ತಲೆಯಿಂದ ಡಿಚ್ಚಿ ಹೊಡೆದು ಹಡಗನ್ನೇ ಪಲ್ಟಿ ಮಾಡಿದ ತಿಮಿಂಗಿಲ! ಮೈನವಿರೇಳಿಸುವ ವಿಡಿಯೊ!

ಇಂಗ್ಲೆಂಡ್‌ನ ಪೋರ್ಟ್ಸ್ ಮೌತ್ ಬಂದರಿನಲ್ಲಿ ಮಂಗಳವಾರ ಬೆಳಗ್ಗೆ ತಿಮಿಂಗಿಲವೊಂದು ಹಡಗೊಂದಕ್ಕೆ ಹಾರಿ ಅದನ್ನು ಪಲ್ಟಿ ಮಾಡಿದೆ. ಈ ಭಯಾನಕ ಘಟನೆಯನ್ನು ಹತ್ತಿರದಲ್ಲಿದ್ದ ಹಡಗಿನವರು ವಿಡಿಯೊ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಪೋರ್ಟ್ಸ್ ಮೌತ್ ಕರಾವಳಿಯಿಂದ ಅರ್ಧ ಮೈಲಿ ದೂರದಲ್ಲಿ ಲಂಗರು ಹಾಕಿದ್ದ ಹಡಗಿನ ಮೇಲ್ಭಾಗದಿಂದ 30 ಅಡಿ ಉದ್ದದ ತಿಮಿಂಗಿಲ ನೆಗೆದಿದೆ. ಅದರ ತಲೆ 23 ಅಡಿ ಉದ್ದದ ಹಡಗಿಗೆ ಡಿಕ್ಕಿ ಹೊಡೆದು ಅದನ್ನು ಪಲ್ಟಿಯಾಗಿಸಿದೆ. ಕಾಲಿನ್ ಯಾಗರ್ (16) ಮತ್ತು ಅವರ ಸಹೋದರ ವ್ಯಾಟ್ (19) ಎಂಬುವರು ಬಂದರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ತಕ್ಷಣ ಬೇರೆ ಹಡಗಿನವರು ಅವರಿಗೆ ಸಹಾಯ ಮಾಡಲು ಧಾವಿಸಿದರು. ಒಬ್ಬ ವ್ಯಕ್ತಿ ಪಲ್ಟಿಯಾದ ಹಡಗಿನಿಂದ ಜಿಗಿದರೆ, ಇನ್ನೊಬ್ಬನು ಜಿಗಿಯಲು ಸಾಧ್ಯವಾಗದೆ ಹಡಗಿನೊಳಗೇ ಈಜಿ ಪಾರಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರಿಗೂ ಯಾವುದೇ ಹೆಚ್ಚಿನ ಗಾಯವಾಗಿಲ್ಲ. ತಿಮಿಂಗಿಲಕ್ಕೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ. ಎಕ್ಸ್ ಬಳಕೆದಾರ ರಿಯಾನ್ ವಿಟ್ನಿ ಎಂಬುವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.‌

ಸಮುದ್ರ ಸಂಶೋಧಕರ ಪ್ರಕಾರ ಈ ಬೃಹತ್ ತಿಮಿಂಗಿಲವು ಉದ್ದೇಶಪೂರ್ವಕವಾಗಿ ಹೀಗೆ ದಾಳಿ ಮಾಡಿಲ್ಲ. ಬದಲಾಗಿ ಸಣ್ಣ ಮೀನುಗಳನ್ನು ಕಂಡಾಗ ಅವು ದೊಡ್ಡ ಬಾಯಿ ತೆರೆದು ಅವುಗಳನ್ನು ನುಂಗಲು ಮೇಲಕ್ಕೆ ಹಾರುತ್ತವೆ. ಹಾಗಾಗಿ ಈ ಹಡಗು ಅಂತಹ ಸ್ಥಳದಲ್ಲಿದ್ದರಿಂದ ಅವು ಹಡಗನ್ನು ನೋಡದೆ ಮೇಲಕ್ಕೆ ಹಾರಿದ್ದರಿಂದ ಈ ಘಟನೆ ಸಂಭವಿಸಿರಬಹುದು. “ನಾನು 30 ವರ್ಷಗಳಿಂದ ತಿಮಿಂಗಿಲಗಳನ್ನು ನೋಡುತ್ತಿದ್ದೇನೆ ಮತ್ತು ತಿಮಿಂಗಿಲಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ. ಹಂಪ್ಬ್ಯಾಕ್ ತಿಮಿಂಗಿಲವು ಉದ್ದೇಶಪೂರ್ವಕವಾಗಿ ಹಡಗಿಗೆ ಡಿಕ್ಕಿ ಹೊಡೆಯುವುದನ್ನು ನಾನು ಎಂದೂ ನೋಡಿಲ್ಲ” ಎಂದು ಸಂಶೋಧಕರೊಬ್ಬರು ತಿಳಿಸಿದ್ದಾರೆ.

ಇಲ್ಲಿ ವಿಶೇಷವಾಗಿ ಜೂನ್ ಮತ್ತು ಆಗಸ್ಟ್ ನಡುವೆ ತಿಮಿಂಗಿಲಗಳು ಸಾಮಾನ್ಯವಾಗಿ ಹೆಚ್ಚಾಗಿ ಕಂಡು ಬರುತ್ತವೆ. ಆದರೆ ತಿಮಿಂಗಿಲ ಹಡಗಿನ ಮೇಲೆ ದಾಳಿ ಮಾಡಿದ್ದು ಮಾತ್ರ ಇದೇ ಮೊದಲ ಘಟನೆ ಎನ್ನಲಾಗುತ್ತದೆ. ಈ ಘಟನೆಗೂ ಮೊದಲು ಇದೇ ಪ್ರದೇಶದಲ್ಲಿ ತಿಮಿಂಗಿಲವೊಂದು ಪತ್ತೆಯಾಗಿದ್ದನ್ನು ವೀಕ್ಷಕರು ಗಮನಿಸಿದ್ದಾರೆ ಎನ್ನಲಾಗಿದೆ.

Source : https://vistaranews.com/latest/viral-video-whale-roar-at-portsmouth-harbor-what-did-the-ship-overturn-and-do-to-the-fishermen-video-goes-viral/701731.html

Leave a Reply

Your email address will not be published. Required fields are marked *