ಪಾದಯಾತ್ರೆ ಮೂಲಕ ಬೆಟ್ಟ ಹತ್ತುವ ಭಕ್ತರಿಗೆ ಪ್ರಮುಖ ಸೂಚನೆಯನ್ನು ಟಿಟಿಡಿ ನೀಡಿದೆ. ಮಕ್ಕಳೊಂದಿಗೆ ಬೆಟ್ಟ ಹತ್ತಲು ಸಮಯ ನಿಗದಿ ಮಾಡಿದ ಟಿಟಿಡಿ.

ತಿರುಪತಿ : ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿ ದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗೆ ಬರುವವರಲ್ಲಿ ಸಾವಿರಾರು ಮಂದಿ ಬೆಟ್ಟವನ್ನು ಪಾದಯಾತ್ರೆ ಮೂಲಕ ಹತ್ತುತ್ತಾರೆ. ಹೀಗೆ ಪಾದಯಾತ್ರೆ ಮೂಲಕ ಬೆಟ್ಟ ಹತ್ತುವ ಭಕ್ತರಿಗೆ ಪ್ರಮುಖ ಸೂಚನೆಯನ್ನು ಟಿಟಿಡಿ ನೀಡಿದೆ. ಮಕ್ಕಳೊಂದಿಗೆ ಟ್ರೆಕ್ಕಿಂಗ್ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪೋಷಕರನ್ನು ಒತ್ತಾಯಿಸಿದೆ.
ಮಕ್ಕಳೊಂದಿಗೆ ಬೆಟ್ಟ ಹತ್ತಲು ಸಮಯ ನಿಗದಿ :
ಅಲ್ಲದೆ, “15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಯಾತ್ರಾರ್ಥಿಗಳು ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರ ನಡುವೆ ಮಾತ್ರ ಚಾರಣ ಮಾಡಬಹುದು” ಎಂದು ಆಡಳಿತ ತಿಳಿಸಿದೆ. ಮತ್ತೊಂದು ಪ್ರಮುಖ ನಿರ್ಧಾರದಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ನಿರ್ಬಂಧಿಸಲಾಗಿದೆ.
ಇಂದು ಸಂಜೆ ನಡೆಯಲಿದೆ ಉನ್ನತ ಮಟ್ಟದ ಸಭೆ :
ಟಿಟಿಡಿ ಅಧ್ಯಕ್ಷ ಶ್ರೀ ಬಿ ಕರುಣಾಕರ ರೆಡ್ಡಿ ಅವರು ಪಾದಚಾರಿ ಮಾರ್ಗಗಳು ಮತ್ತು ಘಾಟ್ ರಸ್ತೆಗಳಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಸಂಜೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ದಾಳಿ ಮಾಡಿದ ಚಿರತೆ ಸೆರೆ :
ಇನ್ನು ತಿರುಮಲ ದೇವಸ್ಥಾನದ ಬಳಿ ಆರು ವರ್ಷದ ಬಾಲಕಿಯ ಮೇಲೆ ದಾಳಿ ನಡೆಸಿ ಕೊಂದ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಇಲ್ಲಿನ ಪೊಲೀಸರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಶನಿವಾರ ರಾತ್ರಿ ಐದು ಸ್ಥಳಗಳಲ್ಲಿ ಚಿರತೆ ಚಲನವಲನ ದಾಖಲಾಗಿದ್ದು, ಅರಣ್ಯಾಧಿಕಾರಿಗಳು ಬೋನು ಹಾಕಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶದಲ್ಲಿ ಸುಮಾರು ಹನ್ನೆರಡು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಲಕ್ಷಿತಾ ತನ್ನ ಪೋಷಕರೊಂದಿಗೆ ಬೆಟ್ಟಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ತಿರುಪತಿಯ ಬೆಟ್ಟದ ದೇಗುಲಕ್ಕೆ ಹೋಗುವ ಪಾದಚಾರಿ ಮಾರ್ಗದಲ್ಲಿ ಮತ್ತೊಂದು ದೇವಸ್ಥಾನದ ಬಳಿಯ ಪೊದೆ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಪಾದಯಾತ್ರಿಕರಿಗೆ ಬಿಗಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ 500 ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ ನಿರ್ಧರಿಸಿದೆ.