PM internship scheme 2025: ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ನೋಂದಣಿ ಆರಂಭ; ಕಲಿಕೆ ಜೊತೆಗೆ ಸಿಗುತ್ತೆ ಸಂಬಳ! ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ! ಯುವಜನತೆಗೆ ಉದ್ಯೋಗಗಳನ್ನ ಸೃಷ್ಟಿಸುವ ನಿಟ್ಟಿನಲ್ಲಿ ಹಾಗೂ ಉತ್ತಮ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡಲು ಸರ್ಕಾರ ಪಿಎಂ ಇಂಟರ್ನ್‌ಶಿಪ್ ಯೋಜನೆ ತಂದಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತರು ಈ ಕೆಳಗಿನ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ನವದೆಹಲಿ: ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಪಿಎಂ ಇಂಟರ್ನ್‌ಶಿಪ್ ಯೋಜನೆ 2025ಗಾಗಿ (PM internship scheme 2025) ನೋಂದಣಿ (Registration) ಪ್ರಾರಂಭಿಸಿದೆ. ತನ್ನ ಅಧಿಕೃತ ಪೋರ್ಟಲ್, pminternship.mca.gov.in ನಲ್ಲಿ PM ಇಂಟರ್ನ್‌ಶಿಪ್ ಯೋಜನೆ (PMIS) 2025 ನೋಂದಣಿ ಪ್ರಕ್ರಿಯೆ ಶುರು ಮಾಡಿದ್ದು, ಆಸಕ್ತರು ಈ ಕೂಡಲೇ ಅರ್ಜಿ (Application) ಸಲ್ಲಿಸಬಹುದು. ಈ ತಿಂಗಳ 11ನೇ ತಾರೀಕಿನೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಮಾರ್ಚ್ 12, 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೊಲಗಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನ ಜಾರಿಗೆ ತರುತ್ತಿದೆ. ಅದರ ಭಾಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಹೊಸ ಯೋಜನೆ ಪ್ರಾರಂಭಿಸಿದ್ದಾರೆ. ಯುವಜನರಿಗೆ ಕೆಲಸ ಸಿಗಬೇಕು, ಉತ್ತಮ ಸಂಬಳ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಭಾರತ ಸರ್ಕಾರ ಈ ಯೋಜನೆ ಶುರುಮಾಡಿದೆ.
ದೇಶದ ಟಾಪ್ 500 ಕಂಪನಿಗಳಲ್ಲಿ ಇಂಟರ್ನ್‌ಶಿಪ್
ಯುವಜನರಿಗೆ ಇಂಟರ್ನ್‌ಶಿಪ್ ಅವಕಾಶ ನೀಡುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ದೇಶದ ಟಾಪ್ 500 ಕಂಪನಿಗಳಲ್ಲಿ ಇಂಟರ್ನ್‌ಶಿಪ್ ನೀಡಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡುವುದು ಈ ಯೋಜನೆಯ ಗುರಿಯಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆ ಮತ್ತು ನೈಜ-ಪ್ರಪಂಚದ ಅನುಭವವನ್ನ ಒದಗಿಸಲಾಗುತ್ತೆ. ಈ ಯೋಜನೆಯಡಿ ಕಡಿಮೆ ಆದಾಯದ ಕುಟುಂಬಗಳ 21 ರಿಂದ 24 ವರ್ಷದೊಳಗಿನ ಯುವಕರಿಗೆ 12 ತಿಂಗಳ ಇಂಟರ್ನ್‌ಶಿಪ್ ಅವಕಾಶ ನೀಡಲಾಗುತ್ತದೆ.
PM ಇಂಟರ್ನ್‌ಶಿಪ್ ಯೋಜನೆಗಾಗಿ ₹800 ಕೋಟಿ ಬಜೆಟ್ ಮಂಡನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ PM ಇಂಟರ್ನ್‌ಶಿಪ್ ಯೋಜನೆ 2025 ಗಾಗಿ ₹800 ಕೋಟಿ ಬಜೆಟ್ ಅನ್ನು ನಿಗದಿಪಡಿಸಿದ್ದಾರೆ . ಅಕ್ಟೋಬರ್ 3, 2024 ರಂದು ಅಧಿಕೃತವಾಗಿ ಈ ಯೋಜನೆ ಪ್ರಾರಂಭವಾಗಿದ್ದು, ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಪ್ರಾಯೋಗಿಕ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ . ಆಯ್ಕೆಯಾದ ಅಭ್ಯರ್ಥಿಗಳು ₹5,000 ಮಾಸಿಕ ಸ್ಟೈಫಂಡ್ ಪಡೆಯುತ್ತಾರೆ ಮತ್ತು ಭಾರತದಾದ್ಯಂತ ಆಟೋಮೊಬೈಲ್, ಹಣಕಾಸು, ಆತಿಥ್ಯ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿನ ಬರೋಬ್ಬರಿ 500 ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ.
