ಶ್ರೀಲಂಕಾ ವಿರುದ್ದ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ! 

ನ್ಯೂಯಾರ್ಕ್: ಐಸಿಸಿ ಪುರುಷರ T20 ವಿಶ್ವಕಪ್ 2024 ರ 4ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್​ಗಳಿಂದ ಶ್ರೀಲಂಕಾ ತಂಡವನ್ನು ಬಗ್ಗುಬಡಿದು ಶುಭಾರಂಭ ಮಾಡಿದೆ. ಡಿ ಗುಂಪಿನ ಈ ಪಂದ್ಯ ನ್ಯೂಯಾರ್ಕ್ ನಾಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕೇವಲ 77ಕ್ಕೆ ಆಲೌಟ್ ಆಗಿತ್ತು. ಈ ಮೊತ್ತವನ್ನು ದಕ್ಷಿಣ ಆಫ್ರಿಕಾ 16.2 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು.

78ರನ್​ಗಳ ಸುಲಭ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕೇವಲ 10 ರನ್​ಗಳಿಸುವಷ್ಟರಲ್ಲಿ ಅರಂಬಿಕ ರೀಜಾ ಹೆಂಡ್ರಿಕ್ಸ್ (4) ವಿಕೆಟ್ ಕಳೆದುಕೊಂಡಿತು. ನಂತರ ಬಂದ ಐಡೆನ್ ಮ್ಯಾರ್ಕ್ರಮ್​ 13 ರನ್​ಗಳಿಸಿ ಲಂಕಾ ನಾಯಕ ಹಸರಂಗಾಗೆ ವಿಕೆಟ್​ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ನಂತರದ ಓವರ್​ನಲ್ಲೇ ಹಸರಂಗಾ ಸ್ಫೋಟಕ ಬ್ಯಾಟರ್ ತ್ರಿಸ್ಟಾನ್ ಸ್ಟಬ್ಸ್​ರನ್ನ(13) ಕೂಡ ಪೆವಿಲಿಯನ್​ಗಟ್ಟಿದರು. ಆದರೆ ಹೆನ್ರಿಚ್ ಕ್ಲಾಸೆನ್ (ಅಜೇಯ 19) ಹಾಗೂ ಡೇವಿಡ್ ಮಿಲ್ಲರ್(ಅಜೇಯ 6) 5ನೇ ವಿಕೆಟ್​ಗೆ ಮುರಿಯದ 22 ರನ್​ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಐಪಿಎಲ್ ಫ್ಲಾಪ್​ ಬೌಲರ್​ ದಾಳಿಗೆ ಲಂಕಾ ತತ್ತರ

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಐಪಿಎಲ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದ ಎನ್ರಿಚ್ ನೋಕಿಯಾ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 77ಕ್ಕೆ ಆಲೌಟ್ ಆಯಿತು. ನೋಕಿಯಾ 4 ಓವರ್​ಗಳಲ್ಲಿ ಕೇವಲ 7 ರನ್​ ನೀಡಿ 4 ವಿಕೆಟ್ ಉಡಾಯಿಸಿದರು. ಇವರಿಗೆ ಸಾಥ್ ನೀಡಿದ ಕೇಶವ್ ಮಹಾರಾಜ್ 22ಕ್ಕೆ 2, ಕಗಿಸೋ ರಬಾಡ 21ಕ್ಕೆ 2 ಹಾಗೂ ಬಾರ್ಟ್ಮನ್ 4 ಓವರ್​ಗಳಲ್ಲಿ ಕೇವಲ 9ರನ್​ ನೀಡಿ 1 ವಿಕೆಟ್ ಪಡೆದರು.

ಲಂಕಾ ಪರ 19 ಗರಿಷ್ಠ ಸ್ಕೋರ್

ಆರಂಭದಿಂದಲೂ ರನ್​ಗಳಿಸಲು ಪರದಾಡಿದ ಶ್ರೀಲಂಕಾ ತಂಡ 20 ಓವರ್​ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.   30 ಎಸೆತಗಳಲ್ಲಿ 19 ರನ್​ಗಳಿಸಿದ ಕುಸಾಲ್ ಮೆಂಡಿಸ್​, 16 ಎಸೆತಗಳಲ್ಲಿ 16 ರನ್​ಗಳಿಸಿದ ಮ್ಯಾಥ್ಯೂಸ್,  ಹಾಗೂ 11 ರನ್​ಗಳಿಸಿದ ಕುಮಿಂಡು ಮೆಂಡಿಸ್ ಸಿಂಹಳೀಯರ ಪರ ಎರಡಂಕಿ ದಾಟಿದ ಬ್ಯಾಟರ್​ಗಳೆನಿಸಿಕೊಂಡರು ನಾಯಕ ವನಿಂದು ಹಸರಂಗ, ಸದೀರಾ ಸಮರವಿಕ್ರಮ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಪಾತುಮ್ ನಿಸ್ಸಾಂಕ(3), ಚರಿತ್ ಅಸಲಂಕಾ (6), ದಾಸುನ್ ಶನಾಕ (9), ತೀಕ್ಷಾಣ 7 ರನ್​ಗಳಿಸಿದರು.

ಟಿ20 ಕ್ರಿಕೆಟ್​ನ ಕನಿಷ್ಠ ಮೊತ್ತ ದಾಖಲಿಸಿದ ಶ್ರೀಲಂಕಾ

ತನ್ನ ಮೊದಲ ಲೀಗ್ ಪಂದ್ಯದಲ್ಲಿ ಕೇವಲ 77 ರನ್​ಗಳಿಗೆ ಆಲೌಟ್ ಆಗುವ ಮೂಲಕ ಶ್ರೀಲಂಕಾ ಟಿ20 ವಿಶ್ವಕಪ್​ ಇತಿಹಾಸದಲ್ಲಿ ತನ್ನ ಕನಿಷ್ಠ ಮೊತ್ತ ದಾಖಲಿಸಿತು. 2012 ರ ಚಾಂಪಿಯನ್ ಆಗಿರುವ ಶ್ರೀಲಂಕಾ ತಂಡ 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 87ಕ್ಕೆ ಆಲೌಟ್ ಆಗಿದ್ದದ್ದು, ಈವರೆಗಿನ ಕನಿಷ್ಠ ಮೊತ್ತವಾಗಿತ್ತು.

Source : https://kannada.news18.com/news/sports/icc-t20-world-cup-2024-live-south-africa-beat-sri-lanka-by-6-wickets-mbr-1726230.html

 

Leave a Reply

Your email address will not be published. Required fields are marked *