Haryana election results: ಎಕ್ಸಿಟ್‌ ಪೋಲ್‌ ಉಲ್ಟಾಪಲ್ಟಾ, ಹ್ಯಾಟ್ರಿಕ್‌ ಹಿಟ್‌ ದಡ ಸೇರಿದ ಬಿಜೆಪಿ.

ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಸದ್ಯ ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷ ಮುನ್ನಡೆ ಸಾಧಿಸಿದೆ. ಮೊನ್ನೆ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಹರಿಯಾಣದಲ್ಲಿ ಕಾಂಗ್ರೆಸ್‌ ಗದ್ದುಗೆಯೇರುವುದು ನಿಶ್ಚಿತ ಎಂದು ಹೇಳಿದ್ದವು. ಅದರಂತೆ ಇಂದು ಮತ ಎಣಿಕೆ ಆರಂಭದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದ್ದೂ ಸತ್ಯ.

ಇಂದು ಬೆಳಿಗ್ಗೆ ಬರೋಬ್ಬರಿ 90 ಸದಸ್ಯ ಬಲದ ಹರಿಯಾಣ ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆಬೀರಿತ್ತು. ಬಹುತೇಕ ಕಾಂಗ್ರೆಸ್‌ ಗೆಲ್ಲುವುದು ಖಚಿತ ಎನ್ನುವಷ್ಟರಲ್ಲಿ ಮತ ಎಣಿಕೆ ಎಲ್ಲವೂ ಯೂಟರ್ನ್‌ ಹೊಡೆದಿವೆ.

ಮೊದಲಿಗೆ ಮುನ್ನಡೆ ಬಂದ ಕೂಡಲೇ ಎಲ್ಲೆಡೆ ಕಾಂಗ್ರೆಸ್‌ ಕಾರ್ಯಕರ್ತರು ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮದಲ್ಲಿ ತೊಡಗಿದರು. ಆದರೆ, ಮಧ್ಯಾಹ್ನದ ವೇಳೆಗೆ ಮುನ್ನಡೆಯಲ್ಲಿದ್ದ ಕಾಂಗ್ರೆಸ್‌ ಬಲ ಕುಸಿಯುತ್ತಾ ಹೋಗಿಯು. ಮತ್ತೊಂದೆಡೆ ಮಕಾಡೆ ಮಲಗಿದ್ದ ಬಿಜೆಪಿ ಪುಟಿದೆದ್ದು ನಿಂತಿದೆ. ಸದ್ಯ ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಎಕ್ಸಿಟ್‌ ಪೋಲ್‌ಗೆ ಸೆಡ್ಡು ಹೊಡೆದಿದೆ.

ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಶನಿವಾರ ಮುಕ್ತಾಯವಾಗಿತ್ತು. ಇದರ ಬೆನ್ನಲ್ಲೇ ಅಂದು ಸಂಜೆಯೇ ವಿವಿಧ ಸುದ್ದಿ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದವು. ಬಹುತೇಕ ಸುದ್ದಿ ಸಂಸ್ಥೆಗಳ ಸಮೀಕ್ಷೆ ಪ್ರಕಾರ, ಇಲ್ಲಿ ಕಾಂಗ್ರೆಸ್‌ ಗೆದ್ದು ಬೀಗಲಿದ್ದು, ಬಿಜೆಪಿಗೆ ಭಾರೀ ಮುಖಭಂಗ ಆಗಿತ್ತು. ಹಾಗಾಗಿ ಎಲ್ಲರ ಚಿತ್ತ ಕಾಂಗ್ರೆಸ್‌ನತ್ತ ಇತ್ತು.

ರಿಪಬ್ಲಿಕ್‌ ಭಾರತ್ ಮ್ಯಾಟ್ರಿಜ್‌ ಮತದಾನೋತ್ತರ ಸಮೀಕ್ಷೆ ಪ್ರಕಾರ ಹರಿಯಾಣದ 90 ಸ್ಥಾನಗಳಲ್ಲಿ ಕಾಂಗ್ರೆಸ್‌ 55-62 ಸ್ಥಾನಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಲಿದೆ. ಇನ್ನು ಬಿಜೆಪಿ ಕೇವಲ 18-24 ಸ್ಥಾನಗಳನ್ನು ಪಡೆದು ಭಾರೀ ಮುಖಭಂಗ ಅನುಭವಿಸಲಿದೆ. ಇತರರು 2-5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದರೆ ಎಂದು ಭವಿಷ್ಯ ನುಡಿದಿತ್ತು.

ದೈನಿಕ್ ಭಾಸ್ಕರ್ ಸಮೀಕ್ಷೆ ಪ್ರಕಾರ ಹರಿಯಾಣದಲ್ಲಿ ಕಾಂಗ್ರೆಸ್‌ 44-54 ಸ್ಥಾನ ಪಡೆಯುವ ಮೂಲಕ ಗೆದ್ದು ಬೀಗಲಿದೆ. ಬಿಜೆಪಿ 15-29, ಜೆಜೆಪಿ 0-1, ಐಎನ್‌ಎಲ್‌ಡಿ 1-5, ಇತರೆ 4-9 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿತ್ತು.

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಕೂಡ ಕಾಂಗ್ರೆಸ್‌ 53-65 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಲಿದೆ. ಬಿಜೆಪಿ 18-28 ಸ್ಥಾನಗಳನ್ನು ಪಡೆಯುವ ಮೂಲಕ ಸೋಲನ್ನು ಅನುಭವಿಸಲಿದೆ ಎಂದೇ ಘೋಷಿಸಿತ್ತು. ಆದರೆ, ಇಂದಿನ ಮತ ಎಣಿಕೆಯಲ್ಲಿ ಮಧ್ಯಾಹ್ನದಿಂದ ಬಿಜೆಪಿ ಹರಿಯಾಣದ ಚಾಂಪಿಯನ್‌ ಆಗಿದೆ.

ಕಾಂಗ್ರೆಸ್‌ನ ಪೈಕಿ ಹೆಚ್ಚು ಗಮನ ಸೆಳೆದಿದ್ದ ವಿಶೇಶ್‌ ಫೋಗಟ್‌ ಅವರು ಜುಲಾನಾ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ, ಹರಿಯಾಣದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ಕಕೈತಪ್ಪುವುದು ನಿಶ್ಚಿತ ಹಾಗು ಬಿಜೆಪಿ ಹ್ಯಾಟ್ರಿಕ್‌ ಬಾರಿಸುವುದು ಖಚಿತ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌ನಲ್ಲಿ ಗೆಲುವಿಗೂ ಮುನ್ನವೇ ಶುರುವಾಗಿದ್ದ ಸಿಎಂ ಕುರ್ಚಿ ಫೈಟ್‌ ಕೂಡ ಸೈಲೆಂಟ್‌ ಆಗಿದೆ.

Leave a Reply

Your email address will not be published. Required fields are marked *