ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಜ.10:
ಶ್ರೀ ಗುರು ಸಿದ್ದರಾಮೇಶ್ವರರ 853ನೇ ಜಯಂತಿ ಮಹೋತ್ಸವ ಜಿಲ್ಲೆಯ ಹೊಳಲ್ಕೆರೆಯ ವಾಲ್ಮೀಕಿ ಮೈದಾನದಲ್ಲಿ ಇದೇ ಜನವರಿ 14 ಮತ್ತು 15 ರಂದು ಭವ್ಯವಾಗಿ ನಡೆಯಲಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14ರ ಬೆಳಗ್ಗೆ ಜಿ.ಬಸಪ್ಪ ಮಹಾಮಂಟಪದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ ಎಂದರು. ನಾಡಿನ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ನಡೆಯುವ ಈ ಸಮಾರಂಭವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಸಚಿವ ಈಶ್ವರ ಖಂಡ್ರೆ ನೊಳಂಬ ಇತಿಹಾಸ ಹಾಗೂ ಸಂಘದ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡುವರು. ಮಾಜಿ ಸಂಸದ ಬಸವರಾಜ್ ನೊಳಂಬ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಜ.14ರ ಮಧ್ಯಾಹ್ನ 2.30ಕ್ಕೆ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ಸಂಸದ ಗೋವಿಂದ ಕಾರಜೋಳ ಉದ್ಘಾಟಿಸುವರು. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಈ ಸಂದರ್ಭದಲ್ಲಿ ಸಿದ್ದರಾಮ ಸಾಹಿತ್ಯ ಪ್ರಶಸ್ತಿಯನ್ನು ಕತ್ತಿಗೆ ಚನ್ನಪ್ಪ ಅವರಿಗೆ ಸಂಸದ ಖೋಟಾ ಶ್ರೀನಿವಾಸ್ ಪೂಜಾರಿ ಪ್ರದಾನ ಮಾಡಲಿದ್ದಾರೆ.
ಜ.15ರ ಬೆಳಗ್ಗೆ 7.30ಕ್ಕೆ ಇಷ್ಟಲಿಂಗ ಪೂಜಾ ವಿಧಾನ ಮತ್ತು ಲಿಂಗಧಾರಣ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಮಹಿಳಾ ಮತ್ತು ಕೃಷಿ ಗೋಷ್ಠಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಇದೇ ವೇಳೆ ಸಮಥಾ ಯೋಗಿ ಸಿದ್ದರಾಮ ಕೃತಿಯನ್ನು ಸಚಿವ ಎಂ.ಬಿ.ಪಾಟೀಲ್ ಹಾಗೂ ಸಿದ್ದರಾಮ ಸಂಸ್ಕೃತ ಕೃತಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಿಡುಗಡೆ ಮಾಡಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರೋಪ ನುಡಿಗಳನ್ನು ನುಡಿಯಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನೊಳಂಬರ ಗಥಾ ಕಥನಾ ಕೃತಿ ಬಿಡುಗಡೆ ಮಾಡುವರು. ಮಾಜಿ ಸಚಿವ ಹೆಚ್.ಆಂಜನೇಯ ಸಿದ್ದರಾಮರ ವಚನಗಳ ಧ್ವನಿಮುದ್ರಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಯಂತಿ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಸಿ.ಶಶಿಧರ್, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಕುಭೇರಪ್ಪ, ಉಪಾಧ್ಯಕ್ಷ ರಮೇಶಪ್ಪ, ಈಶ್ವರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Views: 23