U19 T20 World Cup 2025: ನಾಳೆಯಿಂದ ಕಿರಿಯರ ಮಿನಿ ವಿಶ್ವ ಸಮರ; ಟೂರ್ನಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ವರ್ಷ ನಡೆದಿದ್ದ 19 ವರ್ಷದೊಳಗಿನ ಪುರುಷರ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ಮಲೇಷ್ಯಾ, ಇದೀಗ ಮಹಿಳೆಯ ಮಿನಿ ವಿಶ್ವ ಸಮರಕ್ಕೆ ಆತಿಥ್ಯ ನೀಡುತ್ತಿದೆ. ಎರಡನೇ ಆವೃತ್ತಿಯ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್ ಜನವರಿ 18 ರಿಂದ ಆರಂಭವಾಗಲಿದ್ದು, ಫೆಬ್ರವರಿ 2 ರಂದು ನಡೆಯಲ್ಲಿರುವ ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಸೇರಿದಂತೆ 16 ತಂಡಗಳು ಬಾಗವಹಿಸಲಿದ್ದು, 16 ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಲ್ಲಿ ಒಟ್ಟು 41 ಪಂದ್ಯಗಳು ನಡೆಯಲಿವೆ. 2023 ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಭಾರತ ವನಿತಾ ಪಡೆ, ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಾಗಿ ಹಾಲಿ ಚಾಂಪಿಯನ್ ಆಗಿರುವ ಭಾರತಕ್ಕೆ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಒತ್ತಡವಿದೆ.

ಜನವರಿ 18 ರಿಂದ ಪ್ರಾರಂಭ

ಮೇಲೆ ಹೇಳಿದಂತೆ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್ ಜನವರಿ 18 ರಿಂದ ಮಲೇಷ್ಯಾದಲ್ಲಿ ಆರಂಭವಾಗಲಿದೆ. 16 ತಂಡಗಳ ನಡುವೆ 16 ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು ಸೆಮಿಫೈನಲ್ ಪಂದ್ಯ ಜನವರಿಯಲ್ಲಿ ನಡೆದರೆ ಫೆಬ್ರುವರಿ 2ರಂದು ಟೈಟಲ್‌ ಹೋರಾಟ ನಡೆಯಲಿದೆ. ಈ ಪಂದ್ಯಗಳಿಗೆ ಮಲೇಷ್ಯಾದ ಸೆಲಂಗೋರ್‌ನ ಬ್ಯೂಮಾಸ್ ಓವಲ್, ಯುಕೆಎಂ ವೈಎಸ್‌ಡಿ ಓವಲ್, ಜೋಹರ್‌ನ ಜೆಸಿಎ ಓವಲ್ ಮತ್ತು ಸರವಾಕ್‌ನ ಬೊರ್ನಿಯೊ ಕ್ರಿಕೆಟ್ ಮೈದಾನಗಳು ಆತಿಥ್ಯ ನೀಡಲಿವೆ.

16 ತಂಡಗಳ ನಾಲ್ಕು ಗುಂಪು

ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವ 16 ತಂಡಗಳನ್ನು ತಲಾ ನಾಲ್ಕು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಮಲೇಷ್ಯಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳಿದ್ದರೆ, ಬಿ ಗುಂಪಿನಲ್ಲಿ ಇಂಗ್ಲೆಂಡ್, ಪಾಕಿಸ್ತಾನ, ಐರ್ಲೆಂಡ್ ಮತ್ತು ಅಮೇರಿಕಾ ತಂಡಗಳಿವೆ. ಸಿ ಗುಂಪಿನಲ್ಲಿ ನೈಜೀರಿಯಾ, ದಕ್ಷಿಣ ಆಫ್ರಿಕಾ, ಸಮೋವಾ ಮತ್ತು ನ್ಯೂಜಿಲೆಂಡ್ ತಂಡಗಳಿದ್ದರೆ ಡಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಸ್ಕಾಟ್ಲೆಂಡ್, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳಿವೆ.

