IND vs AUS 2nd ODI: ಇಂದು ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ: ರೋಹಿತ್ ಕಮ್​ಬ್ಯಾಕ್: ಸರಣಿ ಕೈವಶದತ್ತ ಟೀಮ್ ಇಂಡಿಯಾ ಚಿತ್ತ

Rohit Sharma

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವಶಪಡಿಸಿಕೊಂಡ ಬಳಿಕ ಭಾರತ (India vs Australia) ಇದೀಗ ಏಕದಿನ ಸರಣಿ ಆಡುತ್ತಿದೆ. ಈಗಾಗಲೇ ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್​ಗಳ ಜಯ ಸಾಧಿಸಿ 1-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು ವಿಶಾಖಪಟ್ಟಣಂನ (Visakhapatnam) ಡಾ. ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ಇಂಡೋ-ಆಸೀಸ್ ನಡುವೆ ಎರಡನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಕಾಂಗರೂ ಪಡೆಗೆ ಈ ಮ್ಯಾಚ್ ಮುಖ್ಯವಾಗಿದ್ದು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಇತ್ತ ಟೀಮ್ ಇಂಡಿಯಾ (Team India) ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ಹೀಗಾಗಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ರೋಹಿತ್ ಶರ್ಮಾ ಕಮ್​ಬ್ಯಾಕ್:

ವೈಯಕ್ತಿಕ ಕಾರಣಗಳಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಟೀಮ್ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಮುಂಬೈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಸ್ಥಾನ ಬಿಟ್ಟುಕೊಡಲಿದ್ದಾರೆ. ಹಿಟ್​ಮ್ಯಾನ್ ಆಗಮನ ಆಗಿರುವ ಕಾರಣ ತಂಡದಲ್ಲಿ ಒಂದು ಬದಲಾವಣೆ ಖಚಿತವಾಗಿದೆ. ಕೆಎಲ್ ರಾಹುಲ್ ಅದ್ಭುತ ಫಾರ್ಮ್​ಗೆ ಬಂದಿರುವ ಕಾರಣ ಇವರನ್ನು ಹೊರಗಿಡುವುದು ಅನುಮಾನ. ಇವರ ಬದಲು ಮೊದಲ ಪಂದ್ಯದಲ್ಲಿ 3 ರನ್​ಗೆ ಔಟಾಗಿ ವೈಫಲ್ಯ ಅನುಭವಿಸಿದ ಇಶಾನ್ ಕಿಶನ್ ಬೆಂಚ್ ಕಾಯಬೇಕಾಗಬಹುದು.

ಉಳಿದಂತೆ ತಂಡದಲ್ಲಿ ಬದಲಾವಣೆ ಅನುಮಾನ. ಓಪನರ್​ಗಳಾಗಿ ರೋಹಿತ್ ಜೊತೆ ಶುಭ್​ಮನ್ ಗಿಲ್ ಕಣಕ್ಕಿಳಿಯಲಿದ್ದಾರೆ. ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಆಡಿದರೆ ಬಳಿಕ ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಆಡಲಿದ್ದಾರೆ. ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ಅನುಮಾನ ಎಂದು ಹೇಳಬಹುದು. ಶಾರ್ದೂಲ್ ಥಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಬಹುದು.

‘ಪ್ರತಿಯೊಂದು ಕಷ್ಟವನ್ನು ದಾಟಿ’….; ಪತಿ ರಾಹುಲ್ ಬಗ್ಗೆ ಅಥಿಯಾ ಶೆಟ್ಟಿ ಹೇಳಿದ್ದೇನು ಗೊತ್ತಾ?

