ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಇದೀಗ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ನೇರ ಸಂಘರ್ಷಕ್ಕೆ ಕಾರಣವಾಗಿದೆ. ಈ ಪ್ರಕ್ರಿಯೆಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ಬಂಗಾಳವನ್ನೇ ಗುರಿಯಾಗಿಸಲಾಗಿದೆಯೇ? ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರಿದ್ದ ಪೀಠದ ಮುಂದೆ ವಾದ ಮಂಡಿಸಿದ ಮಮತಾ ಬ್ಯಾನರ್ಜಿ, ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ರಾಜ್ಯವನ್ನು ಮಾತ್ರ ಪ್ರತ್ಯೇಕವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದರು. “ಈಶಾನ್ಯದ ಅಸ್ಸಾಂ ಅಥವಾ ಇತರ ರಾಜ್ಯಗಳಲ್ಲಿ ಜಾರಿ ಮಾಡದ ಈ ಪ್ರಕ್ರಿಯೆಯನ್ನು ಬಂಗಾಳದಲ್ಲಿ ಮಾತ್ರ ಏಕೆ ಹೇರಲಾಗುತ್ತಿದೆ? ಇದು ರಾಜ್ಯದ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವ ಮತ್ತು ಅವರನ್ನು ‘ಬುಲ್ಡೋಜರ್’ ಮಾಡುವ ತಂತ್ರವಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಒತ್ತಡದಿಂದ 150 ಸಾವು: ಸಿಎಂ ಆರೋಪ ಚುನಾವಣಾ ಪ್ರಕ್ರಿಯೆಯ ಒತ್ತಡವು ಎಷ್ಟರಮಟ್ಟಿಗೆ ಇದೆ ಎಂದರೆ, ಈವರೆಗೆ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ನ್ಯಾಯಾಲಯದ ಗಮನಕ್ಕೆ ತಂದರು. ಮುಖ್ಯ ಚುನಾವಣಾ ಅಧಿಕಾರಿಯವರ ಕಠಿಣ ನಿರ್ದೇಶನಗಳಿಂದ ಉಂಟಾದ ತೀವ್ರ ಒತ್ತಡವೇ ಈ ಸಾವುಗಳಿಗೆ ಕಾರಣವಾಗಿದ್ದು, ಮೃತಪಟ್ಟವರಲ್ಲಿ ಬೂತ್ ಮಟ್ಟದ ಅಧಿಕಾರಿಗಳೂ ಸೇರಿದ್ದಾರೆ ಎಂದು ಅವರು ಉಲ್ಲೇಖಿಸಿದರು.
58 ಲಕ್ಷ ಹೆಸರುಗಳ ಅಳಿಸುವಿಕೆ ಪರಿಷ್ಕರಣೆಯ ಹೆಸರಿನಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ದೂರಿರುವ ಅವರು, ಎಸ್‌ಐಆರ್‌ನ ಮೊದಲ ಹಂತದಲ್ಲೇ ಸುಮಾರು 58 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು. ಸ್ಥಳೀಯ ಚುನಾವಣಾ ಸಿಬ್ಬಂದಿಯನ್ನು ಕಡೆಗಣಿಸಿ, ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಕರೆತಂದ ‘ಸೂಕ್ಷ್ಮ ವೀಕ್ಷಕರು’ (Micro Observers) ಈ ಅಳಿಸುವಿಕೆ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ. ನಿವಾಸ ಪ್ರಮಾಣಪತ್ರಗಳು ಮತ್ತು ಸರ್ಕಾರದ ಅಧಿಕೃತ ದಾಖಲೆಗಳಿದ್ದರೂ ಅವುಗಳನ್ನು ಮಾನ್ಯ ಮಾಡುತ್ತಿಲ್ಲ ಎಂದು ಅವರು ದೂರಿದರು. ಅಲ್ಲದೆ, ಫಾರ್ಮ್-6 ಅಡಿಯಲ್ಲಿ ಮೇಲ್ಮನವಿ ಸಲ್ಲಿಸಲೂ ಅವಕಾಶ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ವಾಟ್ಸಾಪ್ ಆಯೋಗ’ ಎಂದು ವ್ಯಂಗ್ಯ ತಮ್ಮ ವಾದದ ವೇಳೆ ಆಯೋಗದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ ಮಮತಾ ಬ್ಯಾನರ್ಜಿ, ಭಾರತದ ಚುನಾವಣಾ ಆಯೋಗವನ್ನು “ವಾಟ್ಸಾಪ್ ಆಯೋಗ” ಎಂದು ಜರೆದರು.
ಫೆಬ್ರವರಿ 10ಕ್ಕೆ ವಿಚಾರಣೆ ಮುಂದೂಡಿಕೆ ಸಿಎಂ ಮಮತಾ ಬ್ಯಾನರ್ಜಿ ಅವರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಭಾರತದ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಫೆಬ್ರವರಿ 10ರೊಳಗೆ ಆಯೋಗವು ತನ್ನ ಉತ್ತರವನ್ನು ಸಲ್ಲಿಸಬೇಕಿದ್ದು, ಅಂದು ಮುಂದಿನ ವಿಚಾರಣೆ ನಡೆಯಲಿದೆ.