ಜಾತಿಗಣತಿ ಕಾರ್ಯದಲ್ಲಿ ಪರಿಶಿಷ್ಟರೆಲ್ಲರೂ ಪಾಲ್ಗೊಂಡು ತಮ್ಮ ಪಾಲು ಪಡೆಯಲು ಮುಂದಾಗಿ ಕೇಂದ್ರದ ನಿರ್ಧಾರಕ್ಕೆ: ಎಚ್.ಆಂಜನೇಯ ಸ್ವಾಗತ.

ಚಿತ್ರದುರ್ಗ: ಮೇ.1 ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಜಾತಿಗಣತಿ ನಡೆಸಿದ ಹೆಗ್ಗಳಿಕೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರ ಹಾದಿಯಲ್ಲಿಯೇ ಕೇಂದ್ರ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಜಾತಿಗಣತಿ ಕಾರ್ಯಕ್ಕೆ ಮುಂದಾದ ಸಂದರ್ಭ ಕೆಲವರು ರಾಜಕೀಯ ಕಾರಣಕ್ಕೆ ಟೀಕೆ ಮಾಡಿದರು. ಆದರೆ, ನಾವುಗಳು ಅಂತಹ ಹಾದಿಯಲ್ಲಿ ಸಾಗುವುದಿಲ್ಲ. ಇಡೀ ದೇಶದಲ್ಲಿಯೇ ಜನಗಣತಿ ಜೊತೆಗೆ ಜಾತಿಗಣತಿ ಕಾರ್ಯ ಮಾಡಲು ಕೈಗೊಂಡಿರುವ ನರೇಂದ್ರ ಮೋದಿ ಅವರ ಕಾರ್ಯ ಸ್ವಾಗತಾರ್ಹ ಎಂದಿರುವ ಎಚ್. ಆಂಜನೇಯ, ಮುಖ್ಯವಾಗಿ ಎಲ್ಲ ಧರ್ಮ, ಜಾತಿಯವರ ಸಮಗ್ರ ದತ್ತಾಂಶ ಸಂಗ್ರಹ ಕಾರ್ಯಕ್ಕೆ ಅನುಕೂಲವಾಗುವ ಕೈಪಿಡಿ ಸಿದ್ಧಪಡಿಸಿ ತುರ್ತಾಗಿ ಜಾತಿಗಣತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪರಿಶಿಷ್ಟ ಸಮುದಾಯದಲ್ಲಿ ಮೀಸಲಾತಿ ಬಳಕೆಯಲ್ಲಿ ಆಗಿರುವ ಅಸಮಾನತೆ ಹೊಗಲಾಡಿಸಲು ಒಳಮೀಸಲಾತಿ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ 30 ವರ್ಷಗಳ ಹೋರಾಟದ ಫಲ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಒಳಮೀಸಲಾತಿ ಜಾರಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದು. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಯ ಎಲ್ಲರಿಗೂ ಅನುಕೂಲವಾಗಲಿದೆ. ಎಸ್ಸಿಯಲ್ಲಿಯೇ ಗುಂಪುಗಳನ್ನಾಗಿಸಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡುವುದರಿಂದ ಎಲ್ಲ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಹಕಾರಿ ಆಗಲಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಒಳಮೀಸಲಾತಿ ಜಾರಿಗೆ ಹಾಗೂ ಯಾವ ಸಮುದಾಯಕ್ಕೂ ಅನ್ಯಾಯವಾದ ರೀತಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲು ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ನಡೆ ಎಸ್ಸಿಯಲ್ಲಿರುವ ಎಲ್ಲ ಜಾತಿ ಜನರು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಮಾನದಂಡವಾಗಲಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಭೋವಿ, ಲಂಬಾಣಿ, ಮಾದಿಗ, ಛಲವಾದಿ, ದಕ್ಕಲರು, ಕೊರಚ, ಕೊರಮ ಸೇರಿ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲ ಜಾತಿಯವರು ಜಾತಿಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಮೇ 5ರಿಂದ ಮೇ 17ರ ವರೆಗೆ ತಮ್ಮ ಮನೆಗಳಲ್ಲಿಯೇ ಇದ್ದು, ಸಮೀಕ್ಷೆದಾರರು ತಮ್ಮ ಮನೆಗಳಿಗೆ ಬಂದಾಗ ಆಧಾರ್ ಕಾರ್ಡ್ ಸಂಖ್ಯೆ ಜೊತೆಗೆ ಕಡ್ಡಾಯವಾಗಿ ತಮ್ಮ ಮೂಲ ಜಾತಿಯನ್ನು ಹೇಳಬೇಕು. ಒಂದು ವೇಳೆ ಈ ಸಂಬಂಧ ಸಾಧ್ಯವಾಗದಿದ್ದರೇ ತಮ್ಮ ವಾಸ ಸ್ಥಳದ ಮತಗಟ್ಟೆ ಕೇಂದ್ರಗಳಿಗೆ ಮೇ 19ರಿಂದ 21ರೊಳಗೆ ಹೋಗಿ ಸಮೀಕ್ಷೆದಾರರ ಬಳಿ ತಮ್ಮ ಕುಟುಂಬದ ವಿವರ, ಮೂಲ ಜಾತಿ ತಿಳಿಸಬೇಕು.

