Harmanpreet Kaur: ಸ್ಮೃತಿ ಮಂಧಾನ ಔಟಾದಾಗ ವಿಶೇಷವಾಗಿ ಸಂಭ್ರಮಿಸಿದ ಹರ್ಮನ್​ಪ್ರೀತ್ ಕೌರ್: ವಿಡಿಯೋ ವೈರಲ್

Harmanpreet Kaur and Smriti Madhana

ಭಾರತೀಯ ಮಹಿಳಾ ಕ್ರಿಕೆಟ್​ನ ಇಬ್ಬರು ಸ್ಟಾರ್ ಆಟಗಾರ್ತಿಯರ ಕಾಳಗಕ್ಕೆ ಮಂಗಳವಾರ ಮಹಿಳಾ ಪ್ರೀಮಿಯರ್ ಲೀಗ್ ಸಾಕ್ಷಿಯಾಯಿತು. ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹರ್ಮನ್​ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡಗಳ (MIW vs RCBW) ನಡುವಣ ಪಂದ್ಯ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಮುಂಬೈ ತಂಡ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಮಿಂಚಿದ ಕೌರ್ ಪಡೆ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ಟೇಬಲ್ ಟಾಪರ್ ಆಗಿದೆ. ಆರ್​ಸಿಬಿ ಸತತ ಎರಡನೇ ಸೋಲು ಕಂಡಿತು. ಇದರ ನಡವೆ ಈ ಮ್ಯಾಚ್​ನಲ್ಲಿ ಸ್ಮೃತಿ ಮಂಧಾನ (Smriti Mandhana) ಔಟಾದಾಗ ಎದುರಾಳಿ ನಾಯಕಿ ಹರ್ಮನ್ (Harmanpreet Kaur) ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೊದಲ ಪಂದ್ಯದಂತೆ ಈ ಮ್ಯಾಚ್​ನಲ್ಲಿ ಕೂಡ ಆರ್​ಸಿಬಿ ಟಾಸ್ ಗೆದ್ದಿತು. ಈ ಬಾರಿ ಬ್ಯಾಟಿಂಗ್ ಆಯ್ದುಕೊಂಡ ಮಂಧಾನ ಸೋಫಿ ಡಿವೈನ್ ಜೊತೆ ಇನ್ನಿಂಗ್ಸ್ ಆರಂಭಿಸಿದರು. ಅಂದುಕೊಂಡಂತೆ ಉತ್ತಮ ಆರಂಭವನ್ನೂ ಪಡೆಯಿತು. ಕೇವಲ 4.1 ಓವರ್‌ಗಳಲ್ಲಿ 39 ರನ್‌ ಗಳಿಸಿದರು. ಈ ಹಂತದಲ್ಲಿ ಆರ್​ಸಿಬಿಗೆ ಡಬಲ್ ಶಾಕ್ ಎದುರಾಯಿತು. ಒಂದೇ ಓವರ್‌ನಲ್ಲಿ ಸೋಫಿ (16) ಹಾಗೂ ದಿಶಾ ಕಾಸತ್‌ (0) ಔಟಾದರು. ಇದರ ಬೆನ್ನಲ್ಲೇ ತಂಡದ ಮೊತ್ತ 43 ಆದಾಗ ಸ್ಮೃತಿ ಕೂಡ ದುರಾದೃಷ್ಟಕರ ರೀತಿಯಲ್ಲಿ ನಿರ್ಗಮಿಸಿದರು.

