
ದಾವಣಗೆರೆ : ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದಿ, ಇಡೀ ದೇಶವೇ ಈ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದೆ. ಅಯೋಧ್ಯೆ ಮಾತ್ರವಲ್ಲ, ಭಾರತ ದೇಶವೇ ಹಬ್ಬದಂತೆ ಸಂಭ್ರಮಿಸಲು ಸಜ್ಜಾಗಿದೆ. ಶ್ರೀರಾಮಚಂದ್ರನ ಆರಾಧನೆಗೆ ಎಲ್ಲೆಡೆ ಸಿದ್ಧತೆಗಳು ಜೋರಾಗಿವೆ.
ಶ್ರೀರಾಮ ಭೇಟಿ ನೀಡಿದ ತಾಣಗಳಿಗೂ ಭಕ್ತರು ಭೇಟಿ ನೀಡುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಲ್ಲಿಯೂ ಸೀತಾಮಾತೆಯ ಜೊತೆಗೆ ವನವಾಸಕ್ಕೆ ತೆರಳಿದಾಗ ಶ್ರೀರಾಮ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಆದ್ರೆ ಈ ತಾಣ ಮಾತ್ರ ತುಂಬಾನೇ ವಿಶೇಷ. ಅಂದ ಹಾಗೆ ಈ ತಾಣ ಇರುವುದು ದಾವಣಗೆರೆ ಜಿಲ್ಲೆಯ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ. ಈ ಪವಿತ್ರ ಸ್ಥಳದ ಹೆಸರು ತೀರ್ಥ ರಾಮೇಶ್ವರ. ತುಂಬಾನೇ ಪ್ರಸಿದ್ಧಿ ಪಡೆದಿರುವ ಈ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಿದೆ. ಶ್ರದ್ಧಾಭಕ್ತಿಯ ಪವಿತ್ರ ತಾಣ. ಎಂತಹ ಬೇಸಿಗೆ ಇದ್ದರೂ ಸಹ ಇಲ್ಲಿ ನೀರು ಬರುವುದು ನಿಲ್ಲುವುದಿಲ್ಲ. ಸರ್ವಋತು ಕಾಲದಲ್ಲಿಯೂ ಬರುತ್ತಲೇ ಇರುತ್ತದೆ. ಅಂದ ಹಾಗೆ, ಈ ಚಮತ್ಕಾರಿ ನೀರು ಬರೋದು ಎಲ್ಲಿಂದ ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಕಾಶಿಯಿಂದ ಇಲ್ಲಿಗೆ ನೀರು ಹರಿದು ಬರುತ್ತದೆ ಎಂಬ ನಂಬಿಕೆ ನೂರಾರು ವರ್ಷಗಳಿಂದಲೂ ಇದೆ. ಶ್ರೀರಾಮ ಮತ್ತು ಸೀತಾ ಮಾತೆ ಇಲ್ಲಿಗೆ ವನವಾಸಕ್ಕೆ ಬಂದಿದ್ದಾಗ ಇಲ್ಲಿ ದೇಗುಲ ನಿರ್ಮಾಣವಾಯ್ತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಅಂದಿನಿಂದ ಇಂದಿನವರೆಗೆ ಇಲ್ಲಿ ನೀರು ಬರುತ್ತಿದೆ ಎಂಬ ಪ್ರತೀತಿಯೂ ಇದೆ. ಜೊತೆಗೆ ನೀರು ಸಿಂಪಡನಣೆ ಮಾಡಿಕೊಂಡು, ಚತುರ್ಮುಖ ಬ್ರಹ್ಮದೇವರಿಗೆ ಹರಕೆ ಹೊತ್ತರೆ ಇಷ್ಟಾರ್ಥ ಸಿದ್ದಿಸುತ್ತದೆ. ರೋಗ ರುಜಿನಗಳು, ಎಂಥಹ ಸಮಸ್ಯೆಯಿದ್ದರೂ ಪರಿಹಾರ ಆಗುತ್ತವೆ ಎಂಬ ನಂಬಿಕೆಯೂ ಇದೆ. ಎತ್ತ ನೋಡಿದರೂ ಹಚ್ಚ ಹಸಿರು. ಸೌಂದರ್ಯ ಸಿರಿ ಮೈಯೊದ್ದುಕೊಂಡಿರುವ ಪ್ರದೇಶ. ಮನಸ್ಸಿಗೆ ಮುದ ನೀಡುವ ಬೆಟ್ಟದ ಮೇಲಿನ ತಾಣ.. ಹೊಂಡದಲ್ಲಿ ಸುರಿಯುತ್ತಿರುವ ನೀರು. ಇದೆಲ್ಲಾ ಹೊಂದಿರುವ ಅದ್ಭುತ ದೇವಸ್ಥಾನ ಇಲ್ಲಿದೆ. ತೀರ್ಥ ರಾಮೇಶ್ವರ ಪುಣ್ಯ ಕ್ಷೇತ್ರ. ಈ ತಾಣವಿರೋದು ದಾವಣಗೆರೆ ಜಿಲ್ಲೆಯ ಬೆಳಗುತ್ತಿ ಗ್ರಾಮದಲ್ಲಿ. ಈ ತಾಣಕ್ಕೆ ತೀರ್ಥ ರಾಮೇಶ್ವರ ಎಂಬ ಹೆಸರು ಬಂದಿದ್ದು ಯಾಕೆ ಎಂಬುದೇ ಕುತೂಹಲಕಾರಿ. ಕಾಶಿಯಿಂದ ನೀರು ಬರುವಂತೆ ಮಾಡಿದ ಶ್ರೀರಾಮ: ಶ್ರೀರಾಮಚಂದ್ರ ಮತ್ತು ಸೀತಾಮಾತೆ ನೂರಾರು ವರ್ಷಗಳ ಹಿಂದೆ ವನವಾಸದಲ್ಲಿದ್ದಾಗ ಈ ತಾಣಕ್ಕೆ ಬಂದಿದ್ದರಂತೆ. ಆಗ ಸೀತಾಮಾತೆಗೆ ಬಾಯಾರಿಕೆ ಆಗಿದೆ. ಶ್ರೀರಾಮನಿಗೆ ಸೀತೆ ಕಾಶಿಯಿಂದ ನೀರು ಬರುವಂತೆ ಮಾಡಿ ಎಂದು ಪ್ರಾರ್ಥಿಸಿಕೊಂಡಳಂತೆ. ಆಗ ರಾಮ ತನ್ನ ಬಾಣ ಬಿಟ್ಟು ದಿವ್ಯಶಕ್ತಿಯಿಂದ ಕಾಶಿಯಿಂದ ಇಲ್ಲಿ ನೀರು ಬರುವಂತೆ ಮಾಡಿದನಂತೆ. ಬಳಿಕ ನೀರು ಕುಡಿದು ದಾಹ ತೀರಿಸಿಕೊಂಡ ಸೀತೆ ಸ್ನಾನ ಮಾಡಿದ ಬಳಿಕ ಇಲ್ಲಿ ಪೂಜಿಸಲು ದೇವರ ಮೂರ್ತಿ ಬೇಕೆಂದು ಭಿನ್ನವಿಸಿಕೊಂಡಳಂತೆ. ಆಗ ಲಿಂಗ ಉದ್ಭವಿಸುವಂತೆ ಮಾಡಿದ ಶ್ರೀರಾಮ ಇಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ದೇವರಿದ್ದ ಚತುರ್ಮುಖ ಬ್ರಹ್ಮ ದೇವರ ಮೂರ್ತಿ ಪ್ರತಿಷ್ಠಾಪಿಸಿದನಂತೆ. ಅಂದಿನಿಂದ ಇಂದಿನವರೆಗೆ ಇಲ್ಲಿ ಪೂಜಿಸಿಕೊಂಡು ಬರಲಾಗುತ್ತಿದೆ. ತೀರ್ಥರಾಮೇಶ್ವರ ಹೆಸರು ಬಂದಿದ್ಯಾಕೆ?: ತೀರ್ಥವನ್ನು ರಾಮನು ಇಲ್ಲಿ ಬರುವಂತೆ ಮಾಡಿದ್ದರಿಂದ, ಲಿಂಗ ಪ್ರತಿಷ್ಠಾಪನೆ ಮಾಡಿದ್ದರಿಂದ ಈ ಕ್ಷೇತ್ರಕ್ಕೆ ತೀರ್ಥ ರಾಮೇಶ್ವರ ಹೆಸರು ಬಂದಿದೆ ಅಂತಾರೆ ದೇಗುಲದ ಅರ್ಚಕರು. ಕಾಶಿಯಿಂದ ಇಲ್ಲಿಗೆ ನೀರು ಬರುತ್ತಿದೆ ಎಂಬುದಕ್ಕೆ ಇದು ಒಂದು ಐತಿಹಾಸಿಕ ಪುರಾಣ ಕಥೆಯಾದರೆ ಮತ್ತೊಂದು ಕಥೆಯೂ ಚಾಲ್ತಿಯಲ್ಲಿದೆ. ಕಾಶಿ ನದಿಯಲ್ಲಿ ಸ್ವಾಮೀಜಿಯೊಬ್ಬರು ಸ್ನಾನ ಮಾಡುವಾಗ ಅವರ ಬಳಿಯಿದ್ದ ಬೆಳ್ಳಿ ನಾಣ್ಯಗಳಿದ್ದ ಬೆತ್ತ ಕಾಣೆಯಾಗುತ್ತದೆ. ಎಷ್ಟೇ ಹುಡುಕಾಡಿದರೂ ಸಿಗೋದಿಲ್ಲ. ಹಾಗೆ ಹಳ್ಳಿ ಹಳ್ಳಿ, ಕಾಡು ಮೇಡು ಸುತ್ತುತ್ತಿದ್ದ ಸ್ವಾಮೀಜಿಗೆ ಈ ಕ್ಷೇತ್ರಕ್ಕೆ ಬಂದಾಗ ಬೆತ್ತ ಮತ್ತು ಬೆಳ್ಳಿ ನಾಣ್ಯ ಸಿಕ್ಕಿತಂತೆ. ಹಾಗಾಗಿ, ಕಾಶಿಯಿಂದ ಇಲ್ಲಿಗೆ ಬರುತ್ತದೆ ಎಂಬ ಮತ್ತೊಂದು ಕಥೆಯೂ ಇದೆ. ಇನ್ನು, ಈ ದೇಗುಲದ ಪಕ್ಕದಲ್ಲಿ ಇರುವ ಈ ಹೊಂಡಕ್ಕೆ ಕಾಶಿ ಗಂಗೆಯ ಹೊಂಡ ಅಂತಾ ಕರೆಯುತ್ತಾರೆ. ಇಲ್ಲಿನ ಸುರಂಗ ಮಾರ್ಗದಿಂದ ಕಾಶಿಯಿಂದ ನೀರು ಬರುತ್ತದೆ ಎಂಬ ನಂಬಿಕೆ ಈಗಲೂ ಚಾಲ್ತಿಯಲ್ಲಿದೆ. ಇಲ್ಲಿ ನೀರಿನ ಒರತೆ ಯಾವತ್ತಿಗೂ ಬತ್ತಿ ಹೋಗಿಲ್ಲ ಎಂಬುದೇ ಆಶ್ಚರ್ಯಕರ. ಇಲ್ಲಿನ ನೀರು ಸಿಂಪಡಿಸಿಕೊಂಡರೆ ರೋಗ ರುಜಿನಗಳು ವಾಸಿ ಆಗುತ್ತವೆ. ಚರ್ಮವ್ಯಾಧಿ ಬರೋದಿಲ್ಲ. ಕಷ್ಟಕಾರ್ಪಣ್ಯಗಳು ಹೋಗಿ ಪಾಪ ತೊಳೆದು ಹೋಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಇನ್ನು ಚತುರ್ಮುಖ ದೇವರಿಗೆ ಹರಕೆ ಹೊತ್ತುಕೊಂಡು ಇಷ್ಚಾರ್ಥ ಸಿದ್ದಿಸಿದ ಬಳಿಕ ಇಲ್ಲಿಗೆ ಬಂದು ನೀರು ಮೈಮೇಲೆ ಸುರಿದುಕೊಂಡು ಹೋಳಿಗೆ ಸೇರಿದಂತೆ ಇತರೆ ಖಾದ್ಯಗಳನ್ನು ಈ ಸನ್ನಿಧಿಗೆ ಬಂದು ತಯಾರಿಸಿ ಅನ್ನಸಂತರ್ಪಣೆ ಮಾಡಿ ಭಕ್ತರು ಹೋಗುತ್ತಾರೆ. ಕೇವಲ ಜಿಲ್ಲೆಯಿಂದ ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ, ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಭಕ್ತರು