ಚೆನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಬಾಂಗ್ಲಾದೇಶ್ ತಂಡವು 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿದ್ದ ವೇಳೆ ಮಂದ ಬೆಳಕಿನ ಕಾರಣ ಮೂರನೇ ದಿನದಾಟವನ್ನು ಅಂತ್ಯಗೊಳಿಸಲಾಯಿತು.ಮೂರನೇ ದಿನದಾಟದ ಹೈಲೈಟ್ಸ್ ಇಲ್ಲಿದೆ.

ಚೆನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ (113) ಶತಕ ಬಾರಿಸಿದರೆ, ರವೀಂದ್ರ ಜಡೇಜಾ (86) ಹಾಗೂ ಯಶಸ್ವಿ ಜೈಸ್ವಾಲ್ (56) ಅರ್ಧಶತಕ ಸಿಡಿಸಿದರು. ಈ ಮೂಲಕ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ ನಲ್ಲಿ 371 ರನ್ ಕಲೆಹಾಕಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವು ಭಾರತೀಯ ವೇಗಿಗಳ ಸಾಂಘಿಕ ದಾಳಿಗೆ ತತ್ತರಿಸಿತು. ಪರಿಣಾಮ ಕೇವಲ 147 ರನ್ ಗಳಿಗೆ ಆಲೌಟ್ ಆಗಿ 227 ರನ್ ಗಳ ಹಿನ್ನಡೆ ಅನುಭವಿಸಿತು.
ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಭಾರತವು ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ ಹಾಗೂ ರಿಷತ್ ಪಂತ್ ತಂಡಕ್ಕೆ ಆಸರೆಯಾಗಿ ನಿಂತರು. ಇದರ ನಡುವ ರಿಷತ್ ಪಂತ್ 126 ಎಸೆತಗಳಲ್ಲಿ ಶತಕ ಪೂರೈಸಿದರೆ, ಶುಭ್ಮನ್ ಗಿಲ್ (119) 5ನೇ ಟೆಸ್ಟ್ ಸೆಂಚುರಿ ಸಿಡಿಸಿದರು. ಈ ಮೂಲಕ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 287 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.
515 ರನ್ ಗಳ ಕಠಿಣ ಗುರಿ
ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ನಲ್ಲಿ 515 ರನ್ ಗಳ ಗುರಿ ಪಡೆದ ಬಾಂಗ್ಲಾದೇಶ್ ತಂಡಕ್ಕೆ ಝಾಕಿರ್ ಹಸನ್ ಹಾಗೂ ಶಾದ್ಮನ್ ಇಸ್ಲಾಂ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ ಗೆ 62 ರನ್ ಪೇರಿಸಿದ ಬಳಿಕ ಝಾಕಿರ್ (33) ಬುಮ್ರಾ ಎಸೆತದಲ್ಲಿ ಔಟಾದರು. ಇದರ ಬೆನ್ನಲ್ಲೇ ದಾಳಿಗಿಳಿದ ರವಿಚಂದ್ರನ್ ಅಶ್ವಿನ್ ಶಾದ್ಮನ್ (35), ಮೊಮಿನುಲ್ ಹಕ್ (13) ಹಾಗೂ ಮುಶ್ಫಿಕುರ್ ರಹೀಮ್ (13) ವಿಕೆಟ್ ಪಡೆದರು. ಇನ್ನು ಬಾಂಗ್ಲಾದೇಶ್ ತಂಡವು 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿದ್ದ ವೇಳೆ ಮಂದ ಬೆಳಕಿನ ಕಾರಣ ಮೂರನೇ ದಿನದಾಟವನ್ನು ಅಂತ್ಯಗೊಳಿಸಲಾಯಿತು.
ಇನ್ನೆರಡು ದಿನದಾಟಗಳು ಉಳಿದಿದ್ದು, ಬಾಂಗ್ಲಾದೇಶ್ ತಂಡಕ್ಕೆ ಗೆಲ್ಲಲು 357 ರನ್ ಗಳ ಅವಶ್ಯಕತೆ ಇದೆ. ಅತ್ತ ಟೀಮ್ ಇಂಡಿಯಾ 6 ವಿಕೆಟ್ ಕಬಳಿಸಿದರೆ ಜಯ ತನ್ನದಾಗಿಸಿಕೊಳ್ಳಬಹುದು.