ರದಾಯದ ಹಿಂದೆ ಗೌರವವಿದೆ ಆದರೆ ಅಂಧಾನುಕರಣ ತಪ್ಪು,” ಎಂದು ಸೂಚಿಸಿದರು.
ಬೆಳಗಿನ 5 ಗಂಟೆಗೆ ಅಭ್ಯಂಗ ಸ್ನಾನ ಮಾಡಿ ಆಗಮಿಸಿದ ಮಹಿಳಾ ಯೋಗ ಸಾಧಕಿಯರು ಅಗ್ನಿಹೋತ್ರ ಹೋಮ, ಗುರು ಭಜನೆ ಹಾಗೂ ಶ್ರೀ ವೇದವ್ಯಾಸ ಮುನಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿದ್ಯಾ ಸಂಪಾದನೆಗೆ ನೆರವಾಗುವ ಗುರುಗಳೆ ನಮ್ಮ ಜೀವನದ ನಿಜವಾದ ದೀಪಗಳು ಎಂದು ಬ್ಯಾಂಕ್ ಕಾಲೋನಿ ಯೋಗ ಸಮಿತಿಯ ಅಧ್ಯಕ್ಷೆ ಶ್ರೀಮತಿ ವನಜಾಕ್ಷಮ್ಮ ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿರಂತರ ಉಚಿತ ಯೋಗ ತರಬೇತಿಯನ್ನು ನೀಡುತ್ತಿರುವ ಶ್ರೀಮತಿ ವಸಂತಲಕ್ಷ್ಮಿ ಹಾಗೂ ಶ್ರೀಮತಿ ಮಂಜುಳಾ ಇವರಿಗೆ ಸನ್ಮಾನಿಸಲಾಯಿತು.
ಪಾಲ್ಗೊಂಡ ಪ್ರಮುಖರು: ಶ್ರೀಮತಿ ರೇಣುಕಮ್ಮ, ಭಾಗ್ಯಲಕ್ಷ್ಮಿ, ನಿರ್ಮಲ, ಸುಧಾ, ಅರುಣ, ತಿಪ್ಪಮ್ಮ, ಅನಿತಾ, ಸುನಿತಾ, ಶೈಲಜಾ, ಸುಜಾತಾ, ನಳಿನ, ಸರಸ್ವತಿ, ಸುಕನ್ಯ ಮತ್ತು ನಿರ್ದೇಶಕ ಮಲ್ಲಿಕಾರ್ಜುನಚಾರ್ ಸೇರಿ ಹಲವು ಯೋಗಾಭ್ಯಾಸಿಗಳು ಉಪಸ್ಥಿತರಿದ್ದರು.