ಇಲ್ಲಿಗೆ ಬರುತ್ತಾರೆ. ಹಾಗಾಗಿ ಇಲ್ಲಿ ಬರುವ ಕಾಶಿಯಿಂದ ಗಂಗೆ ಬರುವುದಕ್ಕೆ, ಪವಾಡಗಳು ನಡೆಯುತ್ತಿರುವುದಕ್ಕೆ ಚಮತ್ಕಾರಿ ನೀರಿನ ತೀರ್ಥ ರಾಮೇಶ್ವರ ಅಂತಾನೇ ಈ ತಾಣ ಫೇಮಸ್. ದಾವಣೆಗೆರೆ ಜಿಲ್ಲೆಯಲ್ಲಿರುವ ತೀರ್ಥ ರಾಮೇಶ್ವರ ತಾಣ ಭಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕಾಶಿಯಿಂದ ಇಲ್ಲಿಗೆ ನೀರು ಬರುತ್ತಿದೆ ಎಂಬುದು ಶತಶತಮಾನಗಳಿಂದ ತಲೆ ಮಾರಿನಿಂದ ತಲೆಮಾರಿಗೆ ಬಂದಿದೆ. ಯಾರೂ ಪರೀಕ್ಷಿಸಲು ಹೋಗಿಲ್ಲ. ಎಂಥ ಬೇಸಿಗೆಯಾದರೂ ಇಲ್ಲಿ ಮಾತ್ರ ನೀರು ಬತ್ತಿಲ್ಲ. ಎಷ್ಟು ಬೇಕಾದರೂ ಈ ಗುಂಡಿಯಿಂದ ನೀರು ಬಗೆದರೂ ಬರುತ್ತಲೇ ಇರುತ್ತದೆ. ಗುಂಡಿಯಲ್ಲಿ ನೀರು ಖಾಲಿಯಾಗುವುದೇ ಇಲ್ಲ. ಈ ನೀರನ್ನು ಕುಡಿದರೆ ಮನಸ್ಸಿಗೆ ಆಹ್ಲಾದವಾಗುತ್ತೆ. ಅಷ್ಚರಮಟ್ಟಿಗೆ ಶುದ್ಧವಾಗಿದೆ. ಇಲ್ಲಿಗೆ ಬಂದು ನೀರು ಸೇವಿಸಿ ಹೋಗದೇ ಇರುವವರೇ ಇಲ್ಲ. ರೋಗ ರುಜಿನಗಳನ್ನು ವಾಸಿ ಮಾಡಿಕೊಂಡವರೇ ಹೆಚ್ಚು. ಚತುರ್ಮುಖ ಬ್ರಹ್ಮದೇವರು ಇಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ ಎನ್ನುವ ಅರ್ಚಕರು, ತೀರ್ಥ ರಾಮೇಶ್ವರ ತಾಣ ಭಕ್ತರ ಪಾಲಿನ ಆರಾಧ್ಯ ತಾಣ ಅಂತಾರೆ. ನೀವೂ ಬೇಕಾದರೆ ಒಮ್ಮೆ ಭೇಟಿ ನೀಡಿ, ಬಳಿಕ ಈ ತಾಣದ ಮಹಿಮೆ ಗೊತ್ತಾಗುತ್ತದೆ ಅಂತಾರೆ ಭಕ್ತರು. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂಭ್ರಮ ಎಲ್ಲೆಡೆ ಮೇಳೈಸಿದ್ದರೆ, ತೀರ್ಥರಾಮೇಶ್ವರ ದೇಗುಲದಲ್ಲಿಯೂ ವಿಶೇಷ ಆಚರಣೆಗೆ ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಶ್ರೀರಾಮ ಕಾಶಿಯಿಂದ ತಂದ ತೀರ್ಥ ಇಂದಿಗೂ ವರ್ಷಪೂರ್ತಿ ಇರುವುದು ಪವಾಡವೇ ಸರಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1