
India vs Australia 5th Test: ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಟೀಮ್ ಇಂಡಿಯಾ ವೇಗಿಗಳು ಪರಾಕ್ರಮ ಮೆರೆಯುತ್ತಿದ್ದಾರೆ. ಅದರಲ್ಲೂ ಮೊಹಮ್ಮದ್ ಸಿರಾಜ್ 3 ಎಸೆತಗಳಲ್ಲಿ ಆಸ್ಟ್ರೇಲಿಯಾ ತಂಡದ ಇಬ್ಬರು ಡೇಂಜರಸ್ ಬ್ಯಾಟರ್ಗಳಾದ ಸ್ಯಾಮ್ ಕೊನ್ಸ್ಟಾಸ್ ಹಾಗೂ ಟ್ರಾವಿಸ್ ಹೆಡ್ ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ವಿಕೆಟ್ಗಳೊಂದಿಗೆ ಭಾರತೀಯ ಬೌಲರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದು, ಈ ಮೂಲಕ 2ನೇ ದಿನದಾಟದ ಆರಂಭದಲ್ಲೇ ಆಸ್ಟ್ರೇಲಿಯಾ ಬ್ಯಾಟರ್ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಡ್ನಿಯ ಎಸ್ಸಿಜಿ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದ ಆರಂಭದಲ್ಲೇ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ. ಆಸ್ಟ್ರೇಲಿಯಾ ಇನಿಂಗ್ಸ್ನ 12ನೇ ಓವರ್ ಎಸೆದ ಸಿರಾಜ್ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಕಬಳಿಸಿ ಟೀಮ್ ಇಂಡಿಯಾಗೆ ಆರಂಭಿಕ ಯಶಸ್ಸು ತಂದುಕೊಟ್ಟಿದ್ದಾರೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ 185 ರನ್ಗಳಿಸಿ ಭಾರತ ತಂಡವು ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದ್ದರು.
ಮೊದಲ ದಿನದಾಟದ ಕೊನೆಯ ಓವರ್ನ ಅಂತಿಮ ಎಸೆತದಲ್ಲಿ ಉಸ್ಮಾನ್ ಖ್ವಾಜಾ (2) ವಿಕೆಟ್ ಕಬಳಿಸಿ ಬುಮ್ರಾ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. 9 ರನ್ಗಳೊಂದಿಗೆ ಮೊದಲ ದಿನದಾಟ ಅಂತ್ಯಗೊಳಿಸಿದ ಆಸ್ಟ್ರೇಲಿಯಾ ಪರ ದ್ವಿತೀಯ ದಿನದಾಟದಲ್ಲಿ ಸ್ಯಾಮ್ ಕೊನ್ಸ್ಟಾಸ್ ಹಾಗೂ ಮಾರ್ನಸ್ ಲಾಬುಶೇನ್ ಕಣಕ್ಕಿಳಿದರು.
ಪಂದ್ಯದ 7ನೇ ಓವರ್ನ 2ನೇ ಎಸೆತದಲ್ಲಿ ಲಾಬುಶೇನ್ (2) ವಿಕೆಟ್ ಕಬಳಿಸಿ ಜಸ್ಪ್ರೀತ್ ಬುಮ್ರಾ ಆಸೀಸ್ ಪಡೆಗೆ ಮತ್ತೆ ಆಘಾತ ನೀಡಿದರು. ಮತ್ತೊಂದು ತುದಿಯಲ್ಲಿ ಕರಾರುವಾಕ್ ದಾಳಿ ಸಂಘಟಿಸುವ ಮೂಲಕ ಮೊಹಮ್ಮದ್ ಸಿರಾಜ್ ಕೂಡ ಆಸ್ಟ್ರೇಲಿಯಾ ಬ್ಯಾಟರ್ಗಳನ್ನು ಕಾಡಿದರು.
ಸಿರಾಜ್ ಎಸೆದ 12ನೇ ಓವರ್ನ 2ನೇ ಎಸೆತದಲ್ಲಿ ಸ್ಯಾಮ್ ಕೊನ್ಸ್ಟಾಸ್ (23) ಯಶಸ್ವಿ ಜೈಸ್ವಾಲ್ಗೆ ಕ್ಯಾಚಿತ್ತರು. ಇದರ ಬೆನ್ನಲ್ಲೇ ಟ್ರಾವಿಸ್ (4) ವಿಕೆಟ್ ಕಬಳಿಸುವ ಮೂಲಕ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ತಂಡಕ್ಕೆ ಆಘಾತದ ಮೇಲೆ ಆಘಾತ ನೀಡಿದರು.
ಮೊಹಮ್ಮದ್ ಸಿರಾಜ್ ಭರ್ಜರಿ ಬೌಲಿಂಗ್ ವಿಡಿಯೋ
ಎರಡನೇ ದಿನದಾಟದ ಆರಂಭದಲ್ಲೇ ಸಿಕ್ಕ ಮೂರು ಯಶಸ್ಸುಗಳೊಂದಿಗೆ ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್ ಮುಂದುವರೆಸಿದ್ದಾರೆ. ಅಲ್ಲದೆ 15 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡವು 4 ವಿಕೆಟ್ ಕಳೆದುಕೊಂಡು 53 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಬ್ಯೂ ವೆಬ್ಸ್ಟರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಸ್ಯಾಮ್ ಕೊನ್ಸ್ಟಾಸ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಬ್ಯೂ ವೆಬ್ಸ್ಟರ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಸ್ಕಾಟ್ ಬೋಲ್ಯಾಂಡ್.
ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಶುಭ್ಮನ್ ಗಿಲ್ , ವಿರಾಟ್ ಕೊಹ್ಲಿ , ರಿಷಬ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ನಿತೀಶ್ ಕುಮಾರ್ ರೆಡ್ಡಿ , ವಾಷಿಂಗ್ಟನ್ ಸುಂದರ್ , ಜಸ್ಪ್ರೀತ್ ಬುಮ್ರಾ (ನಾಯಕ) , ಪ್ರಸಿದ್ಧ್ ಕೃಷ್ಣ , ಮೊಹಮ್ಮದ್ ಸಿರಾಜ್.