1.25 ಲಕ್ಷ ಯುವಕರಿಗೆ ಇಂಟರ್ನ್‌ಶಿಪ್ ನೀಡುವ ಗುರಿ
ಸದ್ಯ ಈ ಪ್ರಾಯೋಗಿಕ ಹಂತವು 1.25 ಲಕ್ಷ ಯುವಕರನ್ನು ಗುರಿಯಾಗಿರಿಸಿಕೊಂಡಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಒಂದು ಕೋಟಿ ಯುವಜನರಿಗೆ ಇಂಟರ್ನ್‌ಶಿಪ್ ಸೌಲಭ್ಯ ಕಲ್ಪಿಸುವ ಗುರಿಯನ್ನು ಈ ಪಿಎಂ ಇಂಟರ್ನ್‌ಶಿಪ್ ಯೋಜನೆ ಹೊಂದಿದೆ. ಇನ್ನೂ ವರ್ಷಪೂರ್ತಿ ನಡೆಯುವ ಈ ಯೋಜನೆಯಲ್ಲಿ ಆರು ತಿಂಗಳ ತರಬೇತಿ ಇರುತ್ತದೆ. ನಂತರ ನೀವು ಆರು ತಿಂಗಳು ಇಂಟರ್ನ್‌ಶಿಪ್ ಮಾಡಬೇಕು. ನಂತರ ಉದ್ಯೋಗ ಲಭ್ಯವಾಗುತ್ತದೆ.
ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ನೊಂದಾಯಿಸಲು ಬೇಕಾದ ಅರ್ಹತೆ:
* ಭಾರತೀಯ ಪೌರತ್ವ: ಕಡ್ಡಾಯ
* 10ನೇ, 12ನೇ, ಐಟಿಐ, ಪಾಲಿಟೆಕ್ನಿಕ್ ಅಥವಾ ಡಿಪ್ಲೊಮಾ ಉತ್ತೀರ್ಣರಾಗಿರಬೇಕು.
* ವಯಸ್ಸು: 18 ರಿಂದ 24 ವರ್ಷ (ಒಬಿಸಿ/ಎಸ್‌ಸಿ/ಎಸ್‌ಟಿಗಳಿಗೆ ಸಡಿಲಿಕೆ)
ಪಿಎಂ ಇಂಟರ್ನ್‌ಶಿಪ್ ಯೋಜನಗೆಳಲ್ಲಿ ಸಿಗುವ ಸೌಲಭ್ಯಗಳು:
ಮಾಸಿಕ ಸ್ಟೈಫಂಡ್ : ರೂ. 5,000
ಒಂದು ಬಾರಿ ಪಾವತಿ: ರೂ. 6,000
ಕೆಲಸದ ಬಗ್ಗೆ ಪ್ರಾಯೋಗಿಕ ಜ್ಞಾನ
ಅರ್ಜಿ ಸಲ್ಲಿಸುವ ವಿಧಾನ:
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ — pminternship.mca.gov.in.
ಹಂತ 2: ಮುಖಪುಟದಲ್ಲಿ, ನೋಂದಣಿ ಲಿಂಕ್ ಕ್ಲಿಕ್ ಮಾಡಿ
ಹಂತ 3: ಮಾಹಿತಿ ಭರ್ತಿ ಮಾಡಿ, ಸಲ್ಲಿಸಿ ಕ್ಲಿಕ್ ಮಾಡಿ
ಹಂತ 4: ಅಭ್ಯರ್ಥಿ ನೀಡಿದ ಮಾಹಿತಿ ಆಧಾರದ ಮೇಲೆ ಪೋರ್ಟಲ್‌ನಲ್ಲಿ ರೆಸ್ಯೂಮ್ ತಯಾರಾಗುತ್ತದೆ
ಹಂತ 5: ಆದ್ಯತೆ ಮೇರೆಗೆ 5 ಇಂಟರ್ನ್‌ಶಿಪ್‌ಗಳಿಗೆ ಅರ್ಜಿ ಸಲ್ಲಿಸಿ – ಸ್ಥಳ, ವಲಯ, ಕೆಲಸ ಮತ್ತು ಅರ್ಹತೆಗಳನ್ನ ಗಮನದಲ್ಲಿಡಿ.