ಆರನೇ ಓವರ್​ನ ಹೇಲೆ ಮ್ಯಾಥ್ಯೂಸ್ ಅವರ ಮೂರನೇ ಎಸೆತದಲ್ಲಿ ಮಂಧಾನ ಕ್ರೀಸ್ ಬಿಟ್ಟು ಮುಂದೆ ಬಂದು ನೇರವಾಗಿ ಸಿಕ್ಸರ್​ ಸಿಡಿಸಲು ಬ್ಯಾಟ್ ಬೀಸಿದರು. ಆದರೆ, ಬ್ಯಾಟ್​ಗೆ ಚೆಂಡು ತಾಗಲು ಕೊಂಚ ತಡವಾದ ಪರಿಣಾಮ ಬಾಲ್ ವಿಕೆಟ್ ಹಿಂಭಾಗದಲ್ಲಿ ನಿಂತಿದ್ದ ಇಸ್ಸಿ ವಾಂಗ್ ಕೈಗೆ ಸೇರಿತು. ಅಪಾಯಕಾರಿಯಾಗಿ ಗೋಚರಿಸಿದ್ದ ಮಂಧಾನ ಔಟಾಗಿದ್ದು ಮುಂಬೈ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು. ಸ್ಮೃತಿ ಔಟಾಗುತ್ತಿದ್ದಂತೆ ಮುಂಬೈ ಆಟಗಾರರು ವಿಶೇಷವಾಗಿ ಸಂಭ್ರಮಿಸಿದರು. ಅದರಲ್ಲೂ ನಾಯಕಿ ಹರ್ಮನ್​ಪ್ರೀತ್ ಕೌರ್ ಮೇಲಕ್ಕೆ ಹಾರಿ ಸೆಲೆಬ್ರೆಷನ್ ಮಾಡಿದರು. ಇದರ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.

VIDEO: ಅತ್ಯದ್ಭುತ ಕ್ಯಾಚ್ ಹಿಡಿದು, ಬ್ಯಾಟ್ಸ್​ಮನ್​ಗೆ ಹೋಯ್ತಾ ಇರು ಎಂದ ಪೊಲಾರ್ಡ್​

 

ಮಂಧಾನ ನಿರ್ಗಮನದ ಬಳಿಕ ಹೇದರ್ ನೈಟ್ ಶೂನ್ಯಕ್ಕೆ ನಿರ್ಗಮಿಸಿದರೆ, ಎಲಿಸ್ಸಾ ಪೆರಿ 13 ರನ್​ಗೆ ಔಟಾದರು. ರಿಚಾ ಘೋಷ್‌ 28 ರನ್, ಕನಿಕಾ ಅಹುಜಾ 22 ರನ್, ಶ್ರೇಯಾಂಕಾ ಪಾಟಿಲ್‌ 23 ಹಾಗೂ ಮೇಗನ್‌ ಶುಟ್‌ 20 ರನ್ ಗಳಿಸಿ ಕೆಳ ಕ್ರಮಾಂಕದಲ್ಲಿ ಕೈಲಾದಷ್ಟು ಸಹಾಯ ಮಾಡಿ ಔಟಾದರು. ಪರಿಣಾಮ ಆರ್​​ಸಿಬಿ 18.4 ಓವರ್​ಗಳಲ್ಲಿ 155 ರನ್​ಗೆ ಆಲೌಟ್ ಆಯಿತು. ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿತು. ಸ್ಪೋಟಕ ಆಟವಾಡಿದ ಹೇಯ್ಲೀ ಮ್ಯಾಥ್ಯೂಸ್‌ ಅಜೇಯ 77 ರನ್‌ ಸಿಡಿಸಿದರು. ನತಾಲಿ ಶಿವರ್‌ ಅಜೇಯ 55 ರನ್‌ ಬಾರಿಸಿದರು. ಮುಂಬೈ ತಂಡ 14.2 ಓವರ್‌ಗಳಲ್ಲೇ 159 ರನ್‌ ಸಿಡಿಸಿ 9 ವಿಕೆಟ್​ಗಳ ಅಮೋಘ ಗೆಲುವು ಕಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/harmanpreet-kaur-threw-her-harms-into-the-air-in-celebration-after-smriti-mandhana-gets-out-in-miw-vs-rcbw-match-vb-au48-532059.html

Leave a Reply

Your email address will not be published. Required fields are marked *