ಇತ್ತ ಆಸ್ಟ್ರೇಲಿಯಾ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಆಗಿರುವುದರಿಂದ ದೊಡ್ಡ ಯೋಜನೆಯೊಂದಿಗೆ ಕಣಕ್ಕಿಳಿಯಬೇಕು. ಮಿಚೆಲ್ ಮಾರ್ಷ್ ಉತ್ತಮ ಲಯದಲ್ಲಿದ್ದಾರೆ ಬಿಟ್ಟರೆ ಉಳಿದವರು ಫಾರ್ಮ್ ಕಂಡುಕೊಳ್ಳಬೇಕಿದೆ. ಟ್ರವಿಸ್ ಹೆಡ್, ನಾಯಕ ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್, ಕ್ಯಾಮ್ರೋನ್ ಗ್ರೀನ್, ಗ್ಲೆನ್ ಮ್ಯಾಕ್ಸ್​ವೆಲ್ ಅಬ್ಬರಿಸಬೇಕಿದೆ. ಹೀಗಾದಲ್ಲಿ ಮಾತ್ರ ಆಸ್ಟ್ರೇಲಿಯಾಕ್ಕೆ ಗೆಲುವು ಸಾಧ್ಯ. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್‌, ಮಾರ್ಕಸ್ ಸ್ಟೋಯಿನಿಸ್ ಮತ್ತು ಸ್ಪಿನ್ನರ್ ಆಯಡಂ ಜಂಪಾ ಅವರು ರೋಹಿತ್ ಬಳಗಕ್ಕೆ ಸವಾಲೊಡ್ಡಬಲ್ಲರು.

ಪಿಚ್ ಹೇಗಿದೆ?:

ವಿಶಾಖಪಟ್ಟಣದ ವೈಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ಗೆ ಎರಡಕ್ಕೂ ಸಮಾನವಾಗಿ ನೆರವು ನೀಡಲಿದೆ. ಬೌಲಿಂಗ್​ನಲ್ಲಿ ಇಲ್ಲಿ ಸ್ಪಿನ್​ ಹೆಚ್ಚು ಪರಿಣಾಮಕಾರಿಯಾಗಲಿದೆ. ಬೌಲರ್‌ಗಳು ಸ್ವಲ್ಪ ಲಯ ತಪ್ಪಿದರೂ ದುಬಾರಿಯಾಗುವುದು ಖಚಿತ. ವಿಶೇಷ ಎಂದರೆ 2019ರ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿ ಏಕದಿನ ಪಂದ್ಯ ನಡೆಯಲಿದೆ. 2010ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಅದರಲ್ಲಿ ಭಾರತ ಜಯಿಸಿತ್ತು. ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಮೈಕೆಲ್ ಕ್ಲಾರ್ಕ್ ಶತಕ ಗಳಿಸಿದ್ದರು. ಒದೇ ಮೈದಾನದಲ್ಲಿ ರೋಹಿತ್​ ಶರ್ಮಾ ಮತ್ತು ಕೆ.ಎಲ್​. ರಾಹುಲ್​ ಕೂಡ ಸೆಂಚುರಿ ಸಿಡಿಸಿದ್ದಾರೆ. ಭಾರತ ತಂಡ ಇಲ್ಲಿ ಇದುವರೆಗೆ 10 ಏಕದಿನ ಪಂದ್ಯವನ್ನಾಡಿದೆ. ಇದರಲ್ಲಿ 7 ಗೆಲುವು, ಒಂದು ಸೋಲು ಕಂಡಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾದರೆ ಇನ್ನೊಂದು ಪಂದ್ಯ ಟೈ ಆಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದ್ದು, ಟಾಸ್ 1 ಗಂಟೆಗೆ ನಡೆಯಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿದೆ. ಅಲ್ಲದೆ, ಡಿಡಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಕೂಡ ನೀವು ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಥಾಕೂರ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್, ಜಯದೇವ್ ಉನಾದ್ಕಟ್,

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಜೈ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನಿಸ್, ಆಯಡಂ ಜಂಪಾ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/rohit-sharma-return-team-india-will-aim-to-pocket-series-vs-australia-in-the-second-odi-at-visakhapatnam-vb-au48-538935.html

Leave a Reply

Your email address will not be published. Required fields are marked *