ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಶಿಬಿರಕ್ಕೆ ಹುಬ್ಬಳ್ಳಿ ವಿದ್ಯಾರ್ಥಿನಿ ಆಯ್ಕೆ.

ASEAN ASTRONOMY CAMP : ಥಾಯ್ಲೆಂಡ್​​​ನ ಚಿಯಾಂಗ್ ಮಾಯ್‌ ಎಂಬಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಶಿಬಿರಕ್ಕೆ ಹುಬ್ಬಳ್ಳಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಕೃಷಿ ಮೆಣಸಿನಕಾಯಿ ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿ: ಇಲ್ಲಿನ ಕೇಂದ್ರೀಯ ವಿದ್ಯಾಲಯ ನಂ.1ರ ಹತ್ತನೆಯ ತರಗತಿ ವಿದ್ಯಾರ್ಥಿನಿ ಕೃಷಿ ಸಂಗಮೇಶ ಮೆಣಸಿನಕಾಯಿ ಮಾ.11 ರಿಂದ 14ರವರೆಗೆ ಥಾಯ್ಲೆಂಡ್​​​​​ನ ಚಿಯಾಂಗ್ ಮಾಯ್ ಪ್ರಾಂತ್ಯದಲ್ಲಿ ನಡೆಯಲಿರುವ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ ಅಸ್ಟ್ರೊನೊಮಿ ಕ್ಯಾಂಪ್‌ಗೆ (ASEAN Astronomy Camp) ಆಯ್ಕೆಯಾಗಿದ್ದಾರೆ.

ನ್ಯಾಷನಲ್ ಅಸ್ಟ್ರೊನೊಮಿ ರೀಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಥಾಯ್ಲೆಂಡ್​​ (NARIT ನರಿಟ್) ಹಾಗೂ ಯುನೆಸ್ಕೋದ ಅಂತಾರಾಷ್ಟ್ರೀಯ ಖಗೋಳ ತರಬೇತಿ ಕೇಂದ್ರಗಳು (International Training Center in Astronomy under UNESCO – ITCA) ಜಂಟಿಯಾಗಿ ಈ ಶಿಬಿರವನ್ನು ನಡೆಸುತ್ತಿವೆ. ಈ ಶಿಬಿರವು 15 ರಿಂದ 19 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದ್ದು, ಇದಕ್ಕೆ ವಿಶ್ವದ ನಾನಾ ದೇಶಗಳ 316 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಕೇವಲ 30 ವಿದ್ಯಾರ್ಥಿಗಳನ್ನು, ಅವರು ಬರೆದಿರುವ ಖಗೋಳಶಾಸ್ತ್ರದ ನಿಬಂಧದ ಆಧಾರ ಮೇಲೆ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಎಎಸಿ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದಿಂದ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದು, ಅದರಲ್ಲಿ ಕೃಷಿ ಒಬ್ಬಳಾಗಿದ್ದಾರೆ.

ಖಗೋಳಶಾಸ್ತ್ರದ ಮೇಲಿನ ಆಸಕ್ತಿಗೆ ಇಸ್ರೋ ವಿಜ್ಞಾನಿಗಳ ಪ್ರೇರಣೆ: ಈ ಆಯ್ಕೆಗೆ ಕೇಂದ್ರೀಯ ವಿದ್ಯಾಲಯ ನಂ.1ರ ಶಿಕ್ಷಕರು ಏಪ್ರಿಲ್ 2024ರಲ್ಲಿ PM SHRI (PM Schools for Rising India) ಅನುದಾನದಲ್ಲಿ ಬೆಂಗಳೂರಿನ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಗೆ (ISRO) ವಿಜ್ಞಾನ ಪ್ರವಾಸ ಕರೆದೊಯ್ದಿದ್ದರು. ಆ ಸಂದರ್ಭದಲ್ಲಿ ಇಸ್ರೋದ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ್ದೆವು. ಅದೇ ವೇಳೆ, ವಿಜ್ಞಾನಿಗಳಾದ ಪಿ. ವೀರಮುತುವೆಲ್, ನಿಗಾರ್ ಶಾಜಿ, ಪ್ರಶಾಂತ ಬಾಗಲಕೋಟೆ ಹಾಗೂ ಇತರರ ಜೊತೆ ಸಣ್ಣ ಸಂವಾದ ನಡೆಸಿದ್ದೆ. ಅವರ ಮಾತುಗಳಿಂದ ಅಂತರಿಕ್ಷ ಮತ್ತು ಖಗೋಳಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಉಂಟಾಯಿತು, ಈ ಶಿಬಿರದ ಆಯ್ಕೆ ನನ್ನ ಶಾಲೆ, ಪಿಎಂ ಶ್ರೀ ಅನುದಾನ, ಇಸ್ರೋ ಹಾಗೂ ಅಲ್ಲಿನ ವಿಜ್ಞಾನಿಗಳ ಪ್ರೇರಣೆಯೇ ಕಾರಣ ಎಂದು ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಶಿಬಿರಕ್ಕೆ ಆಯ್ಕೆಯಾದ ಕೃಷಿ ತಿಳಿಸಿದರು.

ಚಿಯಾಂಗ್ ಮಾಯ್‌ ಪ್ರಾಂತ್ಯದ ಮೇರಿಮ್ ಜಿಲ್ಲೆಯ ಪ್ರಿನ್ಸೆಸ್ ಸಿರಿಂಧೋರ್ನ್ ಆಸ್ಟ್ರೊಪಾರ್ಕ್ ಮತ್ತು ಚೊಮ್ ಥಾಂಗ್ ಜಿಲ್ಲೆಯ ಅಸ್ಟ್ರೊನೊಮಿ ಇನ್‌ಫಾರ್ಮೇಶನ್ ಅಂಡ್ ಟ್ರೇನಿಂಗ್ ಸೆಂಟರ್‌ ಹಾಗೂ ಡೊಯ್ ಇಂಥನಾನ್ ನ್ಯಾಷನಲ್ ಪಾರ್ಕ್‌ನಲ್ಲಿ ನಡೆಯುವ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಅಲ್ಲಿನ ಪ್ರಯೋಗಾಲಯಗಳಿಗೆ ಭೇಟಿ ನೀಡಿ, 40 ಮೀಟರ್ ಉದ್ದದ ಥಾಯ್ ನ್ಯಾಷನಲ್ ರೇಡಿಯೊ ಟೆಲಿಸ್ಕೋಪ್ ಮತ್ತು 2.4 ಮೀಟರ್ ಉದ್ದದ ಥಾಯ್ ನ್ಯಾಷನಲ್ ಟೆಲಿಸ್ಕೋಪ್​​ ವೀಕ್ಷಿಸಲಿದ್ದಾರೆ, ಥಾಯ್ಲೆಂಡ್​​​ನ ಅತಿ ಎತ್ತರದ ಶಿಖರದಲ್ಲಿ ನಕ್ಷತ್ರ ವೀಕ್ಷಣೆಯಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನರಿಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸರನ್ ಪೊಷ್ಯಾಚಿಂದ ಅವರು ಕೃಷಿಗೆ ಬರೆದಿರುವ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಕೃಷಿ ಇದೇ ಶೈಕ್ಷಣಿಕ ವರ್ಷದಲ್ಲಿ ಕೇರಳದ ಎರ್ನಾಕುಲಂನಲ್ಲಿ ನಡೆದ ಕೇಂದ್ರೀಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 3000 ಮೀ. ಮತ್ತು1.500 ಮೀಟರ್ ಓಟಗಳಲ್ಲಿಯೂ ಬೆಂಗಳೂರು ಪ್ರಾದೇಶಿಕ ವಿಭಾಗವನ್ನು ಪ್ರತಿನಿಧಿಸಿ, ಸಮಾಧಾನಕರ ಬಹುಮಾನ ಪಡೆದಿರುವುದು ವಿಶೇಷ.

Source : https://www.etvbharat.com/kn/!state/hubballi-student-krushi-menasinakai-selected-for-prestigious-asean-astronomy-camp-karnataka-news-kas25030503786

Leave a Reply

Your email address will not be published. Required fields are marked *