ವಿಶ್ವಕಪ್ ಗೆದ್ದಿದ್ದು ಧೋನಿ ಎಂದ ಅಭಿಮಾನಿಯ ಚಳಿ ಬಿಡಿಸಿದ ಹರ್ಭಜನ್ ಸಿಂಗ್

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೋಲಿನೊಂದಿಗೆ ಮತ್ತೊಮ್ಮೆ ನಾಯಕತ್ವದ ಚರ್ಚೆಗಳು ಮುನ್ನಲೆಗೆ ಬಂದಿದೆ. ಇದರ ನಡುವೆ ಎಂಎಸ್ ಧೋನಿ ಅಭಿಮಾನಿಗಳು ಟ್ವಿಟರ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಅನ್ನು ಶ್ರೇಷ್ಠ ನಾಯಕ ಎಂದು ಹಾಡಿಹೊಗಳುತ್ತಿದ್ದಾರೆ. ಏಕೆಂದರೆ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಗೆದ್ದುಕೊಂಡಿತ್ತು.
ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದರೂ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಇದೇ ಕಾರಣದಿಂದಾಗಿ ಇದೀಗ ಮಹೇಂದ್ರ ಸಿಂಗ್ ಧೋನಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಡಿ ಹೊಗಳಲಾಗುತ್ತಿದೆ.ಈ ಹೊಗಳಿಕೆಯ ನಡುವೆ ಧೋನಿ ಅಭಿಮಾನಿಯೊಬ್ಬರು ಮಾಡಿದ ಟ್ವೀಟ್ ಭಾರೀ ವೈರಲ್ ಆಗಿತ್ತು. ಯಾವುದೇ ತರಬೇತುದಾರರು ಇಲ್ಲ, ಮಾರ್ಗದರ್ಶಕರು ಇಲ್ಲ, ಚಿಕ್ಕ ಹುಡುಗ, ಹೆಚ್ಚಿನ ಹಿರಿಯ ಆಟಗಾರರು ಭಾಗವಹಿಸಲು ನಿರಾಕರಿಸಿದರು. ಈ ಹಿಂದೆ ಯಾವುದೇ ಒಂದು ಪಂದ್ಯದಲ್ಲೂ ನಾಯಕತ್ವವಹಿಸಿರಲಿಲ್ಲ. ಈ ವ್ಯಕ್ತಿ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದರು. ಅಲ್ಲದೆ ನಾಯಕನಾದ ನಂತರ 48 ದಿನಗಳಲ್ಲಿ T20 ವಿಶ್ವಕಪ್ ಗೆದ್ದರು ಎಂದು ಧೋನಿ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದರು.ಇತ್ತ ಈ ಟ್ವೀಟ್ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರ ಕಣ್ಣಿಗೆ ಬಿದ್ದಿದೆ. ಅಲ್ಲದೆ ವ್ಯಂಗ್ಯಭರಿತವಾಗಿ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿ ಭಜ್ಜಿ ಗಮನ ಸೆಳೆದಿದ್ದಾರೆ.ಹೌದು, ಈ ಪಂದ್ಯಗಳನ್ನು ಆಡುವಾಗ ಈ ಚಿಕ್ಕ ಹುಡುಗ ಭಾರತದ ಪರ ಒಬ್ಬನೇ ಆಡುತ್ತಿದ್ದ.. ಉಳಿದ 10 ಆಟಗಾರರು ಇರಲಿಲ್ಲ.. ಹಾಗಾಗಿ ಏಕಾಂಗಿಯಾಗಿ ವಿಶ್ವಕಪ್ ಟ್ರೋಫಿಗಳನ್ನು ಗೆದ್ದುಕೊಂಡಿದ್ದಾನೆ. ತಮಾಷೆ ಏನೆಂದರೆ ಆಸ್ಟ್ರೇಲಿಯಾ ಅಥವಾ ಇತರ ದೇಶಗಳು ವಿಶ್ವಕಪ್ ಗೆದ್ದಾಗ ಆಸ್ಟ್ರೇಲಿಯಾ ಅಥವಾ ಇತರ ದೇಶಗಳು ವಿಶ್ವಕಪ್ ಗೆದ್ದಿದೆ ಎಂದು ಹೇಳಲಾಗುತ್ತದೆ. ಆದರೆ ಭಾರತೀಯರು ಗೆದ್ದಾಗ, ನಾಯಕ ವಿಶ್ವಕಪ್ ಗೆದ್ದರು ಎಂದು ಹೇಳಲಾಗುತ್ತೆ. ಅಂದಹಾಗೆ ಇದು ಒಂದು ತಂಡವಾಗಿ ಆಡುವ ಆಟ...ಜೊತೆಯಾಗಿ ಗೆಲುತ್ತಾರೆ, ಜೊತೆಯಾಗಿಯೇ ಸೋಲುತ್ತಾರೆ ಎಂದು ಹರ್ಭಜನ್ ಸಿಂಗ್ ಬರೆದುಕೊಂಡಿದ್ದಾರೆ.ಧೋನಿ ಅಭಿಮಾನಿಗೆ ಹರ್ಭಜನ್ ಸಿಂಗ್ ನೀಡಿದ ಈ ಪ್ರತ್ಯುತ್ತರ ಭಾರೀ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಭಾರತಕ್ಕೆ ಯಾರೂ ಕೂಡ ಏಕಾಂಗಿಯಾಗಿ ವಿಶ್ವಕಪ್ ಗೆದ್ದು ಕೊಟ್ಟಿಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

source https://tv9kannada.com/photo-gallery/cricket-photos/harbhajan-singh-hits-back-at-ms-dhoni-fan-in-brutual-tweet-kannada-news-zp-599536.html

Views: 0

Leave a Reply

Your email address will not be published. Required fields are marked *