ಈ ಎರಡು ಹಂತದಲ್ಲಿ ಸಾಧ್ಯವಾಗದರು ಮೇ 19ರಿಂದ ಮೇ 23ರೊಳಗೆ ಆನ್‍ಲೈನ್ ಮೂಲಕ ಜಾತಿಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡು, ತಮ್ಮ ಮೂಲ ಜಾತಿಯನ್ನು ನಮೋದಿಸಬೇಕು. ಇದೇ ಅಂತಿಮ ಅವಕಾಶ ಆಗಿರುತ್ತದೆ. ಮುಖ್ಯವಾಗಿ ತಮ್ಮ ತಮ್ಮ ಸಮುದಾಯಗಳು ಮೀಸಲಾತಿ ಸೌಲಭ್ಯ ಪಡೆಯಲು ಅಗತ್ಯವಾಗಿರುತ್ತದೆ.

ಆದ್ದರಿಂದ ಪರಿಶಿಷ್ಟ ಜಾತಿಯಲ್ಲಿರುವ 101 ಸಮುದಾಯದವರು ಸಮೀಕ್ಷೆದಾರರು ತಮ್ಮ ಕಾಲೋನಿ, ಹಟ್ಟಿ, ಓಣಿ, ಬಡಾವಣೆಗಳಿಗೆ ಬಂದಾಗ ತಮ್ಮ ಮನೆಗಳಲ್ಲಿದ್ದು ಸೂಕ್ತ ಮಾಹಿತಿ ನೀಡಬೇಕು. ಈ ಮೂಲಕ ಶೈಕ್ಷಣಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಒಳಮೀಸಲಾತಿ ಪಡೆಯಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಬಂಧ ಸ್ಪಷ್ಟಪಡಿಸಿದ್ದು, ಯಾವುದೇ ಸಮುದಾಯಕ್ಕೂ ಅನ್ಯಾಯವಾಗದ ರೀತಿ ಜಾತಿಸಮೀಕ್ಷೆ ಬಳಿಕ ಒಳಮೀಸಲಾತಿ ಜಾರಿಗೊಳಿಸಲಾಗುವುದು. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕೋರಿದ್ದು, ಅವರ ಸಮ ಸಮಾಜ ನಿರ್ಮಾಣದ ನಡೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಬೆಂಬಲಿಸಬೇಕು. ಮುಖ್ಯವಾಗಿ ಜಾತಿಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪಡೆಯಬೇಕು ಎಂದು ಎಚ್. ಆಂಜನೇಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *