ಬಿರು ಬೇಸಿಗೆಯಲ್ಲಿ ಲ್ಯಾಪ್​ಟ್ಯಾಪ್​ ಕೂಲ್​ ಆಗಿಡುವುದು ಹೇಗೆ?: ಈ ಬೆಸ್ಟ್​ ಟಿಪ್ಸ್​ ನಿಮಗಾಗಿ!

How To Cool Down Laptop In Summer : ಈಗಾಗಲೇ ಬೇಸಿಗೆ ಆರಂಭವಾಗಿದೆ. ದಿನದಿಂದ ದಿನಕ್ಕೆ ಸೂರ್ಯ ಪ್ರತಾಪ ಹೆಚ್ಚುತ್ತಿದೆ. ತಾಪಮಾನವು ಸುಮಾರು 35 – 45 ಡಿಗ್ರಿ ಸೆಲ್ಸಿಯಸ್ ಡಿಗ್ರಿ ದಾಖಲಾಗುತ್ತಿದೆ. ಈ ಸಮಯದಲ್ಲಿ ನಮ್ಮ ಲ್ಯಾಪ್‌ಟಾಪ್‌ಗಳು ಬಿಸಿಯಾಗದಂತೆ ರಕ್ಷಿಸುವುದು ಹೇಗೆ ಎಂಬುದನ್ನ ಈ ಸುದ್ದಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಲ್ಯಾಪ್‌ಟಾಪ್‌ಗಳು ಸ್ವಾಭಾವಿಕವಾಗಿ ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತವೆ. ಏಕೆಂದರೆ ಲ್ಯಾಪ್‌ಟಾಪ್ ಕಾರ್ಯನಿರ್ವಹಿಸುತ್ತಿರುವಾಗ ಅದರ ಹಾರ್ಡ್‌ವೇರ್ ಯೂನಿಟ್ಸ್​ ಬಿಸಿಯಾಗುತ್ತವೆ. ಇದಲ್ಲದೇ ಬೇಸಿಗೆಯ ಬಿಸಿಲು ಅವುಗಳನ್ನು ಇನ್ನಷ್ಟು ಬಿಸಿಯಾಗಿಸುತ್ತದೆ. ಇದು ಲ್ಯಾಪ್‌ಟಾಪ್‌ಗೆ ಬೇಗನೆ ಹಾನಿಯನ್ನುಂಟುಮಾಡಬಹುದು. ಅದಕ್ಕಾಗಿಯೇ ನಾವು ನಮ್ಮ ಲ್ಯಾಪ್​ಟ್ಯಾಪ್​ಗಳನ್ನು ಕೂಲ್​ ಆಗಿಡಲು ಏನ್​ ಮಾಡ್ಬೇಕು ಎಂಬುದರ ಬಗ್ಗೆ ಈಗ ಮಾಹಿತಿ ಪಡೆಯೋಣ.

1. ಮಾನಿಟರ್: ನಿಮ್ಮ ಸಿಸ್ಟಮ್​ ಬಿಸಿಲಿನ ಝಳಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಇದಕ್ಕಾಗಿ ಮಾನಿಟರಿಂಗ್​ ಟೂಲ್ಸ್​ ಬಳಸಬಹುದು. ಬೇಸಿಗೆಯ ತಾಪಮಾನವು ನಿಮ್ಮ CPU, GPU ಮತ್ತು RAM ನ ಸ್ಪೀಡ್​ ಮತ್ತು ಪರ್ಫಾರ್ಮೆನ್ಸ್​ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ಪರಿಗಣಿಸಬೇಕು. ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಳಸುವವರಿಗೆ ಇದು ವಿಶೇಷವಾಗಿ ಮಾಡಲೇಬೇಕಾದ ವಿಷಯವಾಗಿದೆ. ವಿಂಡೋಸ್ ಸಿಸ್ಟಮ್‌ಗಳಲ್ಲಿ ಈ ರೀತಿಯ ಶಾಖವನ್ನು ಮೇಲ್ವಿಚಾರಣೆ ಮಾಡಲು ಯಾವುದೇ ಅಪ್ಲಿಕೇಶನ್‌ಗಳಿಲ್ಲ. ಆದರೆ MSI ಆಫ್ಟರ್‌ಬರ್ನರ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಿದ ನಂತರ ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗಿದೆಯೇ ಅಥವಾ ಅದು ಚೆನ್ನಾಗಿ ಕೆಲಸ ಮಾಡುತ್ತಿದೆಯೇ ಎಂದು ನೀವು ಕಂಡು ಹಿಡಿಯಬಹುದು.

2. ಲ್ಯಾಪ್‌ಟಾಪ್ ಅನ್ನು ಸರಿಯಾದ ಸ್ಥಳದಲ್ಲಿ ಇರಿಸಿ: ಮನೆಯಲ್ಲಿ ಅಥವಾ ನೆರಳಿನಲ್ಲಿ ಲ್ಯಾಪ್‌ಟಾಪ್ ಬಳಸುವುದು ದೊಡ್ಡ ಸಮಸ್ಯೆಯಾಗದಿರಬಹುದು. ಆದರೆ, ನೀವು ಇರುವ ಸ್ಥಳದಲ್ಲಿ ತಾಪಮಾನ ಸ್ವಲ್ಪ ಹೆಚ್ಚಿದ್ದರೆ , ತಂಪಾದ ಸ್ಥಳಕ್ಕೆ ಹೋಗುವುದು ಒಳ್ಳೆಯದು. ಇದು ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ. ಕೆಲವರು ಬಾಲ್ಕನಿಯಲ್ಲಿ ಕುಳಿತು ಬಿಸಿಲನ್ನು ಆನಂದಿಸುತ್ತಾ ಕೆಲಸ ಮಾಡುತ್ತಿರುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಲ್ಯಾಪ್‌ಟಾಪ್ ಡಿಸ್​ಪ್ಲೇಗಳು ಬಹಳ ಸೂಕ್ಷ್ಮವಾಗಿರುತ್ತವೆ. ಇವುಗಳನ್ನು ನೇರ ಸೂರ್ಯನ ಬೆಳಕಿಗೆ ಒಡ್ಡಿದರೆ ಹಾಳಾಗುವ ಅಪಾಯವಿದೆ. ಆದ್ದರಿಂದ ಸಾಧ್ಯವಾದಷ್ಟು ಬಿಸಿಲಿನಲ್ಲಿ ನಿಮ್ಮ ಲ್ಯಾಪ್‌ಟಾಪ್ ಬಳಸುವುದನ್ನು ತಪ್ಪಿಸುವುದು ಉತ್ತಮ.

3. ಚಾರ್ಜಿಂಗ್ ಸಮಸ್ಯೆಗಳು: ಅನೇಕ ಜನರು ತಮ್ಮ ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡುತ್ತಾರೆ ಮತ್ತು ಅವುಗಳನ್ನು ಹಾಗೆಯೇ ಬಿಡುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಬ್ಯಾಟರಿಯನ್ನು ಚಾರ್ಜ್ ಮಾಡುವಾಗ ಅದು ಬಹಳಷ್ಟು ಶಾಖವನ್ನು ಉತ್ಪಾದಿಸುತ್ತದೆ. ಆದ್ದರಿಂದ ಚಾರ್ಜಿಂಗ್ ಶೇ.100 ರಷ್ಟು ಪೂರ್ಣಗೊಂಡ ನಂತರ, ಅದನ್ನು ಬಂದ್​ ಮಾಡಬೇಕು. ನೀವು ಹಾಗೆ ಮಾಡದಿದ್ದರೆ ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗುತ್ತದೆ. ಇದಲ್ಲದೆ, ಬ್ಯಾಟರಿ ಬಾಳಿಕೆಯೂ ಕಡಿಮೆಯಾಗುತ್ತದೆ.