ನೈಜೀರಿಯಾ ಮತ್ತು ಸಮೋವಾ ಮೊದಲ ಬಾರಿಗೆ ಮಹಿಳಾ ಅಂಡರ್-19 ವಿಶ್ವಕಪ್ ಅನ್ನು ಆಡುತ್ತಿರುವುದು ವಿಶೇಷ. ಎಲ್ಲಾ ತಂಡಗಳು ತಮ್ಮ ಗುಂಪಿನ ಮೂರು ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡಲಿವೆ. ಪ್ರತಿ ಗುಂಪಿನಿಂದ ಅಗ್ರ 3 ತಂಡಗಳು (ಒಟ್ಟು 12 ತಂಡಗಳು) ಸೂಪರ್ ಸಿಕ್ಸ್‌ಗೆ ಅರ್ಹತೆ ಪಡೆಯಲ್ಲಿವೆ. ಸೂಪರ್ ಸಿಕ್ಸ್ ಸುತ್ತಿನಲ್ಲಿ ಗ್ರೂಪ್ ಬಿ ಮತ್ತು ಸಿ ಗುಂಪಿನ ತಂಡಗಳನ್ನು ಒಂದು ಗುಂಪಿನಲ್ಲಿ ಮತ್ತು ಗ್ರೂಪ್ ಎ ಮತ್ತು ಡಿ ಗುಂಪಿನ ತಂಡಗಳನ್ನು ಒಂದು ಗುಂಪಿನಲ್ಲಿ ಇರಿಸಲಾಗುತ್ತದೆ. ನಂತರ ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಮೊದಲ ದಿನ 6 ಪಂದ್ಯಗಳು

ಈ ಪಂದ್ಯಾವಳಿಯ ಮೊದಲ ದಿನವಾದ ಜನವರಿ 18 ರಂದು ಆರು ಪಂದ್ಯಗಳು ನಡೆಯಲಿವೆ. ಭಾರತೀಯ ಕಾಲಮಾನ ಬೆಳಗ್ಗೆ 8ರಿಂದ ಮೂರು ಪಂದ್ಯಗಳು ಆರಂಭವಾಗಲಿವೆ. ಮೊದಲ ದಿನ ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್, ಇಂಗ್ಲೆಂಡ್ vs ಐರ್ಲೆಂಡ್, ಜೊಹೋರ್ vs ನೈಜೀರಿಯಾ ಸರವಾಕ್‌ ಮುಖಾಮುಖಿಯಾಗಲಿವೆ. ಅದೇ ದಿನ ಮಧ್ಯಾಹ್ನ 12 ಗಂಟೆಗೆ, ಬಾಂಗ್ಲಾದೇಶ vs ನೇಪಾಳ, ಪಾಕಿಸ್ತಾನ vs ಅಮೇರಿಕಾ, ದಕ್ಷಿಣ ಆಫ್ರಿಕಾ vs ನ್ಯೂಜಿಲೆಂಡ್ ಸ್ಪರ್ಧಿಸಲಿವೆ.

ಭಾರತದ ವೇಳಾಪಟ್ಟಿ

  1. ಜನವರಿ 19, ಭಾರತ vs ವೆಸ್ಟ್ ಇಂಡೀಸ್, ಮಧ್ಯಾಹ್ನ 12 ಗಂಟೆ, ಬ್ಯೂಮಾಸ್ ಓವಲ್, ಕೌಲಾಲಂಪುರ್
  2. ಜನವರಿ 21, ಭಾರತ vs ಮಲೇಷ್ಯಾ, ಮಧ್ಯಾಹ್ನ 12 ಗಂಟೆ, ಬ್ಯೂಮಾಸ್ ಓವಲ್, ಕೌಲಾಲಂಪುರ್
  3. ಜನವರಿ 23, ಭಾರತ vs ಶ್ರೀಲಂಕಾ, ಮಧ್ಯಾಹ್ನ 12 ಗಂಟೆ, ಬ್ಯೂಮಾಸ್ ಓವಲ್, ಕೌಲಾಲಂಪುರ್

Source: https://tv9kannada.com/sports/cricket-news/u19-womens-t20-cricket-world-cup-2025-schedule-psr-965432.html

Leave a Reply

Your email address will not be published. Required fields are marked *