ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದಾಗಿ ಚಿಕ್ಕೋಡಿಯ ಕೆಳಹಂತದ ಏಳು ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಗಿವೆ.

ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಪ್ರತಿ ಗಂಟೆಗೂ ಹೆಚ್ಚಳವಾಗುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ.
ಇದರಿಂದ ಕೆಳಹಂತದ ಏಳು ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಕೃಷ್ಣಾ ನದಿ ಹಾಗೂ ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಏಳು ಕೆಳಹಂತದ ಸೇತುವೆಗಳು ಈಗಾಗಲೇ ಜಲಾವೃತಗೊಂಡು ನದಿಯ ದಂಡೆಯ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಚಿಕ್ಕೋಡಿ ತಾಲೂಕಿನ ಮಲಿಕವಾಡ – ದತ್ತವಾಡ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ.
ಒಳಹರಿವು ಹೆಚ್ಚಳವಾದ ಹಿನ್ನೆಲೆ ಸೇತುವೆಗಳು ಜಲಾವೃತ: ನಿಪ್ಪಾಣಿ ತಾಲೂಕಿನ ಕಾರದಗಾ -ಭೋಜ, ಭೋಜವಾಡಿ-ಕುನ್ನೂರ, ಸಿದ್ದಾಳ-ಅಕ್ಕೋಳ, ಜತಾಟ-ಭಿವಶಿ, ಮಮದಾಪೂರ-ಹುನ್ನರಗಿ, ಕುನೂರ-ಬಾರವಾಡ ಸೇತುವೆಗಳು ನದಿಯಲ್ಲಿ ಒಳಹರಿವು ಹೆಚ್ಚಳವಾದ ಹಿನ್ನೆಲೆ ಜಲಾವೃತವಾಗಿವೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿ ನಿಪ್ಪಾಣಿ ಪೊಲೀಸರು ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ಬಂದ್ ಮಾಡಿದ್ದಾರೆ ಹಾಗೂ ಯಾರು ಸೇತುವೆ ಮೇಲೆ ಸಂಚಾರ ಮಾಡಿದಂತೆ ನಾಮಫಲಕ ಅಳವಡಿಸಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹಿಪ್ಪರಗಿ ಬ್ಯಾರೇಜ್ 82,300 ಕ್ಯೂಸೆಕ್ ಒಳಹರಿವು: ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿದ ಭಾರಿ ಮಳೆಗೆ ವೇದ ಗಂಗಾ, ದೂದ್ ಗಂಗಾ, ಪಂಚಗಂಗಾ, ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದರಿಂದ ಒಳಹರಿವು ಹೆಚ್ಚಿದೆ. ಪ್ರತಿಕ್ಷಣವೂ ನೀರಿನ ಮಟ್ಟ ಏರಿಕೆಯಿಂದ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಲ್ಲಿ, ಕೃಷ್ಣಾ ನದಿಯಲ್ಲಿ 71333 ಕ್ಯೂಸೆಕ್ ಒಳಹರಿವು ಹೆಚ್ಚಿದೆ. ಹಿಪ್ಪರಗಿ ಬ್ಯಾರೇಜ್ 82300 ಕ್ಯೂಸೆಕ್ ಒಳಹರಿವು ಸದ್ಯಕ್ಕೆ ಇದೆ ಎಂದು ಚಿಕ್ಕೋಡಿ ಉಪವಿಭಾಗದ ಅಧಿಕಾರಿ ಮಾಧವಾ ಗೀತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಳೆ ರೈತರ ಮೊಗದಲ್ಲಿ ಮಂದಹಾಸ: ಇನ್ನೊಂದೆಡೆ ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಬಿಟ್ಟು ಬಿಡದೇ ಮಳೆಯಾಗುತ್ತಿರುವುದರಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ನೀರಿಲ್ಲದೇ ಕಮರುತ್ತಿದ್ದ ಭತ್ತದ ಸಸಿಗಳಿಗೆ ಸದ್ಯ ಜೀವ ಕಳೆ ಬಂದಿದೆ.
ನೀರಿಲ್ಲದೇ ಖಾಲಿ ಖಾಲಿಯಾಗಿದ್ದ ಬೆಳಗಾವಿ ಸುತ್ತಮುತ್ತಲಿನ ರೈತರ ಗದ್ದೆಗಳಲ್ಲಿ ಈಗ ಕಣ್ಣು ಹಾಯಿಸಿದಲ್ಲೆಲ್ಲ ನೀರು ಕಾಣಿಸುತ್ತಿದೆ. ರೈತರ ಪ್ರಾರ್ಥನೆಗೆ ವರುಣ ದೇವ ಕೃಪೆ ತೋರಿದ್ದಾರೆ. ಜಿಲ್ಲಾದ್ಯಂತ ವಾರದಿಂದ ಬಿಟ್ಟು ಬಿಡದೇ ಮಳೆಯಾಗುತ್ತಿದೆ. ಇದರಿಂದ ಬೆಳಗಾವಿಯ ಜಿಲ್ಲೆಯ ವಡಗಾವಿ, ಶಾಹಪುರ, ಯಳ್ಳೂರ, ಖಾಸಬಾಗ, ಬಸವನಕುಡಚಿ, ನಿಲಜಿ, ಮುತಗಾ, ಉಚಗಾಂವ, ಕಡೋಲಿ, ಜಾಫರವಾಡಿ ಸೇರಿ ಬಹುತೇಕ ಗ್ರಾಮಗಳ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಚುರುಕು ಪಡೆದಿವೆ. ರೈತರು ಮಳೆಯಲ್ಲೇ ಉತ್ಸಾಹದಿಂದ ಕೃಷಿ ಕಾಯಕದಲ್ಲಿ ತೊಡಗಿರುವುದು ಕಂಡುಬರುತ್ತಿದೆ.
ಮಳೆಯಾದರೆ ರೈತರಿಗೆ ಲಾಭ : ಭತ್ತದ ನಾಟಿ ಮಾಡಲು ಶಹಾಪುರದಲ್ಲಿ ಗದ್ದೆ ಹದಗೊಳಿಸುತ್ತಿದ್ದ ರೈತ ರಾಜು ಮರ್ವೆ ಅವರು ಮಾತನಾಡಿ, ‘ಒಳ್ಳೆಯ ಮಳೆ ಆಗುತ್ತಿರುವುದು ಎಲ್ಲ ರೈತರಿಗೆ ಸಮಾಧಾನ ತಂದಿದೆ. ಹೋದ ವರ್ಷ ಈ ದಿನಕ್ಕೆ ಒಂದೂವರೆ ಅಡಿಯಷ್ಟು ಭತ್ತ ಬೆಳೆದಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದ ಒಂದು ಅಡಿಯಷ್ಟು ಬೆಳೆ ಬಂದಿಲ್ಲ. ಮಳೆ ಬಂದರೆ ಮಾತ್ರ ರೈತರಿಗೆ ಲಾಭ ಆಗುತ್ತದೆ’ ಎಂದಿದ್ದಾರೆ.