4. ಲ್ಯಾಪ್‌ಟಾಪ್ ಕೂಲರ್ ಅಥವಾ ಫ್ಯಾನ್ ಬಳಸಿ: ಲ್ಯಾಪ್‌ಟಾಪ್‌ನಲ್ಲಿರುವ CPU ಮತ್ತು ಗ್ರಾಫಿಕ್ಸ್ ಕಾರ್ಡ್ ಅನ್ನು ತಂಪಾಗಿಡಬೇಕು. ಇದಕ್ಕಾಗಿ ಲ್ಯಾಪ್‌ಟಾಪ್ ಸ್ವತಃ ಕೂಲರ್ ಅಥವಾ ಫ್ಯಾನ್ ಅನ್ನು ಹೊಂದಿದೆ. ಇವು ಸರಿಯಾಗಿ ಕೆಲಸ ಮಾಡದಿದ್ದರೆ ಅವುಗಳನ್ನು ಸರಿಯಾದ ಲ್ಯಾಪ್‌ಟಾಪ್ ಕೂಲರ್ ಅಥವಾ ಫ್ಯಾನ್‌ನೊಂದಿಗೆ ಬದಲಾಯಿಸಬೇಕು.

5. ಲ್ಯಾಪ್‌ಟಾಪ್ ಸ್ಟ್ಯಾಂಡ್ ಬಳಸಿ: ಲ್ಯಾಪ್‌ಟಾಪ್‌ಗಳು ಚೆನ್ನಾಗಿ ಗಾಳಿ ಬೀಸುವಂತಿರಬೇಕು. ಇದಕ್ಕಾಗಿ ಲ್ಯಾಪ್‌ಟಾಪ್ ಸ್ಟ್ಯಾಂಡ್‌ಗಳನ್ನು ಬಳಸಬಹುದು. ಇದು ಲ್ಯಾಪ್‌ಟಾಪ್ ಅಡಿ ಗಾಳಿಯು ಮುಕ್ತವಾಗಿ ಹರಿಯಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಅದು ಬಿಸಿಯಾಗುವುದಿಲ್ಲ.

6. ಟೇಬಲ್ ಫ್ಯಾನ್/ಎಸಿ ಬಳಸಿ: ಲ್ಯಾಪ್‌ಟಾಪ್‌ಗಳು ಹೆಚ್ಚು ಬಿಸಿಯಾಗದಂತೆ ತಡೆಯಲು ನೀವು ಕೆಲಸ ಮಾಡುವ ಸ್ಥಳದಲ್ಲಿ ಟೇಬಲ್ ಫ್ಯಾನ್ ಇರಿಸಿ. ನಿಮಗೆ ಸಾಧ್ಯವಾದರೆ ನೀವು AC ಅಳವಡಿಸಬಹುದು.

7. ನಿಯಮಿತವಾಗಿ ಸ್ವಚ್ಛಗೊಳಿಸಿ: ಲ್ಯಾಪ್‌ಟಾಪ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ, ಡಸ್ಟ್​ ಸೇರಿದಂತೆ ಇತರೆ ವಸ್ತುಗಳು ಫ್ಯಾನ್‌ಗಳಿಗೆ ಸೇರುತ್ತದೆ. ಇದು ಲ್ಯಾಪ್‌ಟಾಪ್ ಅತಿಯಾಗಿ ಬಿಸಿಯಾಗಲು ಕಾರಣವಾಗಬಹುದು. ಆದ್ದರಿಂದ ನೀವು ನಿಮ್ಮ ಸಾಧನವನ್ನು ಉತ್ತಮ ಮೈಕ್ರೋಫೈಬರ್ ಬಟ್ಟೆಯಿಂದ ಸ್ವಚ್ಛಗೊಳಿಸಬೇಕು. ಅಗತ್ಯವಿದ್ದರೆ ಅದನ್ನು ವೃತ್ತಿಪರ ಸೇವೆಗೂ ನೀಡಬೇಕು.

8. ಪವರ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ: ಲ್ಯಾಪ್‌ಟಾಪ್ ಓಪನ್​ ಮಾಡಿ ವಿಂಡೋಸ್ ಕಂಟ್ರೋಲ್​ ಪ್ಯಾನೆಲ್​ ಹೋಗಿ. ಪವರ್ ಆಯ್ಕೆಗಳಲ್ಲಿ ‘ಪವರ್-ಸೇವಿಂಗ್ ಪ್ಲಾನ್’ ಆಯ್ಕೆಮಾಡಿ. ಅಥವಾ ಕಸ್ಟಮ್ ಯೋಜನೆಯನ್ನು ರಚಿಸಿ. ಮುಂದೆ ನೀವು ಪ್ರೊಸೆಸರ್ ಪವರ್​ ಮ್ಯಾನೇಜ್​ ಮತ್ತು ಡಿಸ್​ಪ್ಲೇ ಬ್ರೈಟ್​ನೆಸ್​ ಅಡ್ಜೆಸ್ಟ್​ ಮಾಡಬೇಕು. ಇದು ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ.

