ಕರ್ನಾಟಕ SSLC, ದ್ವಿತೀಯ PUC ಅಂತಿಮ ವೇಳಾಪಟ್ಟಿ ಪ್ರಕಟ: ಪರೀಕ್ಷಾ ದಿನಾಂಕ, ಸಮಯ ಹಾಗೂ ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ (2nd PUC) ಹಾಗೂ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಪರೀಕ್ಷಾ ದಿನಾಂಕ, ಸಮಯ ಹಾಗೂ ನೋಂದಾಯಿತ ವಿದ್ಯಾರ್ಥಿಗಳ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಜಾಲತಾಣದ ಓದುಗರಿಗಾಗಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಪೂರ್ಣ ವೇಳಾಪಟ್ಟಿಯ ವಿವರಗಳನ್ನು ಇಲ್ಲಿ ನೀಡಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಮುಖ ವಿವರಗಳು:

  • ಪರೀಕ್ಷಾ ದಿನಾಂಕ: ಫೆಬ್ರವರಿ 28 ರಿಂದ ಮಾರ್ಚ್ 17, 2026 ರವರೆಗೆ.
  • ಸಮಯ: ಪ್ರತಿದಿನ ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ.
  • ವಿದ್ಯಾರ್ಥಿಗಳ ಅಂಕಿ-ಅಂಶ: ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 6,46,801 ಹೊಸ ವಿದ್ಯಾರ್ಥಿಗಳು, 50,540 ಪುನರಾವರ್ತಿತ ಅಭ್ಯರ್ಥಿಗಳು ಹಾಗೂ 13,022 ಖಾಸಗಿ ಅಭ್ಯರ್ಥಿಗಳು ಸೇರಿದ್ದಾರೆ.
  • ಪರೀಕ್ಷಾ ಕೇಂದ್ರಗಳು: ರಾಜ್ಯಾದ್ಯಂತ ಒಟ್ಟು 1,217 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.
  • ಫಲಿತಾಂಶ: ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ, ಅಂದರೆ ಏಪ್ರಿಲ್ 7 ರ ಸುಮಾರಿಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.

ದ್ವಿತೀಯ ಪಿಯುಸಿ (ಪರೀಕ್ಷೆ 1) ಸಂಪೂರ್ಣ ವೇಳಾಪಟ್ಟಿ:

  • ಫೆಬ್ರವರಿ 28: ಕನ್ನಡ, ಅರೇಬಿಕ್
  • ಮಾರ್ಚ್ 2: ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
  • ಮಾರ್ಚ್ 3: ಇಂಗ್ಲಿಷ್
  • ಮಾರ್ಚ್ 4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • ಮಾರ್ಚ್ 5: ಇತಿಹಾಸ
  • ಮಾರ್ಚ್ 6: ಭೌತಶಾಸ್ತ್ರ
  • ಮಾರ್ಚ್ 7: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ
  • ಮಾರ್ಚ್ 9: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
  • ಮಾರ್ಚ್ 10: ಅರ್ಥಶಾಸ್ತ್ರ
  • ಮಾರ್ಚ್ 11: ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
  • ಮಾರ್ಚ್ 12: ಹಿಂದಿ
  • ಮಾರ್ಚ್ 13: ರಾಜ್ಯಶಾಸ್ತ್ರ
  • ಮಾರ್ಚ್ 14: ಲೆಕ್ಕಶಾಸ್ತ್ರ, ಗಣಿತ
  • ಮಾರ್ಚ್ 16: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
  • ಮಾರ್ಚ್ 17: ಹಿಂದುಸ್ತಾನಿ ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ

ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ವಿವರಗಳು:

ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಕ್ತಾಯಗೊಂಡ ಮರುದಿನವೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಶುರುವಾಗಲಿವೆ.

  • ಮುಖ್ಯ ಪರೀಕ್ಷಾ ದಿನಾಂಕ: ಮಾರ್ಚ್ 18 ರಿಂದ ಏಪ್ರಿಲ್ 2, 2026 ರವರೆಗೆ ನಡೆಯಲಿವೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ:

ಮಾರ್ಚ್ 18: ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್‌, ಹಿಂದಿ ಇತ್ಯಾದಿ)
ಮಾರ್ಚ್ 23: ವಿಜ್ಞಾನ
ಮಾರ್ಚ್ 25: ದ್ವಿತೀಯ ಭಾಷೆ (ಇಂಗ್ಲಿಷ್‌, ಕನ್ನಡ)
ಮಾರ್ಚ್ 28: ಗಣಿತ
ಮಾರ್ಚ್ 30: ತೃತೀಯ ಭಾಷೆ
ಏಪ್ರಿಲ್ 2: ಸಮಾಜ ವಿಜ್ಞಾನ

  • ಸಮಯ: ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:15 ಗಂಟೆಯವರೆಗೆ.
  • ಎಸ್‌ಎಲ್‌ಎಲ್‌ಸಿ ವಿದ್ಯಾರ್ಥಿಗಳ ಅಂಕಿ-ಅಂಶ
  • ಒಟ್ಟು ವಿದ್ಯಾರ್ಥಿಗಳು- 9,02,889
  • ಹೊಸಬರು-8,12,855
  • ಪುನರಾವರ್ತಿತ-62,845
  • ಖಾಸಗಿ ಅಭ್ಯರ್ಥಿಗಳು-27,189

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 (SSLC Exam-2) ವೇಳಾಪಟ್ಟಿ: ವಾರ್ಷಿಕ ಪರೀಕ್ಷೆಯ ನಂತರ ನಡೆಯುವ ಪರೀಕ್ಷೆ-2 ಮೇ 18 ರಿಂದ ಆರಂಭವಾಗಲಿದೆ. ಇದರ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ:

  • ಮೇ 18: ಪ್ರಥಮ ಭಾಷೆ
  • ಮೇ 19: ವಿಜ್ಞಾನ
  • ಮೇ 20: ದ್ವಿತೀಯ ಭಾಷೆ
  • ಮೇ 21: ಗಣಿತ
  • ಮೇ 22: ತೃತೀಯ ಭಾಷೆ
  • ಮೇ 23: ಸಮಾಜ ವಿಜ್ಞಾನ

ಲೋಪದೋಷಗಳಿಲ್ಲದೆ ಪರೀಕ್ಷೆ ನಡೆಸಲು ಸಿದ್ಧತೆ: ಮಧುಬಂಗಾರಪ್ಪ

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಯಾವುದೇ ಲೋಪದೋಷಗಳಿಲ್ಲದೆ, ಶಿಸ್ತುಬದ್ಧವಾಗಿ ನಡೆಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯಗೊಳಿಸಲಾಗಿದ್ದು, ಪರೀಕ್ಷಾ ಪ್ರಕ್ರಿಯೆಯನ್ನು ನೇರವಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಚೇರಿಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಪ್ರಶ್ನೆಪತ್ರಿಕೆಗಳ ಸಾಗಾಟ ಮತ್ತು ಶೇಖರಣಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಇರಲಿದೆ.

ಪರೀಕ್ಷಾ ಕೇಂದ್ರದ ಒಳಗೆ ಸಿಬ್ಬಂದಿ ಸೇರಿದಂತೆ ಯಾರಿಗೂ ಮೊಬೈಲ್ ಫೋನ್ ಕೊಂಡೊಯ್ಯಲು ಅವಕಾಶವಿಲ್ಲ. ಡಿಜಿಟಲ್ ಉಪಕರಣಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಎದುರಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *