ಅಕ್ರಮ ಅಸ್ತಿ ಕೇಸ್: ಸಿಬಿಐ, ಯತ್ನಾಳ್ ಅರ್ಜಿ ವಜಾ, ಡಿಕೆ ಶಿವಕುಮಾರ್​​ಗೆ ಬಿಗ್ ರಿಲೀಫ್.

ಬೆಂಗಳೂರು, (ಆಗಸ್ಟ್ 29): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ರಾಜ್ಯ ಸರ್ಕಾರ, ಸಿಬಿಐ ನಡುವಿನ ವಿವಾದವಾಗಿದೆ. ಹೀಗಾಗಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ಸೂಕ್ತ. ಸರ್ಕಾರ, ಸಿಬಿಐ ನಡುವಿನ ವಿವಾದ ಸುಪ್ರೀಂಕೋರ್ಟ್ ತೀರ್ಮಾನಿಸಬೇಕು. ಹೈಕೋರ್ಟ್ ತೀರ್ಮಾನಿಸುವುದು ಸೂಕ್ತವಲ್ಲವೆಂದು ನ್ಯಾಯಮೂರ್ತಿ . ಕೆ.ಸೋಮಶೇಖರ್, ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರ ಪೀಠ ತೀರ್ಪು ನೀಡಿದೆ.  ಇದರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್‌ ಸಿಕ್ಕಿದೆ.

ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದ ಬಗ್ಗೆ ನಿರ್ಣಯಿಸದೇ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ಸೂಕ್ತ ಎಂದಿದೆ. ಹೀಗಾಗಿ ಅಂತಿಮವಾಗಿ ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಮಾನಿಸಬೇಕಿದೆ. ಇನ್ನು ಸಿಬಿಐ ಮತ್ತು ಯತ್ನಾಳ ಅರ್ಜಿಗಳನ್ನು ವಜಾ ಮಾಡಿದ ಹೈಕೋರ್ಟ್, ಅರ್ಜಿದಾರರು ಅಗತ್ಯವಿದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ. ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರಿಂಕೋರ್ಟ್‌ಗೆ ಹೋಗಲಿದೆ. ಸಿಬಿಐ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ತನಕ ಡಿಕೆ ಶಿವಕುಮಾರ್​ ನಿರಾಳರಾಗಿರಬಹುದು.

ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಎರಡೂ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​​ ವಿಭಾಗೀಯ ಪೀಠ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.

ಪ್ರಕರಣ ಹಿನ್ನೆಲೆ

ರಾಜ್ಯ ಸರ್ಕಾರದ ಸಮ್ಮತಿ ಪಡೆದು ಸಿಬಿಐ ಡಿಕೆ ಶಿವಕುಮಾರ್ ವಿರುದ್ಧ ಆರ್‌ಸಿ ನಂಬರ್ 10(ಎ)2020 ಎಫ್‌ಐಆರ್ ದಾಖಲಿಸಿದೆ. ಡಿ ಕೆ ಶಿವಕುಮಾರ್ 2013 ರಿಂದ 2018 ರ ಅವಧಿಯಲ್ಲಿ ಗಳಿಸಿದ ಆದಾಯ ಹಾಗೂ ವೆಚ್ಚದ ಮಾಹಿತಿ ಆಧರಿಸಿ 74.93 ಕೋಟಿ ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಈ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಈ ಹಂತದಲ್ಲಿ ಡಿಕೆ ಶಿವಕುಮಾರ್ ಸರ್ಕಾರದ ಸಮ್ಮತಿ ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಏಕಸದಸ್ಯ ಪೀಠ ರಿಟ್ ಅರ್ಜಿ ವಜಾಗೊಳಿಸಿತ್ತು. ನಂತರ ಡಿಕೆ ಶಿವಕುಮಾರ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದು ಲೋಕಾಯುಕ್ತ ಪೊಲೀಸರ ತನಿಖೆಗೆ ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ, ಯತ್ನಾಳ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

Source : https://tv9kannada.com/karnataka/karnataka-hc-rejects-bjp-mla-basangouda-patil-yatnal-and-cbi-plea-to-allow-probe-against-dk-shivakumar-in-illegal-assets-case-news-in-kannada-rbj-892643.html

Leave a Reply

Your email address will not be published. Required fields are marked *