9. ಸಾಫ್ಟ್‌ವೇರ್ ಅನ್ನು ಅಪ್​ಡೇಟ್​ ಮಾಡಬೇಕು: ನಿಮ್ಮ ಲ್ಯಾಪ್‌ಟಾಪ್‌ನಲ್ಲಿರುವ ಸಾಫ್ಟ್‌ವೇರ್ ಮತ್ತು ಡ್ರೈವರ್‌ಗಳನ್ನು ನಿಯಮಿತವಾಗಿ ಅಪ್​ಡೇಟ್​ ಮಾಡುತ್ತಲೇ ಇರಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ವಿಂಡೋಸ್ ಅಪ್​ಡೇಟ್ಸ್​, ಗ್ರಾಫಿಕ್ಸ್ ಕಾರ್ಡ್ ಡ್ರೈವರ್ಸ್​, ಹಾರ್ಡ್‌ವೇರ್ ಡ್ರೈವರ್ಸ್​ ಮತ್ತು ಅಪ್ಲಿಕೇಶನ್ಸ್​ ಅಪ್​ಡೇಟ್​ ಮಾಡಬೇಕು. ಆಗ ಮಾತ್ರ ಲ್ಯಾಪ್‌ಟಾಪ್ ಸರಿಯಾಗಿ ಕೆಲಸ ಮಾಡುತ್ತದೆ.

10. ಸರ್ವೀಸಿಂಗ್​ ಮಾಡಿಸಬೇಕು: ಮೇಲಿನ ಎಲ್ಲವನ್ನೂ ಮಾಡಿದರೂ ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ, ನೀವು ಖಂಡಿತವಾಗಿಯೂ ವೃತ್ತಿಪರರಿಂದ ನಿಮ್​ ಲ್ಯಾಪ್​ಟ್ಯಾಪ್​ ಅನ್ನು ಸರ್ವೀಸ್​ ಮಾಡಿಸಬೇಕು. ಅವು ನಿಮ್ಮ ಲ್ಯಾಪ್‌ಟಾಪ್‌ನ ಇಂಟರ್ನಲ್​ ಯುನಿಟ್​ಗಳನ್ನು ಸ್ವಚ್ಛಗೊಳಿಸುತ್ತವೆ. ಅಗತ್ಯವಿದ್ದರೆ ನಿಮ್ಮ CPU ಮತ್ತು GPU ಮೇಲಿನ ಥರ್ಮಲ್ ಪೇಸ್ಟ್ ಅನ್ನು ಬದಲಾಯಿಸಿ. ಕೂಲಿಂಗ್ ಫ್ಯಾನ್ ಅನ್ನು ಸಹ ಪರಿಶೀಲಿಸಲಾಗುತ್ತದೆ. ಹಾರ್ಡ್‌ವೇರ್ ಸಮಸ್ಯೆಗಳಿದ್ದರೆ ಅವುಗಳನ್ನು ಬದಲಾಯಿಸಲಾಗುತ್ತದೆ. ಈ ರೀತಿಯಾಗಿ ನೀವು ಬೇಸಿಗೆಯಲ್ಲಿ ನಿಮ್ಮ ಲ್ಯಾಪ್‌ಟಾಪ್ ಅನ್ನು ಹೆಚ್ಚು ಬಿಸಿಯಾಗದಂತೆ ರಕ್ಷಿಸಬಹುದು.

ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯು ಕೇವಲ ನಿಮ್ಮ ಮಾಹಿತಿಗಾಗಿ ಮಾತ್ರ. ನಿಮ್ಮಲ್ಲಿ ತಾಂತ್ರಿಕ ಜ್ಞಾನವಿಲ್ಲದಿದ್ದರೆ ವೃತ್ತಿಪರರ ಸಹಾಯ ಪಡೆಯುವುದು ಉತ್ತಮ.

Source : https://www.etvbharat.com/kn/!technology/ways-to-cool-down-your-laptop-in-the-summer-heat-details-in-kannada-kas25030805296

Leave a Reply

Your email address will not be published. Required fields are marked *